Belagavi News In Kannada | News Belgaum

ಸ್ಪೀಕರ್ ವಿರುದ್ಧ ಸವದಿ ಕೆಂಡಾಮಂಡಲ

ಬೆಳಗಾವಿ: ಬೆಳಗಾವಿ ವಿಧಾನಸಭೆ ಕಲಾಪದ ವೇಳೆ ಸ್ಪೀಕರ್ ಯುಟಿ ಖಾದರ್ ವಿರುದ್ಧ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಬೆಳಗಾವಿಯಲ್ಲಿ ಅಧಿವೇಶನ ಕರೆದಿದ್ದೀರಿ. ಆದರೆ ಬೆಂಗಳೂರು ಸಮಸ್ಯೆ ಬಗ್ಗೆ ಮಾತನಾಡಿದ್ರೆ ಹೇಗೆ? ಇಲ್ಲಿ ಅಧಿವೇಶನ ಕರೆದಿದ್ದು ಈ ಭಾಗದ ಕುರಿತು ಚರ್ಚೆ ಮಾಡೋದಕ್ಕೆ ಅಲ್ಲವೇ? ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರೈತರಿಗೆ ಅನ್ಯಾಯ ಆಗುತ್ತಿದೆ. ಕಬ್ಬು ಬೆಳೆಗೆ ಬೆಲೆ ಸಿಗುತ್ತಿಲ್ಲ, ತೂಕದಲ್ಲಿ ವ್ಯತ್ಯಾಸ ಆಗುತ್ತಿದೆ. ಅದು ಬಿಟ್ಟು ಕೊಬ್ಬರಿ ಬೆಲೆ ಬಗ್ಗೆ ಚರ್ಚೆಗೆ ಅವಕಾಶ ಕೊಡ್ತಿದ್ದೀರಿ ಎಂದು ಗರಂ ಆದರು.
ಈ ವೇಳೆ ಸ್ಪೀಕರ್ ಖಾದರ್ ಉತ್ತರ ನೀಡಿ, ಈ‌ ಸದನ ಕರೆದಿದ್ದು ರಾಜ್ಯದ ಸಮಸ್ಯೆಗಳ ಜೊತೆಗೆ ಉತ್ತರ ಕರ್ನಾಟಕ ಬಗ್ಗೆ ಚರ್ಚಿಸಲು. ಎಲ್ಲರ ಸಹಕಾರ ಇದ್ದರೆ ಬೇಗ, ಬೇಗ ಚರ್ಚೆಗೆ ಅವಕಾಶ ಕೊಡಬಹುದು. ಈಗಾಗಲೇ ಬರಗಾಲದ ಚರ್ಚೆ ಆರಂಭವಾಗಿದೆ. ಅದು ಮುಗಿದ ಬಳಿಕ ಉತ್ತರ ಕರ್ನಾಟಕದ ಸಮಸ್ಯೆ ಕುರಿತು ಚರ್ಚಿಸೋಣ ಎಂದು ಸ್ಪೀಕರ್ ಹೇಳಿದರು.
ಈ ವೇಳೆ ಎದ್ದು ನಿಂತ ಶಾಸಕ ಕೋನರೆಡ್ಡಿ, ಮಹದಾಯಿ ಮತ್ತು ಕೃಷ್ಣ ವಿಚಾರ ಚರ್ಚೆ ಮಾಡಲು ನೋಟಿಸ್ ಕೊಟ್ಟಿದ್ದೇವೆ. ಹತ್ತು ಶಾಸಕರು ಸಹಿ ಮಾಡಿ ಕೊಟ್ಟರೂ ನೀವು ಪರಿಗಣಿಸಿಲ್ಲ ಎಂದು ಕೋನರೆಡ್ಡಿಯೂ ಅಸಮಾಧಾನ ವ್ಯಕ್ತಪಡಿಸಿದರು. ಆಗ ಒಮ್ಮೆಲೆ ಎಲ್ಲರನ್ನೂ ಮೆಚ್ಚಿಸಲು ದೇವರಾಗಬೇಕು. ಇದು ಮನುಷ್ಯರಿಂದ ಸಾಧ್ಯವಿಲ್ಲ. ಖಂಡಿತ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಹೇಳಿದರು.//////