Belagavi News In Kannada | News Belgaum

ಸೇವಾ ಭದ್ರತೆ ನೀಡುವಂತೆ ಅತಿಥಿ ಉಪನ್ಯಾಸಕರ ಆಗ್ರಹ; ಪ್ರತಿಭಟನಾ ಸ್ಥಳಕ್ಕೆ ಸಚಿವ ಎಂ.ಬಿ. ಪಾಟೀಲ್‌ ಭೇಟಿ

ಬೆಳಗಾವಿ: ಸೇವಾಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಬೆಳಗಾವಿಯ ಸುವರ್ಣ ಸೌಧದ ಬಳಿ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ  ಸಚಿವ ಎಂ.ಬಿ. ಪಾಟೀಲ್‌ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು.
ಇದೇ ವೇಳೆ ಮಾತನಾಡಿ, ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹರಿಸುವ  ದೃಷ್ಟಿಯಿಂದ ಸಾಧಕ, ಬಾಧಕಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವ ಭರವಸೆ ನೀಡಿದರು.
ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಆರ್.‌ ಕಲ್ಮನಿ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಲ್ಲಿ ಬಹುತೇಕರು ನಿವೃತ್ತಿಯ ಅಂಚಿಗೆ ತಲುಪಿದ್ದಾರೆ. ಅತಿಥಿ ಉಪನ್ಯಾಸಕರಿಗೆ ಉತ್ತಮ ಜೀವನ ನಡೆಸುವಂತೆ ಅನುವಾಗಲು ಸವಲತ್ತು ಕಲ್ಪಿಸಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಆದ್ದರಿಂದ ಅವರಿಗೆ ₹25 ಲಕ್ಷ ಇಡುಗಂಟು ನೀಡಬೇಕು. ನಿವೃತ್ತಿಯ ನಂತರದಲ್ಲಾದರೂ ಉತ್ತಮ ಬದುಕು ರೂಪಿಸಿಕೊಳ್ಳಲು ಸರ್ಕಾರ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.


‘ರಾಜ್ಯದ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗಣನೀಯ ಪಾತ್ರ ವಹಿಸುತ್ತಿದ್ದಾರೆ. ಸೇವಾಭದ್ರತೆ ನೀಡಿ ಯುಜಿಸಿ ನಿಯಮಾವಳಿಯಂತೆ ವೇತನ ಹೆಚ್ಚಿಸಬೇಕೆಂದು ಹಲವಾರು ಬಾರಿ ಉಪವಾಸ, ಧರಣಿ, ಪ್ರತಿಭಟನೆ ಮತ್ತು ಹೋರಾಟ ಮೂಲಕ ಬೇಡಿಕೆ ಈಡೇರಿಸಲು ಮನವಿ ಮಾಡಿದರೂ ಈವರೆಗೂ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ತಿಳಿಸಿದರು.
‘ಪಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪಕ್ಷದ ಪ್ರಣಾಳಿಕೆಯಲ್ಲಿ ಸೇವಾ ಭದ್ರತೆ ನೀಡುವುದಾಗಿ  ಘೋಷಣೆ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷ ನಾಯಕರಾಗಿದ್ದ ವೇಳೆ ಈ ಬಗ್ಗೆ ಧ್ವನಿ ಎತ್ತಿದ್ದರು. ಇದೀಗ ಅವರೇ ಅಧಿಕಾರದಲ್ಲಿದ್ದಾರೆ. ನಮ್ಮ ಬಗ್ಗೆ ಅರಿವಿರುವ ಅವರು ಸೇವಾ ಭದ್ರತೆಯ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ’ ಎಂದು ಮನವಿ ಸಚಿವರ ಬಳಿ ಮನವಿ ಮಾಡಿದರು.

ಬೇಡಿಕೆಗಳು: ರಾಜ್ಯ ಉನ್ನತ ಶಿಕ್ಷಣ ಇಲಾಕೆಯು ದಿನಕ್ಕೊಂದು ಅವೈಜ್ಞಾನಿಕ ಮತ್ತು ದ್ವಂದ್ವ ಆದೇಶಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು. ರಾಜ್ಯದ ಕೆಲವೇ ಕೆಲವು ಪ್ರಾಂಶುಪಾಲರು ಅತಿಥಿ ಉಪನ್ಯಾಸಕರಿಗೆ ದಬ್ಬಾಳಿಕೆ, ಮಾನಸಿಕ ಹಿಂಸೆ ಜೊತೆಗೆ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ ಮಾನಸಿಕ ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು, ಕಳೆದ ಸರ್ಕಾರವು ನಮ್ಮ ಅತಿಥಿ ಉಪನ್ಯಾಸಕರಿಗೆ 10 ತಿಂಗಳವರಿಗೆ ವೇತನ ನೀಡುತ್ತಿತ್ತು, ಆದರೆ ತಾವು ಏಕಾಏಕಿ ಅದನ್ನು ಬದಲಿಸಿ, ಕೇವಲ ಐದಾರು ತಿಂಗಳ ವೇತನ ನೀಡುವ ಉನ್ನತ ಶಿಕ್ಷಣ ಇಲಾಖೆಯ ಈ ಪದ್ಧತಿ ತಕ್ಷಣವೇ ಕೈ ಬಿಡಬೇಕು, ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೇವಲ ಮೌಖಿಕ ಆದೇಶ ಮಾಡದೇ ಲಿಖಿತವಾದ ಆದೇಶಗಳನ್ನು ನೀಡಬೇಕು. ಕೇಲವು ಪ್ರಾಚಾರ್ಯರು ಈ ಮೌಖಿಕ ಆದೇಶದಿಂದ ಅತಿಥಿ ಉಪನ್ಯಾಸಕರನ್ನು ತಮ್ಮ ಮನೆಯ ಜೀತದಾಳಯಗಳಂತೆ ನಡೆಸಿಕೊಳ್ಳುತ್ತಾರೆ. ಇದು ತಕ್ಷಣವೇ ನಿಲ್ಲಬೇಕು, ವಿಶೇಷವಾಗಿ ತಮ್ಮ ಸರ್ಕಾರವು ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದಂತೆ ಅತಿಥಿ ಉಪನ್ಯಾಸಕರನ್ನು ಶೀಘ್ರವಾಗಿ ಖಾಯಂ ಮಾಡಬೇಕು,  ಪದವಿಯನ್ನು ಪಡೆದವರಿಗೆ ಯುಜಿಸಿ ನಿಯಮಾವಳಿಯ ಪ್ರಕಾರ ಅರ್ಹತೆ ಮಾನದಂಡ ಪರಿಗಣಿಸಬೇಕು. 8. ಅತಿಥಿ ಉಪನ್ಯಾಸಕಿಯರಿಗೆ (ಹೆಣ್ಣು ಮಕ್ಕಳಿಗೆ) ವೇತನ ಸಹಿತ ಹೆರಗೆಯ ರಜೆ ನೀಡುವುದು, ಉನ್ನತ ಶಿಕ್ಷಣ ಇಲಾಖೆಯ ದ್ವಂದ್ವ ಆದೇಶಗಳಿಂದಾಗಿ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಸರ್ಕಾರವು ನೀಡುವ ಪರಿಹಾರದಂತೆ ಆತ್ಮಹತ್ಯೆ ಮಾಡಿಕೊಂಡಿರುವ ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ ಸರ್ಕಾರವು ಪರಿಹಾರ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿದ್ದಾರೆ.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪೀಟರ್‌ ಚಂದ ವಿನೋಧ ಸೇರಿದಂತೆ ಸಾವಿರಾರು ಅತಿಥಿ ಉಪನ್ಯಾಸಕರು ಇದ್ದರು.///////