Belagavi News In Kannada | News Belgaum

ಚಳಿಗಾಲ ಅಧಿವೇಶನದ ವೇಳೆ ನೇಕಾರರ ಬೃಹತ್‌ ಪ್ರತಿಭಟನೆ

ಬೆಳಗಾವಿ:  ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ನೇಕಾರ ಸೇವಾ ಸಂಘದಿಂದ ಸುವರ್ಣಸೌಧ ಸಮೀಪದ ಸುವರ್ಣ ಗಾರ್ಡನ್ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ರಾಜ್ಯಾದ್ಯಂತ ನೇಕಾರ ಮತ್ತು ನೇಕಾರಿಕೆ ಆರ್ಥಿಕ ಮುಗ್ಗಟ್ಟಿನಿಂದ ಮಾರುಕಟ್ಟೆಯ ಅಸ್ತಿರತೆಯಿಂದ  ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡದ ಕಾರಣ ಸರ್ಕಾರದ ಸಮರ್ಪಕವಾದ ಯೋಜನೆಗಳು ಕಟ್ಟಕಡೆಯ ನೇಕಾರರಿಗೆ ತಲುಪದೇ ಚಂಚಿತರಾಗಿದ್ದಾರೆ. ಅತಿವೃಷ್ಠಿ, ಅನಾವೃಷ್ಠಿ, ಜಿಎಸ್ಟಿ, ನೋಟ್‌ ಬಂದ್‌, ಲೌಕ್ಡೌನ್‌ ನಿಂದ ಔದ್ಯೋಗಿಕ, ಶೈಕ್ಷಣಿಕ, ಆರ್ಥಿಕ ಭದ್ರತೆಯೂ ಇಲ್ಲದಂತಾಗಿದೆ. ಇಂದು ನೇಕಾರಿಕೆಯಿಂದ ಲಕ್ಷಾಂತರ ಜನರು ಉದ್ಯೋಗ ತೊರೆದು ಹೋಗುತ್ತಿದ್ದು, ಸಮರ್ಪಕ ಯೋಜನೆಗಳು  ಸರ್ಕಾರದಿಂದ ಸಿಗದೆ  60 ಲಕ್ಷ ನೇಕಾರರಲ್ಲಿ ಕೇವಲ 10% ನೇಕಾರರು ಮಾತ್ರ ಈ ಉದ್ಯಮದಲ್ಲಿ ತೊಡಿಗಿಸಿಕೊಂಡಿದ್ದಾರೆ. ಮುಂದಿನ  ಕೆಲವು ವರ್ಷಗಳಲ್ಲಿ  ನೇಕಾರರೆ ಇಲ್ಲದ ಸ್ಥಿತಿ ನಿರ್ಮಾಣ ಆಗುವದರಲ್ಲಿ ಎರಡು ಮಾತಿಲ್ಲ ಎಂದು ಕಳವಳ ವ್ಯಕ್ತ ಪಡಿಸಿದರು.

ಕೂಡಲೇ ಸರ್ಕಾರ  ನೇಕಾರರ ಸಮಸ್ಯೆ ಗಳ ಕುರಿತು ಗಂಭೀರವಾಗಿ  ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು. ಸದ್ಯ ರಾಜ್ಯ ಸರಕಾರ ನೇಕಾರರ ಸಮುದಾಯದ ಬಗ್ಗೆ ತಾರತಮ್ಯ ಮಾಡುತ್ತಿದೆ. ರಾಜ್ಯ ಜವಳಿ ಇಲಾಖೆಯಿಂದ ನೇಕಾರರ ಕಲ್ಯಾಣವಾಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ನೇಕಾರರಿಗೆ ನೀಡಲಾಗಿರುವ ಸೌಲಭ್ಯವನ್ನು ರಾಜ್ಯದಲ್ಲೂ ನೀಡಬೇಕು. ಜತೆಗೆ ಮಹಾರಾಷ್ಟ್ರದಲ್ಲಿ ರಚನೆ ಮಾಡಲಾದ ಮಹಾಮಂಡಳ ರಾಜ್ಯದಲ್ಲಿ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 45 ಲಕ್ಷ ನೇಕಾರರು ಇದ್ದಾರೆ. ನೇಕಾರರನ್ನು ರಾಜಕೀಯ ಪಕ್ಷಗಳು ಮತಬ್ಯಾಂಕ್‌ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುತ್ತಿವೆ. ಅವರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಶೀಘ್ರವೇ ರಾಜ್ಯದ ಎಲ್ಲ ನೇಕಾರರ ಸಮಸ್ಯೆಗಳಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಎಚ್ಚರಿಕೆ ನೀಡಿದರು.


ಬೇಡಿಕೆಗಳು: ಕಟ್ಟಡ ಕಾರ್ಮಿಕ ಮಾದರಿಯಲ್ಲಿ ವೃತ್ತಿಪರ ನೇಕಾರರಿಗೂ ಕಾರ್ಮಿಕ ಸೌಲಭ್ಯಗಳನ್ನು ಒದಗಿಸುವುದು ಮತ್ತು ಕಾರ್ಮಿಕ ಸೌಲಭ್ಯಗಳನ್ನು ಒಳಗೊಂಡಂತೆ ಕಾರ್ಡಗಳನ್ನು ಹಂಚಿಕೆ ಮಾಡಬೇಕು, 20 ಎಚ್.ಪಿ.ವರೆಗೆ ವಿದ್ಯುತ್ ಸಂಪರ್ಕ ಹೊಂದಿರುವ ನೇಕಾರರಿಗೆ 500 ಯೂನಿಟ್ ಉಚಿತ ಒದಗಿಸಿ 500 ರಿಂದ ಹೆಚ್ಚುವರಿ ಬಳಕೆಯ ಯೂನಿಟ್‌ಗೆ 1.25 ರೂ. ಯುನಿಟ್‌ನಂತೆ ಬೇರೆ ಯಾವುದೇ ಚಾರ್ಜಗಳನ್ನು ವಿಧಿಸದೇ ವಿದ್ಯುತ್ ಒದಗಿಸಬೇಕು, ತಮಿಳುನಾಡಿನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಮೂಲಕ ಸರಕಾರದ ಅನೇಕ ಇಲಾಖೆಗಳಿಗೆ ಬಟ್ಟೆ ಒದಗಿಸಲು ವೃತ್ತಿಪರ ನೇಕಾರರಿಗೆ ನಿರಂತರ ಉದ್ಯೋಗ ಒದಗಿಸುವ ಯೋಜನೆಯ ಮಾದರಿಯಲ್ಲಿ ಕರ್ನಾಟಕದಲ್ಲೂ ಕೂಡ ಜಾರಿ ಮಾಡಬೇಕು,  ಕೆ.ಎಚ್.ಡಿ.ಸಿ. ನಿಗಮದ ಕೈಮಗ್ಗ ನೇಕಾರರಿಗೆ ಕೈಗೆ ಕೆಲಸವಿಲ್ಲದೆ ಕೂಲಿ ಇಲ್ಲದೆ ಸಾಲದ ಹೊರೆಯಲ್ಲಿ ನಿಗಮವು ಮುಚ್ಚುವ ಸ್ಥಿತಿಯಲ್ಲಿದ್ದು, ಇದನ್ನು ಪುನರುಜ್ಜಿವನಗೊಳಿಸಿ ನಿರಂತರ ನೇಕಾರಿಕೆ ಸಿಗುವಂತೆ ವ್ಯವಸ್ಥೆ ಮಾಡಬೇಕು, ಸಹಕಾರಿ ಸಂಘ-ಸಂಸ್ಥೆಗಳ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳನ್ನೊಳಗೊಂಡಂತೆ ಸಂಪೂರ್ಣ ಸಾಲ ಮನ್ನಾ ಮಾಡಬೇಕು. 5. ಸಾಲದ ಹೊರೆಯಿಂದ ರಾಜ್ಯದಲ್ಲಿ 47 ಜನ ನೇಕಾರರ ಆತ್ಮಹತ್ಯೆಗಳಾಗಿದ್ದು ಪ್ರತಿ ಕುಟುಂಬಕ್ಕೂ 10 ಲಕ್ಷ ರೂ.ಗಳ ಪರಿಹಾರ ಒದಗಿಸಬೇಕು. ಇವುಗಳು ಮುಂದುವರೆಯಬಾರದೆಂದರೆ ಸಂಪೂರ್ಣ ಸಾಲ ಮನ್ನಾ ಆಗಲೇಬೇಕು. 6. ವೃತ್ತಿಪರ ನೇಕಾರರ 5-6 ತಿಂಗಳಿನ ಬಾಕಿ ವಿದ್ಯುತ್ ಬಿಲ್‌ನ್ನು ಸರ್ಕಾರವೆ ಭರಿಸಿಕೊಳ್ಳಬೇಕು, 2 ವರ್ಷಗಳಿಂದ ಸಹಕಾರಿ ಸಂಘ-ಸಂಸ್ಥೆಗಳ ಬಡ್ಡಿ ಸಹಾಯಧನ ಬಾರದೇ ಇದ್ದು, ನೇಕಾರರು ಬಡ್ಡಿಗೆ ಬಡ್ಡಿ ತುಂಬುವ ಸ್ಥಿತಿ ನಿರ್ಮಾಣವಾಗಿದೆ. ತುರ್ತಾಗಿ ಬಡ್ಡಿ ಸಹಾಯಧನವನ್ನು ಬಿಡುಗಡೆ ಮಾಡಬೇಕು,  ನೇಕಾರ ಸಮ್ಮಾನ ಯೋಜನೆಯನ್ನು ಪ್ರತಿ ವರ್ಷ ರೂ. 10 ಸಾವಿರಗಳಿಗೆ ಏರಿಸಿ ಕೂಡಲೇ ಹಣವನ್ನು ಸಂದಾಯ ಮಾಡಬೇಕು, ಕೈಮಗ್ಗ ಮತ್ತು ಜವಳಿ ಇಲಾಖೆಗೆ ಸರ್ಕಾರದಿಂದ ಕನಿಷ್ಠ 1000 ರಿಂದ 1500 ಕೋಟಿ ರೂ.ಗಳ ವಿಶೇಷ ಅನುದಾನ ಒದಗಿಸಿ ಅನುದಾನ ಒದಗಿಸಿ ಜಾರಿಯಲ್ಲಿರುವ ಯೋಜನೆಗಳನ್ನು ಸಮರ್ಪಕವಾಗಿ ಕಟ್ಟಕಡೆಯ ನೇಕಾರನಿಗೆ ಒದಗಿಸಬೇಕು. 10. ಮಗ್ಗ ನಡೆಸಲು ಅನೇಕ ಇಲಾಖೆಗಳಿಂದ ಪರವಾನಿಗೆ ಬೇಕೆಂದು ಕಟ್ಟೆಳೆ ಹಾಕುತ್ತಿದ್ದು, ಈ ತೊಂದರೆ ನಿವಾರಣೆಗಾಗಿ ನೇಕಾರಿಕೆಯನ್ನು ಗುಡಿ ಕೈಗಾರಿಕೆ ಎಂದು ಘೋಷಿಸಬೇಕು, ನೇಕಾರರು ಅನುಭವಿಸುತ್ತಿರುವ ಮಾರುಕಟ್ಟೆ ತೊಂದರೆಯನ್ನು ನಿವಾರಿಸಲು ಸರಕಾರದಿಂದ ಜನ ಸಾಂದ್ರತೆ ಇರುವಲ್ಲಿ ನೇಕಾರರ ನೇರ ಉತ್ಪಾದನೆಗಳ ಮಾರುಕಟ್ಟೆಯನ್ನು ಕಲ್ಪಿಸಿ ಕೊಡಬೇಕು,  ಅನೇಕ ಜಿಲ್ಲೆಗಳಲ್ಲಿ 2 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿಗಳಿಂದ ನೇಕಾರರಿಗೆ ಸಮರ್ಪಕವಾದ ಇಲಾಖೆಯ ಯೋಜನೆಗಳ ಮಾಹಿತಿ ಮತ್ತು ಸೇವೆ ದೊರೆಯದೇ ಇರುವ ಕಾರಣ ವರ್ಗಾವಣೆಗೊಳಿಸಬೇಕು. ಮತ್ತು ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿ ಇಲಾಖೆಯಿಂದ ನೇಕಾರರಿಗೆ ಸೇವೆ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿದ್ದಾರೆ.

ಪ್ರತಿಭಟನೆಯಲ್ಲಿ  ರಾಜೇಂದ್ರ ಮಿರ್ಜಿ, ಮಲ್ಲಪ್ಪ ಮಿರ್ಜಿ, ಅರ್ಜುನ ಕುಂಬಾರ, ರಾಜು ಬಿಜ್ಜರಗಿ, ಲಕ್ಷ್ಣ ಡೊನವಾಡೆ, ಸುರೇಶ ಗೌಡರ ಸೇರಿದಂತೆ ಅನೇಕ ನೇಕಾರರು ಭಾಗವಹಿಸಿದ್ದರು.//////