Belagavi News In Kannada | News Belgaum

ವಿಜಯಪುರ ಕುಡಿಯುವ ನೀರಿನ ಕೊಳವೆ ಮಾರ್ಗ ಕಾಮಗಾರಿಗೆ ಅನುಮತಿ-ಸಚಿವ ಸುರೇಶ್.ಬಿ.ಎಸ್

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ : ಪೌರ ಕಾರ್ಮಿಕರ ಕೊರತೆ ಇಲ್ಲ -ಸಚಿವ ಸುರೇಶ್.ಬಿ.ಎಸ್

ಬೆಳಗಾವಿ ಸುವರ್ಣ ಸೌಧ,ಡಿ.08: ವಿಜಯಪುರ ನಗರಕ್ಕೆ ಆಲಮಟ್ಟಿ ಹಿನ್ನಿರಿನಿಂದ ನೀರು ಸರಬರಾಜು ಮಾಡುವ ಕೊಳವೆ ಮಾರ್ಗ ಬದಲಿ ಕಾಮಾಗಾರಿಗೆ ಸರ್ಕಾರದಿಂದ ಅನುಮತಿ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್.ಬಿ.ಎಸ್. ಹೇಳಿದರು.
ಶುಕ್ರವಾರ ಅಧಿವೇಶನದ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಬಸನಗೌಡ ಆರ್. ಪಾಟೀಲ್ ಯತ್ನಾಳ್ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
ಬಾಕಿ ಉಳಿದಿರುವ ಪಿ.ಎಸ್.ಪಿ. ಕೊಳವೆ ಮಾರ್ಗವನ್ನು ಎಂ.ಎಸ್. ಪೈಪುಗಳಾಗಿ ಬದಲಾಯಿಸಲು ರೂ.32 ಕೋಟಿಗಳಿಗೆ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು. 2018-19ನೇ ಸಾಲಿನ ದರಪಟ್ಟಿಯಂತೆ ಯೋಜನೆ ಮಾರ್ಪಡಿಸಿ ರೂ.52 ಕೋಟಿಗೆ ಪರಿಷ್ಕೃತ ಯೋಜನೆ ಸಿದ್ದಪಡಿಸಿ ಆಡಳಿತಾತ್ಮಕ ಮಂಜೂರಾತಿ ಸರ್ಕಾರಕ್ಕೆ ಬಂದ ವರದಿಯನ್ನು ಹಣಕಾಸು ಇಲಾಖೆ ಕಳುಹಿಸಿಕೊಡಲಾಗಿತ್ತು. ಆದರೆ ಆರ್ಥಿಕ ಇಲಾಖೆ ಹೆಚ್ಚುವರಿ ಹಣವನ್ನು ಸರ್ಕಾರದಿಂದ ಭರಿಸಲು ಸಾಧ್ಯವಾಗುವುದಿಲ್ಲ. ಯೋಜನೆಗೆ ಅವಶ್ಯಕ ಇರುವ ಅನುದಾನವನ್ನು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ, ಸ್ಥಳೀಯ ಸಂಸ್ಥೆ, 15 ಹಣಕಾಸು ಆಯೋಗ, ನಗರ ಸ್ಥಳೀಯ ಸಂಸ್ಥೆಯ ವಾಣಿಜ್ಯ ಸಾಲ ಅಥವಾ ಅಮೃತ್ 2.0 ಯೋಜನೆಯಡಿ ಕೈಗೊಳುವಂತೆ ತಿಳಿಸಿರುತ್ತಾರೆ. ಇದರಂತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೆಶನ ನೀಡಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ನಗರದಲ್ಲಿ 15 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಯೋಜನೆ ವಿಳಂಭವಾದರೆ ಮುಂದಿನ ಬೇಸಿಗೆ ವೇಳೆ ದುಸ್ತರವಾಗಲಿದೆ. ನಗರದಲ್ಲಿ 24*7 ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಮಾಡುತ್ತಿರುವ ಕಂಪನಿಗೆ ರೂ.201 ಕೋಟಿ ಗುತ್ತಿಗೆ ಹಣ ಬಿಡುಗಡೆ ಮಾಡಬೇಕಿತ್ತು. ಅದರೆ ಸರ್ಕಾರ ರೂ.133 ಕೋಟಿ ನೀಡಿದೆ. ಬಾಕಿ ಉಳಿದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಶಾಸಕ ಬಸನಗೌಡ ಆರ್. ಪಾಟೀಲ್ ಯತ್ನಾಳ್ ಹೇಳಿದರು.
10 ರಿಂದ 15 ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಸಚಿವ ಸುರೇಶ್.ಬಿ.ಎಸ್. ಆಶ್ವಾಸನೆ ನೀಡಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ : ಪೌರ ಕಾರ್ಮಿಕರ ಕೊರತೆ ಇಲ್ಲ
-ಸಚಿವ ಸುರೇಶ್.ಬಿ.ಎಸ್

ಬೆಳಗಾವಿ ಸುವರ್ಣ ಸೌಧ,ಡಿ.ಕ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕೊರತೆಯಿಲ್ಲ. ನೇರ ಪಾವತಿಯಡಿ 958, ಹೊರಗುತ್ತಿಗೆ ಅಡಿ 774 ಹಾಗೂ 388 ಖಾಯಂ ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್.ಬಿ.ಎಸ್. ಹೇಳಿದರು.
ಶುಕ್ರವಾರದ ಅಧಿವೇಶನದ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಅಬ್ಬಯ್ಯ ಪ್ರಸಾದ್ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
ಕರ್ನಾಟಕ ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮ 2011ರ ಪ್ರಕಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ 1470 ಪೌರ ಕಾರ್ಮಿಕರ ಹುದ್ದೆಗಳು ಇವೆ. ಸದ್ಯ 700 ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟು 134 ಪೌರ ಕಾರ್ಮಿಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಪೌರಕಾರ್ಮಿಕರ ವಿಶೇಷ ನೇರ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.
ಹುಬ್ಬಳ್ಳಿ-ಧಾರವಾಡ 11.60 ಲಕ್ಷ ಜನಸಂಖ್ಯೆ ಹೊಂದಿದೆ. ಸುಮಾರು 2800 ಕಿ.ಮೀ ರಸ್ತೆಗಳಿವೆ. ಪ್ರತಿನಿತ್ಯ 3 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ. ಈ ಕಾರ್ಯಗಳಿಗೆ ಹೆಚ್ಚಿನ ಸಂಖ್ಯೆಯ ಪೌರ ಕಾರ್ಮಿಕರ ಅಗತ್ಯವಿದೆ. ಐ.ಪಿ.ಡಿ ಸಾಲಪ್ಪ ನವರ ವರದಿ ಪ್ರಕಾರ 500 ಜನಸಂಖ್ಯೆ ಒಬ್ಬ ಪೌರ ಕಾರ್ಮಿಕರನ್ನು ಸರ್ಕಾರ ನೇಮಿಸಬೇಕು. ಸದ್ಯ ನೇರಪಾವತಿ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಶಾಸಕ ಅಬ್ಬಯ್ಯ ಪ್ರಸಾದ್ ಸಚಿವರಲ್ಲಿ ಕೋರಿದರು.
ಶಾಸಕರ ಕೋರಿಗೆ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಹುಬ್ಬಳ್ಳಿ ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಕಾರವಾರ ರಸ್ತೆಯ ಕೆಂಪಕೆರೆಯಲ್ಲಿ ಕಳೆದ 40 ರಿಂದ 50 ವರ್ಷಗಳ ಕಾಲ ಸಂಗ್ರಹ ಮಾಡಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯನ್ವಯ ಈ ತಾಜ್ಯವು 3.6 ಲಕ್ಷ ಟನ್‌ಗೂ ಅಧಿಕವಾಗಿದೆ. ಇದನ್ನು ವಿಲೇವಾರಿ ಮಾಡಿ 19 ಎಕರೆ ಪ್ರದೇಶವನ್ನು ಮುಕ್ತಗೊಳಿಸಲು ಟೆಂಡರ್ ಕರೆಯಲಾಗಿದೆ ಎಂದು ಸಚಿವ ಸುರೇಶ್.ಬಿ.ಎಸ್. ಹೇಳಿದರು.

 

ಸ್ವಚ್ಚ ಭಾರತ ಮಿಷನ್ ಯೋಜನೆ ಅನುಷ್ಠಾನಕ್ಕೆ ರೂ.2912 ಕೋಟಿ ಅನುದಾನ*
ಸಚಿವ ಸುರೇಶ್.ಬಿ.ಎಸ್

ಬೆಳಗಾವಿ ಸುವರ್ಣ ಸೌಧ,ಡಿ.: ಸ್ವಚ್ಛ ಭಾರತ ಮಿಷನ್-1.0 ಯೋಜನೆಗೆ ರೂ.854 ಕೋಟಿ ಹಾಗೂ ಸ್ವಚ್ಛ ಭಾರತ ಮಿಷನ್-2.0 ಯೋಜನೆಗೆ ರೂ.2058 ಕೋಟಿ ಸೇರಿ ಒಟ್ಟು ರೂ.2912 ಕೋಟಿ ಅನುದಾನವನ್ನು ಯೋಜನೆ ಅನುಷ್ಠಾನಕ್ಕೆ ಮೀಸಲು ಇರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್.ಬಿ.ಎಸ್. ಹೇಳಿದರು.

ಶುಕ್ರವಾರ ಅಧಿವೇಶನದ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ರಾಜ್ಯ ಎಲ್ಲಾ ಸ್ಥಳೀಯ ನಗರಾಭಿವೃದ್ಧಿ ಸಂಸ್ಥೆಗಳಲ್ಲಿ ಸ್ವಚ್ಛಭಾರತ್ ಮಿಷನ್ ಅನುಷ್ಠಾನ ಮಾಡಲು ಪ್ರತ್ಯೇಕ ಐ.ಎ.ಎಸ್ ಅಧಿಕಾರಿ ನೇಮಿಸಲಾಗಿದೆ. ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ, ಸಾಗಣಿಕೆ, ಸಂಸ್ಕರಣೆ ಮತ್ತು ವಿಲೇವಾರಿಗೆ ಅಗತ್ಯ ಇರುವ ಯಂತ್ರೊಪಕರಣಗಳನ್ನು ಮತ್ತು ಸಿವಿಲ್ ಕಾಮಗಾರಿಗೆ ಕೈಗೊಳ್ಳಲು ವಿಸ್ತೃತ ಯೋಜನೆಗೆ ಅನುಮತಿ ನೀಡಿದ್ದು, ರೂ.370 ಕೊಟಿ ಬಿಡುಗಡೆ ಮಾಡಲಾಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ 450 ಟಿ.ಪಿ.ಡಿ ಹಾಗೂ ತುಮಕೂರು ನಗರದಲ್ಲಿ 140 ಟಿ.ಪಿ.ಡಿ ಸಾಮಾರ್ಥ್ಯದ ತ್ಯಾಜ್ಯ ಸಂಸ್ಕರಣೆ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ ಬಹಳ ವರ್ಷಗಳಿಂದ ಶೇಖರಣೆಯಾಗಿರುವ ಹಳೆಯ ಪಾರಂಪರಿಕ ತ್ಯಾಜ್ಯವನ್ನು ತೆರವುಗೊಳಿಸಲು ಬಯೋ ಮೈನಿಂಗ್ ಹಾಗೂ ಬಯೋ ರೆಮಡೇಷನ್ ಮಾಡಲು ಕ್ರಮ ವಹಿಸಲಾಗಿದೆ ಎಂದರು.
ಶಾಸಕ ಜ್ಯೋತಿ ಗಣೇಶ್ ಜೆ.ಬಿ ಹಾಗೂ ಇತರೆ ಶಾಸಕರು ಬಯೋ ಮೈನಿಂಗ್ ಹಾಗೂ ಬಯೋ ರೆಮಡೇಷನ್ ಕೈಗೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರತಿ ಟನ್‌ಗೆ ನೀಡಿರುವ ದರವನೇ ರಾಜ್ಯದ ಇತರೆಡೆಯೂ ನೀಡಬೇಕು ಎಂದು ಸಚಿವರಲ್ಲಿ ಕೋರಿದರು. ಇದಕ್ಕೆ ಸಕಾರತ್ಮವಾಗಿ ಸ್ಪಂದಿಸಿದ ಸಚಿವ ಸುರೇಶ್.ಬಿ.ಎಸ್. ದರ ಪರಿಷ್ಕರಣೆ ಮಾಡುವುದಾಗಿ ತಿಳಿಸಿದರು.