Belagavi News In Kannada | News Belgaum

ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು: ಎಂ.ಸಿ. ವೇಣುಗೋಪಾಲ

ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು: ಎಂ.ಸಿ. ವೇಣುಗೋಪಾಲ

ದೇಶದಲ್ಲೇ ಪ್ರಪ್ರಥಮ ಜಾತಿ ಸಮೀಕ್ಷೆ ವರದಿ ಜಾರಿಗೆ ತಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾ‌ರ್‌ ಗೆ ಅಭಿನಂದನೆ ಸಲ್ಲಿಸಿದ ಎಂ.ಸಿ. ವೇಣುಗೋಪಾಲ

ಬೆಳಗಾವಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸುಮಾರು 3 ವರ್ಷಗಳ ಕಾಲ ಸಮೀಕ್ಷೆ ಮಾಡಿ, ಸಿದ್ದಪಡಿಸಿದ ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದೆಂದು ಮಾಜಿ ವಿಧಾನ ಪರಿಷತ್ ಸದಸ್ಯ, ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಸಿ. ವೇಣುಗೋಪಾಲ ಮನವಿ ಮಾಡಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗದ ಮೂಲಕ ಮಾಡಿರುವ “ಜಾತಿವಾರು ಸಮೀಕ್ಷಾ ವರದಿ” ಯನ್ನು ಸ್ವೀಕರಿಸಿ, ಆಯೋಗ ನೀಡಿರುವ ಅಂಕಿಅಂಶಗಳ ಆಧಾರದ ಮೇಲೆ ಈಗಿರುವ ಪಟ್ಟಿಗಳನ್ನು ಪುನರ್ ಪರಿಶೀಲಿಸಿ, ಪರಿಷ್ಕೃತ ಪಟ್ಟಿಗಳನ್ನು ರೂಪಿಸುವ ಅವಶ್ಯಕತೆ ಇದೆ. ಹೀಗಾಗಿ ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು ಎಂದರು.

ಹಾಲಿ ಎಲ್ಲಾ ಹಿಂದುಳಿದ ವರ್ಗಗಳಿಗೂ ಒಟ್ಟಾರೆ ಶೇ.32 ಮೀಸಲಾತಿ ಇದ್ದು, ಇದು ಸಂಪೂರ್ಣ ಅವೈಜ್ಞಾನಿಕವಾಗಿ ಹಾಗೂ ಯಾವುದೇ ಮಾನದಂಡಗಳನ್ನು ಅನುಸರಿಸದೆ, ಯಾವುದೇ ಆಯೋಗಗಳಿಂದ ಶಿಫಾರಸ್ಸು ಇಲ್ಲದೆ, ಕೇವಲ ರಾಜಕೀಯ ಉದ್ದೇಶಗಳಿಗಾಗಿ ಹಿಂದಿನ ಸರ್ಕಾರಗಳು ನೀಡಿದ್ದು, ಆಯಾ ಜಾತಿಗಳ ಜನಸಂಖ್ಯಾನುಸಾರ ನೀಡದೇ ಇರುವುದರಿಂದ ಶೇ.90 ರಷ್ಟು ಜಾತಿಗಳಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಯಾವುದೇ ಸವಲತ್ತುಗಳು ಸಿಗದೆ ಅವಕಾಶ ವಂಚಿತರಾಗಿರುತ್ತಾರೆ ಎಂದು ತಿಳಿಸಿದರು.

ಸಿಎಂ ಸಿದ್ಧರಾಮಯ್ಯ ಅವರು 2015ರಲ್ಲಿ ರಾಷ್ಟ್ರದಲ್ಲೇ ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಆದೇಶ ನೀಡಿ, ರೂ. 178.00 ಕೋಟಿ ರೂ. ಹಣ ಬಿಡುಗಡೆಗೊಳಿಸಿದ್ದಾರೆ. ಆದರೆ ಈಗ ಜಾತಿ ಸಮೀಕ್ಷೆ ವರದಿ ಜಾರಿಗೆ ಯಾರೇ ಅಡ್ಡಿ ಪಡಿಸುವುದು ಸರಿಯಲ್ಲ. ಈ ಕುರಿತು ಸಚಿವ ಸಂಪುಟ ಸಚಿವರಿಗೆ ಮನವಿ ಮಾಡಿದ್ದೇನೆ. ಜಾತಿ ಸಮೀಕ್ಷೆ ವರದಿ ಕುರಿತು ಜಾಗೃತಿ ಮೂಡಿಸಲು ಹುಬ್ಬಳ್ಳಿಯಲ್ಲಿ ನಾಳೆ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು.

ಪ್ರವರ್ಗ 2ಎ ನಲ್ಲಿ 102 ಜಾತಿಗಳಿದ್ದು, ಶೇ.15 ಮೀಸಲಾತಿ, ಪ್ರವರ್ಗ 1ರಲ್ಲಿ 95 ಜಾತಿಗಳಿದ್ದು ಶೇ. 4 ಮೀಸಲಾತಿ, ಪ್ರವರ್ಗ 2ಬಿಗೆ ಶೇ.4 ಮೀಸಲಾತಿ, ಪ್ರವರ್ಗ 3ಎಗೆ ಶೇ.4 ಮೀಸಲಾತಿ, ಪ್ರವರ್ಗ 3ಬಿಗೆ ಶೇ.5 ಮೀಸಲಾತಿ ನೀಡಲಾಗಿದ್ದು, ಒಟ್ಟು ಶೇ. 32 ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರುವುದು ಸರಿಯಷ್ಟೆ. ಹಿಂದುಳಿದ ವರ್ಗಗಳ ಆಯೋಗದಲ್ಲಿರುವ ಜಾತಿ ಸಮೀಕ್ಷಾ ವರದಿಯನ್ನು ಪರಿಗಣಿಸುವುದರಿಂದ ಯಾವ ಯಾವ ಜಾತಿಯಲ್ಲಿ ಎಷ್ಟು ಜನರು ಇದ್ದಾರೆ? ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಏನಿದೆ? ಹಿಂದುಳಿದ ವರ್ಗಗಳು ಎಲ್ಲೆಲ್ಲಿ, ಎಷ್ಟು ಜನರಿದ್ದಾರೆ? ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ? ಅವರ ಸಾಮಾಜಿಕ ಸ್ಥಿತಿಗತಿಗಳು ಏನು ಎಂಬುದನ್ನು ಅರಿತು ಅವರಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.

ಜಾತಿ ಸಮೀಕ್ಷೆ ವರದಿ ಜಾರಿಗಾಗಿ ವೇದಿಕೆಯು ಉಚ್ಛನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಂಖ್ಯೆ : WP 13803 / 2021 ದಾವೆ ಹೂಡಲಾಗಿದ್ದು, ಹಿಂದಿನ ಮುಖ್ಯಮಂತ್ರಿಗಳನ್ನು, ವಿರೋಧ ಪಕ್ಷದ ನಾಯಕರುಗಳನ್ನು ಮತ್ತು ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿ, ನಿರಂತರವಾಗಿ ಹೋರಾಟ ಮಾಡುತ್ತಿದ್ದು, 2015ರಲ್ಲಿ 178 ರೂ. ಕೋಟಿ ರೂ. ಖರ್ಚು ಮಾಡಿ, ಹಿಂದುಳಿದ ವರ್ಗಗಳ ಆಯೋಗದಲ್ಲಿರುವ ಜಾತಿ ಸಮೀಕ್ಷಾ ವರದಿಯನ್ನು ತರಿಸಿಕೊಂಡು ಕೂಡಲೇ ಅನುಷ್ಠಾನಗೊಳಿಸುವ ಮೂಲಕ ಎಲ್ಲಾ ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಆಗ್ರಹಿಸಿದ್ದಾರೆ.

ಸಂವಿಧಾನದ ಪ್ರಕಾರ ಜಾತಿಗಣತಿಯು ಪ್ರತಿ 10 ವರ್ಷಕ್ಕೆ ಒಮ್ಮೆ ನಡೆಸಬೇಕಾಗಿರುತ್ತದೆ. ಆದರೆ 1995ರಲ್ಲಿ ಕಾನೂನು ಜಾರಿಯಾಗಿ 25 ವರ್ಷಗಳು ಕಳೆದರೂ ದೇಶದ ಯಾವುದೇ ರಾಜ್ಯ ಸರ್ಕಾರಗಳು ಅನುಷ್ಠಾನ ಗೊಳಿಸುವಲ್ಲಿ ವಿಫಲರಾಗಿರುವುದು ವಿಪರ್ಯಾಸವೇ ಸರಿ ಎಂದ ಅವರು, ಇದೇ ವೇಳೆ ದೇಶದಲ್ಲಿ ಮೊಟ್ಟ ಮೊದಲು ಬಾರಿಗೆ ಜಾತಿ ಸಮೀಕ್ಷೆ ವರದಿ ಜಾರಿಗೆ ತಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾ‌ರ್‌ ಅವರಿಗೆ ವೇದಿಕೆಯಿಂದ ಅಭಿನಂದನೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ. ಚಂದ್ರಪ್ಪ, ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಸದಸ್ಯರು ಇದ್ದರು.