Belagavi News In Kannada | News Belgaum

ಯುವ ಪೀಳಿಗೆ ಸಂವಿಧಾನದ ಆಶೋತ್ತರ ಅಳವಡಿಸಿಕೊಂಡರೆ ದೇಶದ ಅಭಿವೃದ್ದಿ ಸಾಧ್ಯ: ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್

ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಓದು ಕಾರ್ಯಕ್ರಮ -2023
———————————
ಯುವ ಪೀಳಿಗೆ ಸಂವಿಧಾನದ ಆಶೋತ್ತರ ಅಳವಡಿಸಿಕೊಂಡರೆ ದೇಶದ ಅಭಿವೃದ್ದಿ ಸಾಧ್ಯ: ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್

ಬೆಳಗಾವಿ, ನ.06: ಭಾರತದ ನಾಗರಿಕರಾದ ನಾವುಗಳು ಸಾರ್ವಭೌಮ, ಸಮಾಜವಾದಿ ಜಾತ್ಯಾತೀತ ಸೇರಿದಂತೆ ಸಂವಿಧಾನದ ಎಲ್ಲ ಆಶೋತ್ತರಗಳನ್ನು ಯುವ ಪೀಳಿಗೆ ನಿತ್ಯ ಜೀವನದಲ್ಲಿ ಅಳಡಿಸಿಕೊಂಡು ನಡೆದರೆ ದೇಶದ ಸಮಗ್ರ ಅಭಿವೃದ್ದಿ ಸಾಧ್ಯ ಎಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸುವರ್ಣ ಸೌಧದ ಅಡಿಟೋರಿಯಂ ಸಭಾಂಗಣದಲ್ಲಿ ಬುಧವಾರ
(ಡಿ.06) ರಂದು ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್
ಅವರ 67ನೇಯ ಮಹಾಪರಿನಿರ್ವಾಣ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರವರ ಓದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ , ಬಾಲ್ಯ ವಿವಾಹ ಹಾಗೂ ಅಪೌಷ್ಠಿಕತೆ ಸೆರಿಂದಂತೆ ವಿವಿಧ ರೀತಿಯ ತಾರತಮ್ಯಗಳು ರೂಢಿಯಲ್ಲಿವೆ. ಇದು ನಿವಾರಣೆಯಾಗುವ ನಿಟ್ಟಿನಲ್ಲಿ ಎಲ್ಲರೂ ಶ್ರಮವಹಿಸಬೇಕಿದೆ ಎಂದು ಹೇಳಿದರು.

ಇವತ್ತಿನ ಯುವ ಪೀಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ, ಕಲೆ, ಸಂಗೀತ, ಸಾಹಿತ್ಯ, ಹೀಗೇ ವಿವಿಧ ಕೌಶಲ್ಯ ಗಳಲ್ಲಿ ಆಸಕ್ತಿ ಇಟ್ಟು ತಮ್ಮದೇ ಆದ ಆಯ್ಕೆಗಳನ್ನು ತಗೆದುಕೊಂಡು ಸಾಧನೆ ಮಾಡುವುದರ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಹೇಳಿದರು.

ಓದು ಕಾರ್ಯಕ್ರಮದ ನಿಮಿತ್ಯ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯದ ಶಾಲಾ ಕಾಲೇಜು ಮಕ್ಕಳಿಗೆ ಶಾಲಿನಿ ರಜನೀಶ್ ಅವರು ಪ್ರಮಾಣ ಪತ್ರ ವಿತರಣೆ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ರಾಜಶ್ರೀ ಜೈನಾಪೂರ, ಸೇರಿದಂತೆ ವಿವಿಧ ಶಾಲಾ ಕಾಲೇಜು ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.