Belagavi News In Kannada | News Belgaum

ಪಶು ಆಹಾರ ಮಾರಾಟ ದರ ಕಡಿಮೆ ಮಾಡಲು ಪರಿಶೀಲನೆ: ಸಚಿವ ಕೆ.ವೆಂಕಟೇಶ

ಬೆಳಗಾವಿ ಸುವರ್ಣ ಸೌಧ: ಪಶು ಆಹಾರಕ್ಕೆ ಬಳಸುವ ಕಚ್ಚಾ ಪದಾರ್ಥಗಳ ದರ ಲಭ್ಯತೆ ಹಾಗೂ ಸಂಸ್ಥೆಯ ಆರ್ಥಿಕ ಪರಿಸ್ಥಿತಿಯನ್ನಾಧರಿಸಿ ಪಶು ಆಹಾರ ಮಾರಾಟ ದರವನ್ನು ಕಡಿಮೆ ಮಾಡಲು ಪರಿಶೀಲನೆ ಮಾಡಲಾಗುವುದು ಎಂದು ಪಶು ಸಂಗೋಪನೆ ಹಾಗೂ ರೇಷ್ಮೇ ಸಚಿವರಾದ ಕೆ.ವೆಂಕಟೇಶ ಅವರು ಹೇಳಿದರು.
ವಿಧಾನ ಪರಿಷತನಲ್ಲಿ ಡಿಸೆಂಬರ್ 6ರಂದು ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಕೆ.ಹರೀಶ್ ಕುಮಾರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಶು ಆಹಾರ ಮಾರಾಟ ದರವನ್ನು ಉದ್ದೇಶ ಪೂರ್ವಕವಾಗಿ ಹೆಚ್ಚಳ ಮಾಡಿರುವುದಿಲ್ಲ. ಆಹಾರ ಬೆಲೆ ಏರಿಕೆ ಕಾರಣ ದರ ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಸಾಮಾನ್ಯವಾಗಿ ಪ್ರತಿ ಲೀಟರ್ ಹಾಲು ಉತ್ಪಾದನೆಗೆ ಸರಾಸರಿ 250 ಗ್ರಾಂ ಪಶು ಆಹಾರವನ್ನು ಬಳಸಬೇಕಾಗುತ್ತದೆ. ರಾಜ್ಯ ಸರ್ಕಾರವು ಹಾಲು ಉತ್ಪಾದಕರನ್ನು ಉತ್ತೇಜಿಸಲು 2023ರ ಅಕ್ಟೋಬರ್ ಮಾಹೆಯಿಂದ ಪ್ರತಿ ಲೀಟರ್ ಹಾಲು ಮಾರಾಟ ದರವನ್ನು ರೂ.3ಗಳಿಗೆ ಹೆಚ್ಚಿಸಿದ್ದು ಈ ಮೊತ್ತವನ್ನು ಉತ್ಪಾದಕರಿಗೆ ನೇರವಾಗಿ ಪಾವತಿಸಲು ಕ್ರಮವಿಡಲಾಗಿದೆ. ರೈತರಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಲು ಉತ್ಪಾದನೆಗೆ ನೀಡುವ ಪ್ರೋತ್ಸಾಹ ಧನವನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ವಹಿಸುವುದಾಗಿ ಅವರು ಹೇಳಿದರು.
ಒಂದೂವರೆ ವರ್ಷದಲ್ಲಿ ಎರಡು ಬಾರಿಗೆ ಪಶು ಆಹಾರ ಮಾರಾಟ ದರ ಹೆಚ್ಚಿಗೆ ಮಾಡಿದ್ದರಿಂದ ಇದು ರೈತರಿಗೆ ಹೊರೆಯಾಗಿ ಪರಿಣಮಿಸುತ್ತಿದೆ ಎಂದು ಸದಸ್ಯರು ಪ್ರಶ್ನಿಸಿದರು. ಹಾಲಿಗೆ ಪ್ರೋತ್ಸಾಹ ಧನ ಹೆಚ್ಚಳ ಮಾಡಿದಲ್ಲಿ ರೈತರ ಹಿತದೃಷ್ಟಿಯಿಂದ ನಾವು ಬೆಂಬಲ ಕೊಡುವುದಾಗಿ ಸದಸ್ಯೆ ತೇಜಸ್ವಿನಿ ಅವರು ತಿಳಿಸಿದರು.//////