Belagavi News In Kannada | News Belgaum

ಮನರೇಗಾ ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಪತ್ರ -ಮುಖ್ಯಮಂತ್ರಿ ಸಿದ್ದರಾಮಯ್ಯ

ಸುವರ್ಣಸೌಧ ಬೆಳಗಾವಿ ಡಿ.11 : 5 ವಿಧೇಯಕಗಳ ಮಂಡನೆ

ರಾಜ್ಯದ ಬರ ನಿರ್ವಹಣೆಗೆ ಸರ್ಕಾರ ಸಮರ್ಪಕ ಕ್ರಮವಹಿಸಿದೆ;

ಜಿಲ್ಲಾಡಳಿತಗಳಲ್ಲಿ ಬರ ನಿರ್ವಹಣೆಗಾಗಿ ರೂ.895 ಕೋಟಿ ಇದೆ
-ಕಂದಾಯ ಸಚಿವ ಕೃಷ್ಣ ಭೈರೇಗೌಡ

 

ಬೆಳಗಾವಿ: ಸುವರ್ಣ ಸೌಧ, ಡಿ.11: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಉಂಟಾಗಿದ್ದು, ಈಗಾಗಲೇ 223 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಖಾತೆಗಳಲ್ಲಿ ಬರ ನಿರ್ವಹಣೆಗೆ ಒಟ್ಟು ರೂ.895 ಕೋಟಿ ಹಣ ಮೀಸಲಿರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.
ಸೋಮವಾರ ಚಳಿಗಾಲದ ವಿಧಾನಸಭೆ ಕಲಾಪದಲ್ಲಿ ಬರ ನಿರ್ವಹಣೆ ಕುರಿತ ಚರ್ಚೆಯ ಮೇಲೆ ಉತ್ತರಿಸಿ ಮಾತನಾಡಿದರು.
ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಜೂನ್‍ನಲ್ಲಿ ಶೇ.57, ಆಗಸ್ಟ್‍ನಲ್ಲಿ ಶೇ.73, ಸ್ಪೆಪ್ಟಂಬರ್‍ನಲ್ಲಿ ಶೇ.10 ರಷ್ಟು ಹಾಗೂ ಅಕ್ಟೋಬರ್‍ನಲ್ಲಿ ಶೇ.65 ರಷ್ಟು ಮಳೆಯ ಕೊರತೆಯಾಗಿದೆ. ಪ್ರಸಕ್ತ ವರ್ಷ 82.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೇ ಶೇ.74 ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮಳೆ ಕೊರತೆಯಿಂದಾಗಿ 46 ಲಕ್ಷ ಹೆಕ್ಟೇರ್ ಕೃಷಿ, 2 ಲಕ್ಷ ಹೆಕ್ಟೇರ್ ತೋಟಗಾರಿಕೆ ಸೇರಿ 48 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ಸಚಿವರ ಬರ ಅಧ್ಯಯನ: ರಾಜ್ಯದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿ ಜನರ ಸಂಕಷ್ಟಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತೊಂದರೆಯಾಗದಂತೆ ಕ್ರಮವಹಿಸಲು ರಾಜ್ಯ ಸರ್ಕಾರ ಅನೇಕ ರೀತಿಯ ಪರಿಹಾರಗಳನ್ನು ಕೈಗೊಂಡಿದೆ.
ಮುಖ್ಯಮಂತ್ರಿಗಳು ಬರ ನಿರ್ವಹಣೆಗಾಗಿ ಮೂರು ಸಭೆಗಳನ್ನು ಜರುಗಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ಸರ್ಕಾರವು ಬರ ನಿರ್ವಹಣೆಗಾಗಿ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಈಗಾಗಲೇ 8 ಸಭೆಗಳನ್ನು ಜರುಗಿಸಿ ಬರ ಪರಿಸ್ಥಿತಿ ಹಾಗೂ ಜಿಲ್ಲಾಡಳಿಗಳು ಕೈಗೊಂಡಿರುವ ಮುಂಜಾಗ್ರತೆ ಹಾಗೂ ಪರಿಹಾರ ಕ್ರಮಗಳನ್ನು ಪರಾಮರ್ಶಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದೆ.  ರಾಜ್ಯದ 22 ಜಿಲ್ಲೆಗಳಿಗೆ ಸ್ವತಃ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಬರಗಾಲದ ಸ್ಥಿತಿಯನ್ನು ಅವಲೋಕಿಸಿದ್ದೇನೆ. ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿ ಆಯಾ ವಿಭಾಗದ ಜಿಲ್ಲಾಧಿಕಾರಿಗಳ ಹಾಗೂ ತಹಶೀಲ್ದಾರರ ಸಭೆ ಜರುಗಿಸಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಜಿಲ್ಲಾ ಮಟ್ಟದಲ್ಲಿ ಬರ ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ 133 ಸಭೆಗಳನ್ನು ಜರುಗಿಸಿದ್ದಾರೆ ಎಂದರು.
18,171 ಕೋಟಿ ನೆರವು ಕೋರಿ ಕೇಂದ್ರಕ್ಕೆ ಮನವಿ: ರಾಜ್ಯದ 223 ತಾಲೂಕುಗಳು ತೀವ್ರ ಬರ ಪೀಡಿತ ಪ್ರದೇಶಗಳಾಗಿರುವುದರಿಂದ ರಾಜ್ಯ ಸರ್ಕಾರವು ರಾಜ್ಯದ ಪರಿಸ್ಥಿತಿಯನ್ನು ಅಧ್ಯಯನ ನಡೆಸಿ, ಅವಲೋಕಿಸಿ, ರೂ. 18,171 ಕೋಟಿ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಅಂತರ ಮಂತ್ರಾಲಯ ತಾಂತ್ರಿಕ ಸಮಿತಿ (ಐ.ಎಮ್.ಟಿ.ಸಿ.) ರಾಜ್ಯದ 13 ಜಿಲ್ಲೆಗಳಲ್ಲಿ ಬರ ಅಧ್ಯಯನ ಪ್ರವಾಸ ಮಾಡಿದೆ. ಅಧ್ಯಯನದ ನಂತರ ರಾಜ್ಯ ಸರ್ಕಾರದ ಅಧಿಕಾರಿಗಳು, ಮುಖ್ಯಮಂತ್ರಿಗಳೊಂದಿಗೂ ಸಮಾಲೋಚಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಆದರೆ ಕೇಂದ್ರದಿಂದ ಇಲ್ಲಿಯವರೆಗೂ ಯಾವುದೇ ಪರಿಹಾರ ರಾಜ್ಯಕ್ಕೆ ಬಂದಿಲ್ಲ. ಆದಷ್ಟು ಬೇಗ ಕೇಂದ್ರ ನೆರವು ನೀಡಬೇಕೆಂದು ಕಂದಾಯ ಸಚಿವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ: ರಾಜ್ಯದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಯಾವುದೇ ಗ್ರಾಮ ಹಾಗೂ ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಂಡು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದ 26 ಗ್ರಾಮಗಳಲ್ಲಿ ಈಗ ಕುಡಿಯುವ ನೀರಿನ ಸಮಸ್ಯೆ ಇದೆ. ಇವುಗಳಲ್ಲಿ 11 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಮತ್ತು 9 ಗ್ರಾಮಗಳಿಗೆ ಖಾಸಗಿ ಬೋರವೇಲ್ ಬಾಡಿಗೆ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ. ನಗರ ಪ್ರದೇಶದ ನಾಲ್ಕು ವಾರ್ಡ್‍ಗಳಲ್ಲಿ ಕುಡಿಯುವ ನೀರಿನ  ಕೊರತೆಯಾಗಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಭವಿಷ್ಯದಲ್ಲಿ 6,237 ಗ್ರಾಮಗಳಲ್ಲಿ ಸಮಸ್ಯೆ ಸಾಧ್ಯತೆ: ರಾಜ್ಯ ಸರ್ಕಾರವು ಸಮರ್ಥವಾಗಿ ಬರ ನಿರ್ವಹಿಸಲು ಪ್ರೋ ಆ್ಯಕ್ಟಿವ್ ಆಗಿ ಕೆಲಸ ಮಾಡಿದೆ. ಕಳೆದ 10 ವರ್ಷಗಳ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಜನವರಿ-ಫೆಬ್ರವರಿ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಸುಮಾರು 6,237 ಸಮಸ್ಯಾತ್ಮಕ ಗ್ರಾಮಗಳನ್ನು ಮತ್ತು ನಗರ ಪ್ರದೇಶದ 914 ವಾರ್ಡ್‍ಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಪ್ರದೇಶಗಳೆಂದು ಗುರುತಿಸಿ ಮುಂಜಾಗ್ರತೆಯಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಈಗಾಗಲೇ 3,672 ಖಾಸಗಿ ಬೋರವೇಲ್‍ಗಳನ್ನು ಗುರುತಿಸಿ ಬಾಡಿಗೆಗೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಮತ್ತು ಉಳಿದಂತೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಶಾಸಕರ ಅಧ್ಯಕ್ಷತೆಯ ಟಾಸ್ಕ್‍ಫೋರ್ಸ್ ಕ್ರಿಯಾಶೀಲ: ಪ್ರತಿ ತಾಲೂಕಿನಲ್ಲಿ ಬರ ನಿರ್ವಹಣೆಗಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‍ಫೋರ್ಸ್ ಸಮಿತಿಗಳನ್ನು ರಚಿಸಿ, ಅಗತ್ಯ ಹಣ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಶಾಸಕರ ಅಧ್ಯಕ್ಷತೆಯ 183 ಟಾಸ್ಕ್‍ಫೋರ್ಸ್ ಸಮಿತಿ ಸಭೆಗಳು ಜರುಗಿವೆ.
ಗ್ರಾಮ ಪಂಚಾಯತ್ ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿ ರಚನೆ: ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕ್ಷೇತ್ರ ಮಟ್ಟದ ಸಮಸ್ಯೆಗಳನ್ನು ಗುರುತಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯತ್ ಮಟ್ಟದ ಟಾಸ್ಕ್‍ಪೋರ್ಸ್ ರಚಿಸಿದೆ. ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ.), ಕುಡಿಯುವ ನೀರು ವಿಭಾಗದ ಅಸಿಸ್ಟಂಟ್ ಇಂಜನಿಯರ್ ಮತ್ತು ಗ್ರಾಮ ಆಡಳಿತ ಅಧಿಕಾರಿ ಇರುವ ಈ ಸಮಿತಿಯು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು, ಮೇವು ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಈ ಕುರಿತು ನಿರ್ಣಯ ಕೈಗೊಂಡು ತಹಶೀಲ್ದಾರರಿಗೆ ಸಲ್ಲಿಸಬೇಕು. ಈ ಸಮಿತಿ ಮನವಿಯನ್ನು ಪರಿಗಣಿಸಿ 24 ಗಂಟೆಯಲ್ಲಿ ನೀರು ಪೂರೈಸಲು ತಹಶೀಲ್ದಾರರು ತಕ್ಷಣ ಕ್ರಮವಹಿಸಬೇಕು. ವಿಶೇಷವಾಗಿ ಈ ಸಮಿತಿ ಕುಡಿಯುವ ನೀರಿನ ಕುರಿತು ಮತ್ತು ಮೇವು, ಟ್ಯಾಂಕರ್ ನೀರು ಸರಬರಾಜು, ಬಾಡಿಗೆ ಬೋರವೇಲ್, ನೀರು ಸರಬರಾಜು ಪೈಪ್‍ಲೈನ್ ದುರಸ್ತಿ ಕಾರ್ಯಗಳಿಗೆ ಗಮನಹರಿಸಲಿದೆ. ಇದಕ್ಕಾಗಿ ಅನುದಾನ ಕೊರತೆಯಾಗದಂತೆ ತಹಶೀಲ್ದಾರರ ಖಾತೆಗೆ ರೂ. 50 ಲಕ್ಷ ಬಿಡುಗಡೆ ಮಾಡುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸದನದಲ್ಲಿ ತಿಳಿಸಿದರು.
ಮೊದಲ ಕಂತು ರೂ. 2,000 ಗಳ ಬರ ಪರಿಹಾರ ಬಿಡುಗಡೆ: ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಪರಿಹಾರ ಹಣ ಬಿಡುಗಡೆ ಮಾಡಿಲ್ಲ.  ಆದರೂ ರಾಜ್ಯ ಸರ್ಕಾರವು ಮೊದಲ ಕಂತಾಗಿ ರೂ. 2,000 ಗಳನ್ನು ಬರ ಪರಿಹಾರವಾಗಿ ನೀಡಲು ನಿರ್ಧರಿಸಿದೆ. ಈ ವಾರದಲ್ಲಿ ರಾಜ್ಯದ ರೈತರಿಗೆ ಪರಿಹಾರ ಹಣ ಜಮೆಯಾಗಲಿದೆ. ಪರಿಹಾರ ಹಣ ದುರುಪಯೋಗ ಆಗಿರುವ ಬಗ್ಗೆ ಹಿಂದಿನ ಪ್ರಕರಣಗಳ ಹಿನ್ನೆಲೆಯಲ್ಲಿ ಯಾವುದೆ ಹಸ್ತಕ್ಷೇಪ ಇಲ್ಲದೇ ನೇರವಾಗಿ ಆಯಾ ರೈತರ ಖಾತೆಗೆ ಆಟೋಮೆಟಿಕ್ ಮೋಡ್‍ನಲ್ಲಿ ಜಮೆಯಾಗುವಂತೆ ಕ್ರಮಕೈಗೊಳ್ಳಲಾಗಿದೆ. ಈ ವಾರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಪರಿಹಾರ ಜಮೆ ಮೊದಲ ಪೇಮೆಂಟ್ ಮಾಡಲಾಗುತ್ತದೆ ಎಂದು ಕಂದಾಯ ಸಚಿವರು ಸದನದಲ್ಲಿ ತಿಳಿಸಿದರು.

ಮನರೇಗಾ ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಪತ್ರ
-ಮುಖ್ಯಮಂತ್ರಿ ಸಿದ್ದರಾಮಯ್ಯ

ಸುವರ್ಣಸೌಧ ಬೆಳಗಾವಿ ಡಿ.11:  ಭೀಕರ ಬರಗಾಲದ ಹಿನ್ನಲೆಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸ್ತುತ ಇರುವ 100 ಮಾನವ ದಿನಗಳ ಸೃಜನೆಯ ಮಿತಿಯನ್ನು, 150ಕ್ಕೆ ಹೆಚ್ಚಿಸುವಂತೆ ಕೋರಿ 2 ತಿಂಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಸೋಮವಾರ ಬೆಳಗಾವಿ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಬರಗಾಲದ ಚರ್ಚೆಗೆ ವೇಳೆ ಅವರು ಮಾತನಾಡಿದರು.
ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ಜನರು ಉದ್ಯೋಗ ದೊರಕದೆ ಗುಳೆ ಹೋಗುವುದನ್ನು ತಡೆಯಲು ನರೇಗಾ ಪರಿಣಾಮಕಾರಿಯಾಗಿದೆ. ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ ಬರಗಾಲದ ಸಂದರ್ಭದಲ್ಲಿ ಹೆಚ್ಚುವರಿಯಾಗಿ 50 ಮಾನವ ದಿನಗಳನ್ನು ಸೃಜಿಸಲು ಅವಕಾಶವಿದೆ. ಈ ಕಾರಣದಿಂದಾಗಿ ಹೆಚ್ಚುವರಿ ಮಾನವ ದಿನಗಳ ಸೃಜನೆ ಅವಕಾಶ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಬರಗಾಲವನ್ನು ಎದುರಿಸಲು ಸಿದ್ದವಾಗಿದೆ. ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಬಳಿ ರೂ.800 ರಿಂದ 900 ಕೋಟಿ ರೂಪಾಯಿ ಹಣ ಲಭ್ಯವಿದೆ. ಇದನ್ನು ಕುಡಿಯುವ ನೀರು, ಮೇವು ಖರೀದಿ ಸೇರಿದಂತೆ ಅಗತ್ಯ ಕಾರ್ಯಗಳಿಗೆ ಬಳಸಬಹುದಾಗಿದೆ. ಸರ್ಕಾರ ಬರಗಾಲ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ಸಿದ್ದವಿದೆ. ಮಹದಾಯಿ, ಕೃಷ್ಣಾ ಮೇಲ್ದಂಡೆ, ತುಂಗಭದ್ರಾ ನೀರಾವರಿ ಯೋಜನೆಗಳ ಕುರಿತು ಸಮಪರ್ಕ ಉತ್ತರ ನೀಡಲಾಗುವುದು. ವಿರೋಧ ಪಕ್ಷಗಳು ಇದರ ಹೊರತಾಗಿ ಬೇರೆ ಯಾವುದೆ ವಿಚಾರವನ್ನು ಚರ್ಚಿಸಲು ಇಚ್ಛಿಸಿದರೆ ಸಭಾಧ್ಯಕ್ಷರಿಗೆ ನಿಯಮಾನುಸಾರ ನೋಟಿಸ್ ನೀಡಿ. ಇದರ ಬಗ್ಗೆಯೂ ಚರ್ಚಿಸಲು ಸರ್ಕಾರ ಸಿದ್ದವಿದೆ. ಸದನದ ಕಲಾಪಗಳಿಗೆ ಅಡ್ಡಿಪಡಿಸಿ ಕಾಲವನ್ನು ಹರಣ ಮಾಡುವುದನ್ನು ಬಿಟ್ಟು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

5 ವಿಧೇಯಕಗಳ ಮಂಡನೆ

ಸುವರ್ಣಸೌಧ ಬೆಳಗಾವಿ ಡಿ.11:  : ಸೋಮವಾರದ ವಿಧಾನ ಸಭಾ ಕಲಾಪದಲ್ಲಿ 5 ವಿಧೇಯಕಗಳನ್ನು ಮಂಡಿಸಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 2023ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಲವು ಇತರೆ ಕಾನೂನು ತಿದ್ದುಪಡಿ ವಿಧೇಯಕ, ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ 2023ರ ನ್ಯಾಯವಾದಿಗಳ ವಿರುದ್ಧ ಹಿಂಸಾಚರ ವಿರೋಧಿ ತಿದ್ದುಪಡಿ ವಿಧೇಯಕ, 2023ರ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ ತಿದ್ದುಪಡಿ ವಿಧೇಯಕ, ಕಂದಾಯ ಸಚಿವ ಕೃಷ್ಣಭೈರೇಗೌಡ 2023ರ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ, ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಸುರೇಶ್ ಬಿ.ಎಸ್. 2023ರ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಮಂಡಿಸಿದರು. ಈ ವಿಧೇಯಕಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ.
ಇದೇ ವೇಳೆ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದ ಸಿದ್ಧರಾಮಯ್ಯನವರು  2023-24ನೇ ಸಾಲಿನ ಪೂರಕ ಅಂದಾಜುಗಳು-ಮೊದಲನೇ ಕಂತಿನ ಬೇಡಿಕೆಗಳ ಪ್ರಸ್ತಾವನೆಗಳನ್ನು ಸದನದಲ್ಲಿ ಮಂಡಿಸಿದರು.

ಖಾಲಿ ಇರುವ ಸರ್ಕಾರಿ ಜಾಗಗಳ ರಕ್ಷಣೆಗೆ ಬೀಟ್ ಸಿಸ್ಟಂ
-ಕಂದಾಯ ಸಚಿವ ಕೃಷ್ಣಭೈರೇಗೌಡ

ಸುವರ್ಣಸೌಧ ಬೆಳಗಾವಿ ಡಿ.11:  : ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಜಾಗಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಮೊಬೈಲ್ ಆಪ್ ಮೂಲಕ ಖಾಲಿ ಜಾಗಗಳ ಜಿ.ಪಿ.ಎಸ್ ಲೋಕೇಷನ್ ಮಾರ್ಕ್ ಮಾಡಿ, ಬೌಂಡರಿ ಫಿಕ್ಸ್ ಮಾಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಖಾಲಿ ಜಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲು ಬೀಟ್ ಸಿಸ್ಟಂ ಜಾರಿ ಮಾಡಲಾಗಿದೆ. ಒತ್ತುವರಿ ಯಾಗಿರುವುದು ಕಂಡುಬಂದರೆ ಕೂಡಲೇ ಸಂಬಂಧ ಪಟ್ಟ ತಹಶೀಲ್ದಾರ್ ತೆರವುಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಸೋಮವಾರ ವಿಧಾನ ಸಭಾ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಮಂಡ್ಯ ಶಾಸಕ ರವಿಕುಮಾರಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಬೀಟ್ ಸಿಸ್ಟಂ ಮೊಬೈಲ್ ಲೋಕೇಷನ್ ಆಧಾರದ ಮೇಲೆ ಕಾರ್ಯ ನಿರ್ವಹಿಸುವುದರಿಂದ ಅಧಿಕಾರಿಗಳು ಕಡ್ಡಾಯ ಸ್ಥಳಕ್ಕೇ ತೆರಳಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಜಾಗಗಳನ್ನು ಕಬಳಿಸುವಲ್ಲಿ ಅಧಿಕಾರಿಗಳು ಶಾಮೀಲು ಆಗುತ್ತಿದ್ದಾರೆ ದುರ್ದೈವದ ಸಂಗತಿ. ಈಗಿರುವ ಕಾನೂನುಗಳನ್ನು ಸರಿಯಾಗಿ ಪಾಲನೆ ಮಾಡಿದರೆ ಸರ್ಕಾರಿ ಜಾಗಗಳನ್ನು ರಕ್ಷಿಸಿಕೊಳ್ಳಬಹುದು ಎಂದರು.

 

ಹಿರಿಯ ನಟಿ ಡಾ.ಲೀಲಾವತಿ ನಿಧನಕ್ಕೆ ವಿಧಾನಸಭೆ ಸಂತಾಪ
 

ಸುವರ್ಣಸೌಧ ಬೆಳಗಾವಿ  ಡಿ.11:  ಬೆಳಗಾವಿ ಚಳಿಗಾಲದ ಅಧಿವೇಶನದ ಸೋಮವಾರದ ವಿಧಾನಸಭೆ ಕಲಾಪದಲ್ಲಿ, ಡಿ.8 ರಂದು ನಿಧನರಾದ ಹಿರಿಯ ಚಲಚಿತ್ರ ನಟಿ ಡಾ.ಲೀಲಾವತಿ ನಿಧನಕ್ಕೆ ಸಂತಾಪ ಸೂಚಿಸಿ ಒಂದು ನಿಮಿಷದ ಮೌನಾಚರಣೆ ಆಚರಿಸಲಾಯಿತು.
ಸಭಾಧ್ಯಕ್ಷ ಯು.ಟಿ.ಖಾದರ್ ಸಂತಾಪ ಸೂಚನೆ ನಿರ್ಣಯ ಮಂಡಿಸಿ, ಡಾ.ಲೀಲಾವತಿ ನಾಯಕಿಯಾಗಿ, ಪೋಷಕ ನಟಿಯಾಗಿ ವಿಭಿನ್ನ ಹಾಗೂ ವೈವಿಧ್ಯಮಯ ಪಾತ್ರಗಳಲ್ಲಿ ಕಪ್ಪು-ಬಿಳುಪು ಕಾಲದಿಂದ ಕಲರ್‍ಪುಲ್ ಸಿನಿಮಾ ಸ್ಕೋಪ್‍ವರೆಗೆ ಎಲ್ಲಾ ಪ್ರಸಿದ್ಧ ನಾಯಕ ನಟರೊಂದಿಗೆ ನಟಿಸಿ ಜನಪ್ರಿಯರಾಗಿದ್ದರು. ಕಾಲೇಜ್ ಹಿರೋ ಚಿತ್ರ ನಿರ್ಮಿಸಿದ್ದ ಅವರು ಕನ್ನಡದ ಕಂದ ಚಲನಚಿತ್ರಕ್ಕೆ ಚಿತ್ರಕಥೆ ಬರೆದಿದ್ದರು. ಡಾ.ರಾಜಕುಮಾರ್ ಹಾಗೂ ಫಿಲಂ ಫೇರ್ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು ಎಂದರು.
ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್, ಡಾ.ಲೀಲಾವತಿ ಅತಿ ವಿರಳ ಹಾಗೂ ಅಪರೂಪದ ತಾರೆಯಾಗಿದ್ದರು. ತಮ್ಮ ಸ್ವಂತ ಹಣದಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ಪಶುಚಿಕಿತ್ಸಾಲಯ ಕಟ್ಟಿಸಿ ಸಮಾಜ ಸೇವೆಯನ್ನು ಮಾಡಿದ್ದಾರೆ. ಅವರ ಪಾತ್ರಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಿವೆ. ಅವರ ಅಗಲಿಕೆ ಚಿತ್ರ ಪ್ರೇಮಿಗಳು ಹಾಗೂ ಎಲ್ಲಾ ಪ್ರಾಣಿಪ್ರಿಯರಿಗೂ ತುಂಬಲಾರದ ನಷ್ಟವಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಅಭಿನಯಸಿ ಡಾ.ಲೀಲಾವತಿಯವರು ತಮ್ಮ ಪ್ರೌಢಿಮೆಯನ್ನು ಮೆರೆದಿದ್ದಾರೆ. ಸಮಾಜ ನನಗೇನು ಕೊಟ್ಟಿದೆ? ಎಂದು ಯೋಚಿಸುವವರ ಮಧ್ಯೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಧೀಮಂತ ವ್ಯಕ್ತಿತ್ವ ಅವರದು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಆಸ್ಪತ್ರೆ ಕಟ್ಟಲು ಅನುಮತಿ ಕೊಡಿಸುವಂತೆ ನನ್ನ ಬಳಿ ಬಂದಿದ್ದರು. ಡಾ.ಲೀಲಾವತಿ ಅವರು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಆಸ್ಪತ್ರೆಯಲ್ಲಿ ಅವರ ಪ್ರತಿಮೆಯನ್ನು ನಿರ್ಮಿಸುವಂತೆ ಸರ್ಕಾರಕ್ಕೆ ಕೋರಿದರು.
ಜೆ.ಡಿ.ಎಸ್.ಶಾಸಕ ಬಾಲಕೃಷ್ಣ ಮಾತನಾಡಿ, 42 ಚಿತ್ರಗಳಲ್ಲಿ ಡಾ.ರಾಜ್‍ಕುಮಾರ್ ಅವರೊಂದಿಗೆ ಅಭಿನಯಸಿದ್ದ ಡಾ.ಲೀಲಾವತಿಯವರು ಆರಂಭದಲ್ಲಿ ತುಂಬಾ ಸಂಕಷ್ಟ ಅನುಭವಿಸಿ ಚಿತ್ರರಂಗಕ್ಕೆ ಆಗಮಿಸಿದ್ದರು. ಮಗ ವಿನೋದ್‍ಕುಮಾರ್ ಅವರೊಂದಿಗಿನ ಅವರ ಬಾಂಧವ್ಯ ಎಲ್ಲರಿಗೂ ಪ್ರೇರಣೆಯಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಡಾ.ಲೀಲಾವತಿ ಅವರು ಅಜಾತಶತ್ರುವಾಗಿದ್ದರು. ಸುಮಾರು 32 ವರ್ಷಗಳಿಂದ ವೈಯಕ್ತಿಕವಾಗಿ ಪರಿಚಯವಿದ್ದರು. ಕಳೆದ 20 ದಿನಗಳ ಹಿಂದೆ ನನ್ನ ಮನೆಗೆ ಆಗಮಿಸಿ ನೂತನವಾಗಿ ನಿರ್ಮಿಸಿದ್ದ ಪಶು ಆಸ್ಪತ್ರೆ ಉದ್ಘಾಟನೆ ಮಾಡುವಂತೆ ನನ್ನನ್ನು ಆಹ್ವಾನಿಸಿದ್ದರು. ಅವರ ಆಹ್ವಾನದ ಮೇರೆಗೆ ಹೋಗಿ ಪಶು ಆಸ್ಪತ್ರೆ ಉದ್ಘಾಟಿಸಿ, ಅಗತ್ಯ ಇರುವ ಸಿಬ್ಬಂದಿ ನೇಮಿಸಿ ಆಸ್ಪತ್ರೆ ಕಾರ್ಯಾರಂಭ ಮಾಡಲು ಅನುವು ಮಾಡಿಕೊಟ್ಟಿದ್ದೆ. ಸಮಾಜ ಸೇವೆ ಮಾಡಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ದೈವತ್ವ ಗುಣ, ಶಾಂತಿ ಹಾಗೂ ಸಂತೋಷ, ತೃಪ್ತಿ ಅವರಲ್ಲಿ ಮನೆ ಮಾಡಿತ್ತು. ವಿರೋಧ ಪಕ್ಷದ ನಾಯಕರ ಸಲಹೆಯಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆಸ್ಪತ್ರೆ ಬಳಿ ಡಾ.ಲೀಲಾವತಿ ಅವರ ಪ್ರತಿಮೆ ನಿರ್ಮಿಸುವುದಾಗಿ ಹೇಳಿದರು.

5 ವಿಧೇಯಕಗಳಿಗೆ ಅಂಗೀಕಾರ

ಸುವರ್ಣಸೌಧ ಬೆಳಗಾವಿ  ಡಿ.11:  ಸೋಮವಾರದ ವಿಧಾನ ಸಭಾ ಕಲಾಪದಲ್ಲಿ 5 ಪ್ರಮುಖ ವಿಧೇಯಕಗಳಿಗೆ ಅನುಮೋದನೆ ನೀಡಿ ಅಂಗೀಕರಿಸಲಾಗಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್, 2023ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಎರಡನೇ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಪರ್ಯಾಲೋಚನೆಗೆ ಮಂಡಿಸಿ, ಕೇಂದ್ರ ಜಿ.ಎಸ್.ಟಿ. ಕೌನ್ಸಿಲ್ ಸೂಚಿಸಿದ ಆಧಾರದಲ್ಲಿ ತಿದ್ದುಪಡಿ ವಿಧೇಯ ಮಂಡಿಸಲಾಗಿದೆ.  ಕ್ಯಾಸಿನೋ, ಆನ್‍ಲೈನ್ ಬೆಟ್ಟಿಂಗ್ ನಿಯಂತ್ರಿಸಲು ವಿಧೇಯಕ ಸಹಕಾರಿಯಾಗಲಿದೆ ಎಂದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪರವಾಗಿ 2023ನೇ ಸಾಲಿನ ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಪರ್ಯಾಲೋಚನೆಗೆ ಮಂಡಿಸಿದರು.
ಈ ಮೊದಲು ರಾಜ್ಯದಲ್ಲಿ ವೈದ್ಯಕೀಯ ಪದವಿ ಪೂರೈಸಿದವರು ಕಡ್ಡಾಯವಾಗಿ ಒಂದು ವರ್ಷಗಳ ಗ್ರಾಮೀಣ ಸೇವೆ ಸಲ್ಲಿಸಬೇಕಾಗಿತ್ತು. ಸದ್ಯ ಸರ್ಕಾರ ಖಾಲಿ ಇರುವ ವೈದ್ಯರ ನೇಮಕಾತಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳುತ್ತಿದೆ. ಇದರೊಂದಿಗೆ ಸ್ನಾತಕೋತ್ತರ ಅಧ್ಯಯನ ಮಾಡುವ ವೈದ್ಯಕೀಯ ವಿದ್ಯಾರ್ಥಿಗಳು ಹೆಚ್ಚಾಗಿ ಇರುವುದರಿಂದ ಕಡ್ಡಾಯ ಸೇವೆ ಬದಲಿಗೆ ರಾಜ್ಯ ಸರ್ಕಾರ ಸೂಚಿಸಿದಲ್ಲಿ ಸೇವೆ ಸಲ್ಲಿಸುವ ಅವಕಾಶ ತಿದ್ದುಪಡಿ ಅವಕಾಶದಲ್ಲಿ ಕಲ್ಪಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ನಂತರ 2023ನೇ ಸಾಲಿನ ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ, 1994, 2000 ಹಾಗೂ 2011 ರಿಂದಲೂ ರಾಜ್ಯದಲ್ಲಿ ಸುಮಾರು 54 ವಿವಿಧ ದಾಖಲೆಗಳ ಮೇಲೆ ವಿಧಿಸಲಾಗುತ್ತಿದ್ದ ಸ್ಟಾಂಪು ಮೇಲಿನ ಶುಲ್ಕವನ್ನು ಬದಲಾಯಿಸಿಲ್ಲ. ಈ ಶುಲ್ಕಗಳ ಮೇಲಿನ ದರ ಪರಿಷ್ಕರಣೆ ಮಾಡುವ ಸಲುವಾಗಿ ವಿಧೇಯಕದಲ್ಲಿ ತಿದ್ದುಪಡಿ ತರಲಾಗಿದೆ. ಸದನ ಇದಕ್ಕೆ ಅನುಮೊದನೆ ನೀಡುವಂತೆ ಕೋರಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪರವಾಗಿ 2023ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ಸಚಿವ ಕೃಷ್ಣ ಬೈರೇಗೌಡ ಸದನದಲ್ಲಿ ಪರ್ಯಾಲೋಚನೆಗೆ ಮಂಡಿಸಿದರು.
ರಾಜ್ಯದ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಪ್ರತಿ ಹಂದಿನೆಂಟು ಸಾವಿರದಿಂದ ಇಪ್ಪತ್ತೈದು ಸಾವಿರದ ನಡುವಣ ಗ್ರಾಮೀಣ ಜನಸಂಖ್ಯೆಗೆ ಓರ್ವ ಜಿಲ್ಲಾ ಪಂಚಾಯತಿ ಸದಸ್ಯರ ಆಯ್ಕೆಗೆ ಅವಕಾಶ ಕಲ್ಪಿಸಿ ತಿದ್ದುಪಡಿ ವಿಧೇಯಕ ತರಲಾಗಿದೆ. ಏಳು ಲಕ್ಷಕ್ಕಿಂತ ಒಂಬತ್ತು ಲಕ್ಷದ ಐವತ್ತು ಸಾವಿರವನ್ನು ಮೀರದ ಗ್ರಾಮೀಣ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯ ಸಂದರ್ಭದಲ್ಲಿ 28 ಜಿಲ್ಲಾ ಪಂಚಾಯತಿ ಸದಸ್ಯರು ಇರಲು ಮಿತಿ ಹೆಚ್ಚಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.
ಶಾಸಕ ಪೊನ್ನಣ್ಣ, ಡಾ.ಮಂಥರ್ ಗೌಡ, ಮಲೆನಾಡು ಭಾಗದಲ್ಲಿ ಹದಿನೇಳು ಸಾವಿರದಿಂದ ಇಪ್ಪತ್ತೈದು ಸಾವಿರದ ನಡುವಣ ಗ್ರಾಮೀಣ ಜನಸಂಖ್ಯೆಗೆ ಓರ್ವ ಜಿಲ್ಲಾ ಪಂಚಾಯತಿ ಸದಸ್ಯರ ಆಯ್ಕೆಗೆ ಅವಕಾಶ ಕಲ್ಪಿಸಿ ತಿದ್ದುಪಡಿ ಮಾಡಬೇಕು ಎಂದು ಕೋರಿದರು.
ರೋಣ ಶಾಸಕ ಜಿ.ಎಸ್.ಪಾಟೀಲ್ ರಾಜ್ಯದ ಎಲ್ಲಡೆ ಇಪ್ಪತ್ತೈದು ಸಾವಿರದಿಂದ ಮುವತ್ತೈದು ಸಾವಿರದ ನಡುವಣ ಗ್ರಾಮೀಣ ಜನಸಂಖ್ಯೆಗೆ ಓರ್ವ ಜಿಲ್ಲಾ ಪಂಚಾಯತಿ ಸದಸ್ಯರ ಆಯ್ಕೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.
ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ವ್ಯಾಪ್ತಿಗೆ ಒಳಪಟ್ಟಂತೆ ಇರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಬದಲಿಗೆ, ಕರಾವಳಿ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ವಿಧೇಯಕವನ್ನು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಸದನದಲ್ಲಿ ಪರ್ಯಾಲೋಚನೆಗೆ ಮಂಡಿಸಿದರು.
ಚರ್ಚೆಗಳ ತರುವಾಯ ವಿಧೇಯಕಗಳನ್ನು ಸಭಾಧ್ಯಕ್ಷ ಯು.ಟಿ.ಖಾಧರ್ ಸದನ ಮುಂದೆ ತಂದರು. ಸದನವು ತನ್ನ ಅನುಮೋದನೆಯೊಂದಿಗೆ ಅಂಗೀಕಾರ ನೀಡಿತು. ವಿಧಾನ ಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕಗಳು ಇದೇ ಅಧಿವೇಶನದಲ್ಲಿ ವಿಧಾನ ಪರಿಷತ್‍ನಲ್ಲಿ ಚರ್ಚೆಗೆ ಬರಲಿವೆ.
ಆನೆ ಹಾವಳಿ ತಡೆಗೆ 200 ಕೋಟಿ ರೂ ವೆಚ್ಚದಲ್ಲಿ ಬ್ಯಾರಿಕೇಡ್ ನಿರ್ಮಾಣ
– ಅರಣ್ಯ ಸಚಿವ ಈಶ್ವರ ಖಂಡ್ರೆ

ಬೆಳಗಾವಿ ಸುವರ್ಣಸೌಧ,ಡಿ.11: ರಾಜ್ಯದಲ್ಲಿ ಆನೆ  ಮತ್ತು ಮಾನವ  ಸಂಘರ್ಷ ತಪ್ಪಿಸಲು 200 ಕೋಟಿ ರೂ ವೆಚ್ಚದಲ್ಲಿ ಬ್ಯಾರಿಕೇಡ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಇಂದು ವಿಧಾನ ಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಕೆ.ಹರೀಶ್ ಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ,  ಆನೆಗಳು ಜನವಸತಿ ಪ್ರದೇಶಕ್ಕೆ ಬರುವುದನ್ನು ತಡೆಯಲು 640 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ 312 ಕಿ.ಮೀ. ಬ್ಯಾರಿಕೇಡ್ ಅಳವಡಿಸಲಾಗಿದ್ದು, ಒಟ್ಟು 200 ಕೋಟಿ ರೂ ವೆಚ್ಚದಲ್ಲಿ  ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಆನೆ ಹಾವಳಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಶೆ.90 ರಷ್ಟು ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದ್ದು, ಮಾನವ ಜೀವಹಾನಿಗೆ ಹೆಚ್ಚಿನ ಪರಿಹಾರ ನೀಡಲಾಗುವುದು ಎಂದರು.
ರಾಜ್ಯದಲ್ಲಿ ದಟ್ಟ ಅರಣ್ಯ ವ್ಯಾಪ್ತಿಯಲ್ಲಿ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಕಾಡಾನೆ ಹಾಳಿಯನ್ನು ತಡೆಯುವ ನಿಟ್ಟಿನಲ್ಲಿ ಹೆದ್ದಾರಿ ಪಕ್ಕದಲ್ಲಿ ಆನೆಗಳ ಇರುವಿಕೆಯ ಬಗ್ಗೆ ಎಚ್ಚರಿಕಾ ಫಲಕಗಳನ್ನು ಅಳವಡಿಸಲಾಗಿದೆ. ಕಾಡಾನೆ ಹಾವಳಿ ಹೆಚ್ಚಳವಾಗಿರುವ ಹಾಸನ, ಕೊಡಗು, ಚಿಕ್ಕಮಗಳೂರು, ಮೈಸೂರು ಮತ್ತು ಕೊಡಗು, ಚಾಮರಾಜನಗರ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಗೊಂದರಂತೆ ಅಧಿಕಾರಿ / ಸಿಬ್ಬಂದಿಗಳನ್ನು ಒಳಗೊಂಡ ಆನೆ ಕಾರ್ಯಪಡೆಯನ್ನು ರಚಿಸಲಾಗಿದೆ.
ವನ್ಯಪ್ರಾಣಿಗಳಿಗಾಗಿ ಅರಣ್ಯ ಪ್ರದೇಶಗಳ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತಾರಣ್ಯಗಳಲ್ಲಿ ಕೆರೆಗಳ ನಿರ್ಮಾಣ ಹಾಗೂ ಪುನಶ್ವೇತನಗೊಳಿಸಿ ವನ್ಯಪ್ರಾಣಿಗಳ ಆವಾಸ ಸ್ಥಾನವನ್ನು ಅಭಿವೃದ್ಧಿ ಗೊಳಿಸಲಾಗುತ್ತಿದೆ. ಇದರಿಂದ ಕಾಡಾನೆ ಹಾಗೂ ಇತರ ವನ್ಯಪ್ರಾಣಿಗಳು ಕಾಡಿನಿಂದ ಹೊರಗೆ ಬಾರದಂತೆ ತಡೆಯಲಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಹುಲ್ಲುಗಾವಲು ಸಂರಕ್ಷಣೆ ಹಾಗೂ ಅಭಿವೃದ್ಧಿಗೊಳಿಸಲು ಹೆಚ್ಚಿನ ಅರಣ್ಯ ಪ್ರದೇಶಗಳಲ್ಲಿ ದಟ್ಟವಾಗಿ ಬೆಳೆದ ಲಂಟಾನ ಮತ್ತು ಯುಪಟೋರಿಯಂ ಕಳೆಗಳಿಂದಾಗಿ ಹುಲ್ಲಿನ ಬೆಳವಣಿಗೆಗೆ ತೀವ್ರ ಅಡಚಣೆಯಾಗಿ ಅರಣ್ಯದಲ್ಲಿ ಹುಲ್ಲಿನ ಲಭ್ಯತೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಹುಲ್ಲು ಬೆಳೆಯುವ  ಪ್ರದೇಶಗಳಲ್ಲಿ ಬೆಳೆದಿರುವ ಲಂಟಾನ ಮತ್ತು ಯುಪಟೋರಿಯಂ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಿ ಅರಣ್ಯಕ್ಕೆ ಪೂರಕವಾದ ಹುಲ್ಲು ಬೆಳೆಯಲು ಅನುವು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಮನೆ ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಾಣ/ನಿರ್ವಹಣೆ, ಆನೆ ತಡೆ ಕಂದಕ ನಿರ್ಮಾಣ/ನಿರ್ವಹಣೆ ಮಾಡಲಾಗಿದ್ದು ಮತ್ತು ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.  ಕಾಡಾನೆ ಹಾವಳಿ ತುರ್ತು ನಿರ್ವಹಣೆಗಾಗಿ ಕ್ಷಿಪ್ರ ಕಾರ್ಯಪಡೆ ತಂಡಗಳನ್ನು (RRT)  ರಚಿಸಿ ನಿರ್ವಹಿಸಲಾಗುತ್ತಿದೆ. ಕಾಡಾನೆ ಹಿಮ್ಮೆಟ್ಟಿಸುವ ತಂಡಗಳನ್ನು ರಚಿಸಿ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ನಿಸ್ತಂತು ಜಾಲದ ಮೂಲಕ ಮಾಹಿತಿ ಸಂವಹನ ಮಾಡಲಾಗುತ್ತಿದೆ. ಕಾಡಾನೆಗಳ ಮಾಹಿತಿಯನ್ನು ಸಂಗ್ರಹಿಸಲು 24  ಗಂಟೆ ಕಾರ್ಯನಿರ್ವಹಿಸುವ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಕಾಡಾನೆ ಗುಂಪಿನಲ್ಲಿದ್ದ ವಯಸ್ಕ ಹೆಣ್ಣಾನೆಯನ್ನು ಗುರುತಿಸಿ ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಆನೆಗಳ ಚಲನ-ವಲನಗಳ ಬಗ್ಗೆ ಎಸ್.ಎಂ.ಎಸ್ ಹಾಗೂ ವಾಟ್ಸಾಪ್ ಮೂಲಕ ಜನರಿಗೆ ಮಾಹಿತಿಯನ್ನು ನೀಡಿ ಮಾನವ ಪ್ರಾಣಹಾನಿ ಹಾಗೂ ಮಾನವ ಗಾಯ ತಪ್ಪಿಸಲು ಕ್ರಮ ವಹಿಸಲಾಗುತ್ತಿದೆ. ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಗುರುತಿಸಿ,  ಸೆರೆ ಹಿಡಿದು ಆಗ್ಗಿಂದಾಗ್ಗೆ ಸ್ಥಳಾಂತರಿಸಲಾಗುತ್ತಿದೆ. ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಜನ ಸಂಪರ್ಕ ಸಭೆಯನ್ನು ಕರೆದು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಪಡಿತರ ಅಕ್ಕಿ ಕಳ್ಳ ಸಾಗಾಣಿಕೆ ತಡೆಯಲು ಸಂಪೂರ್ಣ ಪ್ರಯತ್ನ
: ಸಚಿವ ಕೆ.ಹೆಚ್.ಮುನಿಯಪ್ಪ


ಬೆಳಗಾವಿ ಸುವರ್ಣಸೌಧ,ಡಿ.11: ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ಪದ್ದತಿಯಲ್ಲಿ ವಿತರಿಸುವ ಪಡಿತರ ಅಕ್ರಮ ತಡೆಗೆ ಸಂಪೂರ್ಣ ಪ್ರಯತ್ನ ಮಾಡಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಇಂದು ವಿಧಾನ ಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಭಾರತಿ ಶೆಟ್ಟಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸುವ ಪಡಿತರ ಅಕ್ರಮ ಸಾಗಾಣಿಕೆ ಕಂಡು ಬಂದಲ್ಲಿ ಕೂಡಲೇ ದಾಳಿ ನಡೆಸಿ, ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಪ್ರಕರಣ ದಾಖಲಿಸಿ, ಅಕ್ರಮ ಪಡಿತರ ದಾಸ್ತಾನು ಮುಟ್ಟುಗೋಲು ಹಾಕಿಕೊಂಡು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಮುಟ್ಟುಗೋಲು ದಾಸ್ತಾನನ್ನು ವಿಲೇ ಮಾಡಿ, ವಿಲೇ ಪಡಿಸಿದ ಪಡಿತರ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲಾಗುತ್ತಿದೆ.
ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದ – ವ್ಯಕ್ತಿಗಳ ವಿರುದ್ಧ ಹಾಗೂ ಈ ಘಟನೆಗಳಿಗೆ ಕಾರಣಕರ್ತರಾದ ಅಧಿಕಾರಿ/ನೌಕರರ ವಿರುದ್ಧ ಸಂಬಂಧಪಟ್ಟ ಪೆÇೀಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಿ ಆಪಾದನೆಗಳ ಬಗ್ಗೆ ದೋμÁರೋಪಣೆ ಪಟ್ಟಿಯನ್ನು ಸಂಬಂಧಿಸಿದ ನ್ಯಾಯಾಲಯಗಳಲ್ಲಿ ದಾಖಲಿಸಲಾಗುತ್ತಿದ್ದು, ಕಾನೂನು ರೀತ್ಯ ಕ್ರಮ ಜರುಗಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಏಪ್ರಿಲ್-2023 ರಿಂದ ನವೆಂಬರ್-2023 ರ ಅಂತ್ಯದವರೆಗೂ ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಪಡಿತರ ಆಹಾರಧಾನ್ಯ ಕಳ್ಳಸಾಗಾಣಿಕೆಯ ಒಟ್ಟು 251 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 232 ಪ್ರಕರಣಗಳಲ್ಲಿ ಎಫ್.ಐ.ಆರ್ ದಾಖಲಿಸಿದ್ದು, ಒಟ್ಟು 31,32,08,215 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, ಈ ಪ್ರಕರಣಗಳಲ್ಲಿ ಒಟ್ಟು 385 ಆರೋಪಿಗಳನ್ನು ಬಂಧಿಸಿ, 167 ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದರು.

ಹಿಮೋಫಿಲಿಯಾ ಪತ್ತೆಗೆ ಎಲ್ಲಾ ಜಿಲ್ಲಾ ಆಸ್ಪತೆಗಳಿಗೆ ಉಪಕರಣ ನೀಡಲಾಗುವುದು
: ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿ ಸುವರ್ಣಸೌಧ,ಡಿ.11: ರಾಜ್ಯದಲ್ಲಿ ಹಿಮೋಫಿಲಿಯಾ ರೋಗವನ್ನು ಶೀಘ್ರದಲ್ಲಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಹಿಮೋಫಿಲಿಯಾ  ಪತ್ತೆ ಹಚ್ಚುವ ಯಂತ್ರೋಪಕರಣಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ  ದಿನೇಶ್ ಗುಂಡೂರಾವ್  ಇಂದು ವಿಧಾನ ಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಎಸ್.ರುದ್ರೇಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ರಾಜ್ಯ ರಕ್ತಕೋಶ ಕಾರ್ಯಕ್ರಮದಡಿಯಲ್ಲಿ ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ಮತ್ತು ಆರೈಕೆಯನ್ನು ಮಾಡಲಾಗುತ್ತಿದೆ. ಹಿಮೋಫಿಲಿಯಾ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಗಾಗಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಕೆಲವು ವೈದ್ಯಕೀಯ ಆಸ್ಪತ್ರೆಗಳಲ್ಲಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ 6 ರಿಂದ 8 ಹಾಸಿಗೆಗಳ ದಿನದ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಆರೈಕೆ ಕೇಂದ್ರಗಳಲ್ಲಿ ಇಬ್ಬರು ಶುಶ್ರೂಷಕಿಯರಿಗೆ ರಕ್ತಸಂಬಂಧಿತ ಖಾಯಿಲೆಗಳ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಯ ಆರಂಭಿಕ ತರಬೇತಿಯನ್ನು ನೀಡಲಾಗಿದೆ. ಈ ಕೇಂದ್ರಗಳಲ್ಲಿ ಉಚಿತ ಆಂಟಿ ಹಿಮೋಫಿಲಿಯಾ, ಉಚಿತ ರಕ್ತ ನೀಡುವುದು, ಉಚಿತ ಸಮಾಲೋಚನೆ, ಉಚಿತ ಫೀಜಿಯೊಥೆರಪಿ,  Intra Cranial Bleeding ಹೆಚ್ಚಿನ ಚಿಕಿತ್ಸೆ, ಉಚಿತ   Genetic Counseling ,  ಉಚಿತ ರೋಗಪತ್ತೆ  (Screening)ಸೇವೆಗಳನ್ನು ಒದಗಿಸುತ್ತಿದ್ದು, ಒಬ್ಬ ಹಿಮೋಫಿಲಿಯಾ ರೋಗಿಗೆ ಪ್ರತಿ ವರ್ಷ ಅಂದಾಜು ರೂ. 3 ರಿಂದ 4 ಲಕ್ಷ ವೆಚ್ಚವಾಗಲಿದೆ ಎಂದರು.

      ಹಿಮೋಫಿಲಿಯಾ ರೋಗಕ್ಕೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಪ್ರತಿ ವರ್ಷ ಜಿಲ್ಲಾವಾರು  ಕಾರ್ಯಾಗಾರಗಳನ್ನು ಹಿಮೋಫಿಲಿಯಾ ಸೊಸೈಟಿ ಸಹಭಾಗಿತ್ವದೊಂದಿಗೆ ಆಯೋಜಿಸಿ ಮಾಹಿತಿಯನ್ನು ನೀಡಲಾಗುತ್ತಿದೆ. ಎಲ್ಲಾ ಹಿಮೋಫಿಲಿಯಾ ರೋಗಿಗಳಿಗೆ IEC     ಚಟುವಟಿಕೆ ಮತ್ತು ತರಬೇತಿ  (Rehabilitation Workshops) ಮುಖಾಂತರ ಹಿಮೋಫಿಲಿಯಾ ಆರೈಕೆ ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಪ್ರತಿ ವರ್ಷ 17ನೇ ಏಪ್ರಿಲ್ ರಂದು ವಿಶ್ವ ಹಿಮೋಫಿಲಿಯಾ ದಿನಾಚರಣೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಆಚರಿಸಲಾಗುತ್ತಿದ್ದು, ರಾಜ್ಯದಲ್ಲಿ ಈವರೆಗೆ 2706 ಹಿಮೋಫಿಲಿಯಾ ರೋಗಿಗಳನ್ನು ಪತ್ತೆ ಹಚ್ಚಲಾಗಿದೆ. ಇವರಿಗೆ ಆಂಟಿ ಹಿಮೋಫಿಲಿಯಾ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇದಕ್ಕಾಗಿ ವಾರ್ಷಿಕ 20 ರಿಂದ 30 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ ಎಂದರು.

 

ವಿಧಾನ ಪರಿಷತ್‌ನಲ್ಲಿ ನಟಿ ಲೀಲಾವತಿ
ನಿಧನಕ್ಕೆ ಸಂತಾಪ, ನುಡಿನಮನ
ಬೆಳಗಾವಿ: ಡಿಸೆಂಬರ್ 11::ಈ ನೆಲ ಕಂಡ ಅದ್ಭುತ ನಟಿ ಲೀಲಾವತಿ ಅವರ ನಿಧನಕ್ಕೆ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಸಂತಾಪ ಹಾಗೂ ನುಡಿನಮನ ಸಲ್ಲಿಸಲಾಯಿತು.
ವಿಧಾನ ಪರಿಷತ್‌ನಲ್ಲಿ ಡಿಸೆಂಬರ್ 11ರಂದು ಕಾರ್ಯಕಲಾಪ ಆರಂಭಿಸುವ ಮೊದಲು ಸಭಾಪತಿಯವರು ಸಂತಾಪ ಸೂಚನೆ ಮಂಡಿಸಿ, ಕನ್ನಡ ಚಲನಚಿತ್ರ ರಂಗದ ಅಪರೂಪದ ಸಾಧಕಿ, ನಟಿ ಲೀಲಾವತಿ ಅವರು ನಿಧನರಾದುದನ್ನು ಈ ಸದನಕ್ಕೆ ತಿಳಿಸಲು ವಿಷಾಧಿಸುತ್ತೇನೆ ಎಂದು ತಿಳಿಸಿದರು.
ನಟಿ ಲೀಲಾವತಿ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪರಮಾತ್ಮನು ಕರುಣಿಸಲೆಂದು ಪ್ರಾರ್ಥಿಸಿ ಸದನದ ಸದಸ್ಯರು ಮೃತರ ಗೌರವಾರ್ಥ ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿದರು.
ಉಪ ಸಭಾಪತಿ ಪ್ರಾಣೇಶ ಅವರು ನಟಿ ಲೀಲಾವತಿ ಅವರ ಕುರಿತು ಮಾತನಾಡಿ, ಕನ್ನಡ ಚಲನಚಿತ್ರ ರಂಗದ ಅಭಿಜಾತ ಕಲಾವಿದೆ ಶ್ರೀಮತಿ ಲೀಲಾವತಿ ಅವರು 2023ರ ಡಿಸೆಂಬರ್ 08ರಂದು ನಿಧನರಾದರು.1938ರಲ್ಲಿ ಕರ್ನಾಟಕದ ಮಂಗಳೂರು ಜಿಲ್ಲೆಯ, ಬೆಳ್ತಂಗಡಿಯಲ್ಲಿ ಜನಿಸಿದ್ದ ಶ್ರೀಯುತರು ಸುಬ್ಬಯ್ಯನಾಯ್ಡು ಕಂಪನಿಯಲ್ಲಿ ಕಲಾವಿದೆಯಾಗಿ ಪಾತ್ರಗಳನ್ನು ನಿರ್ವಹಿಸಿ ರಂಗಭೂಮಿ ಕಲಾವಿದೆಯಾಗಿ ಪರಿಪಕ್ವಗೊಂಡ ಇವರು 1949ರಲ್ಲಿ ನಾಗಕನ್ನಿಕೆ ಚಿತ್ರದ ಸಖಿ ಪಾತ್ರದ ಮೂಲಕ ಕನ್ನಡ ಚಲನಚಿತ್ರ ರಂಗ ಪ್ರವೇಶಿಸಿದ್ದು, ಮಾಂಗಲ್ಯ ಯೋಗ ಚಿತ್ರದ ಮೂಲಕ ನಾಯಕಿ ನಟಿಯಾಗಿ ಬೆಳ್ಳಿ ಪರದೆ ಮೇಲೆ ರಾರಾಜಿಸಿದ್ದರು. ಕಡು ಬಡತನದಲ್ಲೇ ಬೆಳೆದು ಸಾಧನೆಗೈದ ಸಾಧಕಿಯಾಗಿದ್ದರು. 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ ಶ್ರೀಯುತರು 400ಕ್ಕೂ ಹೆಚ್ಚು ಕನ್ನಡ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ, ತೆಲುಗು, ಮಲಯಾಳಂ, ತುಳು ಭಾಷೆಯ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಇವರು ಬಹುಭಾಷಾ ಕಲಾವಿದೆಯಾಗಿ ಬೆಳ್ಳಿಪರದೆಯಲ್ಲಿ ಮಿನುಗಿದ ನಕ್ಷತ್ರವಾಗಿದ್ದರು. ಐದು ದಶಕಗಳ ಸುದೀರ್ಘ ಬಣ್ಣದ ಲೋಕದಲ್ಲಿ ಅಪ್ರತಿಮ ಕಲಾವಿದೆಯಾಗಿ ಮೆರೆದ ಮೇರು ಪರ್ವತವಾಗಿದ್ದರು. ಚಲನ ಚಿತ್ರರಂಗದ ಸೂಪರ್‌ಸ್ಟಾರ್‌ಗಳಾದ ಡಾ: ರಾಜ್‌ಕುಮಾರ್, ಎನ್‌ಟಿಆರ್, ಎಎನ್‌ಆರ್, ತಮಿಳಿನ ಶಿವಾಜಿ ಗಣೇಶನ್, ಎಂ.ಜಿ.ಆರ್ ಅವರುಗಳ ಜೊತೆ ನಾಯಕಿ ನಟಿಯಾಗಿ ಅಭಿನಯಿಸಿದ ಇವರು ಮಾಡದ ಪಾತ್ರಗಳಿಲ್ಲ. 60ರ ದಶಕದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. ಕನ್ನಡದ ಮೇರು ನಟರಾದ ಡಾ:ರಾಜ್‌ಕುಮಾರ್ ಅವರ ಚಲನಚಿತ್ರಗಳಲ್ಲಿ ಖಾಯಂ ನಟಿಯಾಗಿದ್ದರು. ಅವರ ಚಿತ್ರದ ಹಾಡುಗಳು ಎಂದೆAದಿಗೂ ಜನಪ್ರಿಯವಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ಕುಲವಧು ಸಿನಿಮಾದಲ್ಲಿ ಲೀಲಾವತಿಯವರು ನಟಿಸಿರುವ ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಹಾಡು ನಮ್ಮ ಸಮಾಜ ಯುಗಾದಿ ಆಚರಿಸುವಷ್ಟೂ ದಿನ ಕಣ್ಣ ಮುಂದೆ ಬಂದೇ ಬರುತ್ತದೆ. ಸ್ನೇಹಮಯಿ, ಮೃದು ಸ್ವಭಾವ, ಮಾತೃ ಹೃದಯಿ ವ್ಯಕ್ತಿತ್ವ ಹೊಂದಿದ್ದ ಇವರು ಸಮಾಜ ಸೇವೆಯಲ್ಲಿಯೂ ಎತ್ತಿದ ಕೈಯಾಗಿದ್ದರು. ಸೋಲದೇವನಹಳ್ಳಿಯಲ್ಲಿ ತಮ್ಮ ಸ್ವಂತ ಹಣದಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ಚಿಕಿತ್ಸಾ ಕೇಂದ್ರವನ್ನು ನಿರ್ಮಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ತಮ್ಮ ಜೀವನದ ಕೊನೆಯವರೆವಿಗೂ ಭೂ ತಾಯಿಯ ಸೇವೆ ಮಾಡಿದ ಮಣ್ಣಿನ ಮಗಳಾಗಿದ್ದರು. ಮದುವೆ ಮಾಡಿ ನೋಡು, ಸಂತ ತುಕರಾಂ ಚಿತ್ರಗಳಲ್ಲಿನ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ, ತುಂಬಿದಕೊಡ, ಮಹಾತ್ಯಾಗ, ಭಕ್ತಕುಂಬಾರ, ಸಿಪಾಯಿ ರಾಮು, ಗೆಜ್ಜೆಪೂಜೆ ಸಿನಿಮಾದ ನಟನೆಗಾಗಿ ರಾಜ್ಯ ಪ್ರಶಸ್ತಿ, ಡಾ:ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, ಪೋಷಕ ನಟನೆಗಾಗಿ ಮೂರು ಬಾರಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರ ನಿಧನದಿಂದಾಗಿ ಕನ್ನಡ ಚಲನಚಿತ್ರ ರಂಗ ಬೆಳ್ಳಿಪರದೆಯ ಧ್ರುವತಾರೆಯೊಂದನ್ನು ಕಳೆದುಕೊಂಡAತಾಗಿದೆ ಎಂದು ತಿಳಿಸಿದರು.
ನುಡಿನಮನ: ಇದೆ ವೇಳೆ ವಿಧಾನ ಪರಿಷತನ ಸಭಾ ನಾಯಕರಾದ ಎನ್.ಎಸ್.ಬೋಸರಾಜು ಅವರು ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಒಬ್ಬ ಮಹಿಳಾ ಕಲಾವಿದೆ 600 ಸಿನೇಮಾಗಳಲ್ಲಿ ನಟಿಸಿರುವುದು ಅತ್ಯಂತ ಮಹತ್ ಸಾಧನೆಯಾಗಿದೆ. ಪ್ರತಿಯೊಂದು ಪಾತ್ರದಲ್ಲಿ ವಿಶಿಷ್ಟ ಚಾಪು ಮೂಡಿಸಿದ್ದಾರೆ. ಮೇರು ನಟ ಡಾ.ರಾಜಕುಮಾರ ಅವರ ಸಿನೇಮಾಗಳಲ್ಲಿ ಸಹ ಮನಮಿಡಿಯುವಂತೆ ನಟಿಸಿ ಅಭಿನಯಶಾರದೆಯಾಗಿ ಹೆಸರು ಮಾಡಿದ್ದಾರೆ ಎಂದು ತಿಳಿಸಿದರು.
ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ನಟಿ ಲೀಲಾವತಿ ಅವರು ಶ್ರೇಷ್ಟ ನಟರೊಂದಿಗೆ ಅಭಿನಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರ ಪುತ್ರ ನಟ ವಿನೋದ ರಾಜುಕುಮಾರ ಅವರು ತಾಯಿ ಲೀಲಾವತಿ ಅವರನ್ನು ಆರೈಕೆ ಮಾಡಿದ ರೀತಿ ನಿಜಕ್ಕೂ ಅನುಕರಣೀಯ. ಉತ್ತಮ ಅಭಿನಯಕ್ಕಾಗಿ ಲೀಲಾವತಿಯವರು ಚಿತ್ರರಂಗದ ಎಲ್ಲ ಪುರಸ್ಕಾರಗಳನ್ನು ಪಡೆದುಕೊಂಡರು. ಅವರ ಬಾಲ್ಯದ ಹಾಗು ವೃತ್ತಿ ಜೀವನದ ಅನುಭವಗಳು ಮತ್ತು ಪಡೆದ ಪ್ರಶಸ್ತಿಗಳು ಇತಿಹಾಸದಲ್ಲಿ ಚಿರಕಾಲ ದಾಖಲಾಗಿ ಉಳಿಯಲಿದೆ ಎಂದು ತಿಳಿಸಿದರು.
ಸದಸ್ಯರಾದ ಉಮಾಶ್ರೀ ಅವರು ಮಾತನಾಡಿ, ನಟಿ ಲೀಲಾವತಿ ಅವರು ಚಿತ್ರರಂಗದ ತಾಯಿಯಾಗಿದ್ದಾರೆ. ಬಾಲ್ಯದಿಂದ ಕೊನೆಯ ಜೀವನದವರೆಗೂ ಸಂತಸ ಜೀವನ ನಡೆಸಿದ ಮಹಾತಾಯಿ ಅವರು. ಅವರು ಮಾಡದ ಪಾತ್ರಗಳೇ ಇಲ್ಲ. ಅವರು ಅಭಿಯನದ ಶೈಲಿ, ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ರೀತಿ ಅನನ್ಯವಾಗಿದೆ. ಅವರ ನಿಧನದಿಂದ ಮನಸಿಗೆ ನೋವಾಗಿದೆ. ತಾಯಿ ನಟಿ ಲೀಲಾವತಿ ಅವರಂತೆಯೇ ಅವರ ಮಗ ನಟ ವಿನೋದರಾಜಕುಮಾರ ಸಹ ಮಗುವಿನ ಹಾಗೆ ತಾಯಿಯನ್ನು ನೋಡಿ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಮಾತನಾಡಿ, ಹಲವಾರು ತಲೆಮಾರುಗಳು ನೆನಪಿಡುವಂತಹ ಅತ್ಯುತ್ತಮ ನಟಿ ಲೀಲಾವತಿಯಾಗಿದ್ದಾರೆ. ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಹ ಸಾಧನೆ ಮಾಡಿದ ಲೀಲಾವತಿ ಅವರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡ ನಟ ವಿನೋದರಾಜಕುಮಾರ ನಮ್ಮ ಸಮಾಜಕ್ಕೆ ಮಾದರಿ ನಟರಾಗಿದ್ದಾರೆ ಎಂದು ತಿಳಿಸಿದರು. ರಾಜ್ಯ ಸರ್ಕಾರವು ಅವರ ಕುಟುಂಬದ ಕಷ್ಟ ನಷ್ಟಗಳಿಗೆ ಸ್ಪಂದಿಸಲಿದೆ ಎಂದು ತಿಳಿಸಿದರು.
ರಾಜ್ಯದ ಶಾಲೆಗಳಿಗೆ ಗುಣಮಟ್ಟದ ಸಮವಸ್ತç ವಿತರಣೆ
ಬೆಳಗಾವಿ: ಡಿಸೆಂಬರ್ 11:: ರಾಜ್ಯದ ಶಾಲೆಗಳಿಗೆ ಗುಣಮಟ್ಟದ ಸಮವಸ್ತç ಸರಬರಾಜು ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್.ಮಧುಬಂಗಾರಪ್ಪ ಅವರು ಹೇಳಿದರು.
ವಿಧಾನ ಪರಿಷತ್‌ನಲ್ಲಿ ಡಿಸೆಂಬರ್ 11ರಂದು ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಎನ್ ರವಿಕುಮಾರ ಅವರ ಪ್ರಶ್ನೆಗೆ ಉತ್ತರಿಸಿ, 2023-24ನೇ ಸಾಲಿಗೆ ಪ್ರತಿ ವಿದ್ಯಾರ್ಥಿಗೆ ಪಠ್ಯ ಪುಸ್ತಕಕ್ಕೆ ಸರಾಸರಿ 397 ರೂ. ವೆಚ್ಚ ಮಾಡಲಾಗಿದೆ.
ಶೂ ಮತ್ತು ಸಾಕ್ಸಗಳಿಗೆ 1 ರಿಂಧ 5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರೂ., 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 295 ರೂ., ಹಾಗೂ 9 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ.ಗಳನ್ನು ವೆಚ್ಚ ಮಾಡಲಾಗಿದೆ. ಅದೇ ರೀತಿ 1 ರಿಂದ 10ನೇ ತರಗತಿವರೆಗೆ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳಿಗೆ ತಲಾವಾರು ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
2023-24ನೇ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 55,43,828 ವಿದ್ಯಾರ್ಥಿಗಳಿಗೆ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಉಚಿತವಾಗಿ ಪಠ್ಯಪುಸ್ತಕಗಳನ್ನು ಹಾಗೂ 45,45,749 ವಿದ್ಯಾರ್ಥಿಗಳಿಗೆ ಸಮವಸ್ತç ಹಾಗೂ ಶೂ ಮತ್ತು ಸಾಕ್ಸಗಳನ್ನು ವಿತರಿಸಲಾಗಿದೆ.
2023-24ನೇ ಸಾಲಿನಲ್ಲಿ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ 55,43,828 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 4,47,17,051 ಪಠ್ಯಪುಸ್ತಕಗಳನ್ನು ಜನವರಿ 2023 ರಿಂದ ಮಾರ್ಚ 2023ರವರೆಗೆ ಸರಬರಾಜು ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾರಂಭದ ದಿನದಂದು ವಿತರಿಸಲಾಗಿದೆ. 45,45,749 ವಿದ್ಯಾರ್ಥಿಗಳಿಗೆ ತಲಾ ಎರಡು ಜೊತೆ ಸಮವಸ್ತçಗಳನ್ನು ಒದಗಿಸಲಾಗಿದ್ದು ಮೊದಲ ಜೊತೆ ಸಮವಸ್ತçಗಳನ್ನು ಮಾರ್ಚ 2023 ರಿಂದ ಜೂನ್ 2023ರವರೆಗೆ ಹಾಗೂ ಎರಡನೇ ಜೊತೆ ಸಮವಸ್ತçಗಳನ್ನು ಜೂನ್ 2023ರಿಂದ ಸೆಪ್ಟೆಂಬರ್ 2023ರವರೆಗೆ ವಿತರಣೆ ಮಾಡಲಾಗಿದೆ. ಶೂ ಮತ್ತು ಸಾಕ್ಸ್ ಖರೀದಿ ಮಾಡಲು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ಜೂನ್ 2023ರಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವರಾದ ಎಸ್.ಮಧು ಬಂಗಾರಪ್ಪ ಅವರು ತಿಳಿಸಿದರು.
 
ಆಯುಷ್ ಆಸ್ಪತ್ರೆಗಳಿಗೆ ಸೂಕ್ತ
ಮೇಲ್ವಿಚಾರಣೆ: ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿ: ಡಿಸೆಂಬರ್ 11: ಆಯುಷ್ ಆಸ್ಪತ್ರೆಗಳಲ್ಲಿ ಒಳ ರೋಗಿಗಳ ದಾಖಲಾತಿ ವ್ಯವಸ್ಥೆ ಮಾಡುವುದು ಸೇರಿದಂತೆ ಎಲ್ಲಾ ರೀತಿಯಿಂದ ಸೂಕ್ತ ಮೇಲ್ವಿಚಾರಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಸದಸ್ಯರಾದ ಪಿ.ಎಚ್.ಪೂಜಾರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿರುವ 80 ಆಸ್ಪತ್ರೆಗಳಲ್ಲಿ ಈಗಾಗಲೇ 55 ಆಯುಷ್ ಆಸ್ಪತ್ರೆಗಳಲ್ಲಿ ಒಳರೋಗಿಗಳ ದಾಖಲಾತಿಯನ್ನು ಪ್ರಾರಂಭಿಸಲಾಗಿದ್ದು ಉಳಿದ 25 ಆಯುಷ್ ಆಸ್ಪತ್ರೆಗಳಲ್ಲಿ ಒಳ ರೋಗಿಗಳ ದಾಖಲಾತಿಯನ್ನು ಪ್ರಾರಂಭಿಸಲು ಕ್ರಮ ವಹಿಸಲಾಗುತ್ತಿದೆ.
ಜಿಲ್ಲಾ ಆಯಷ್ ಅಧಿಕಾರಿಗಳ ಪ್ರತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿ ಆಸ್ಪತ್ರೆಗಳ ಒಳರೋಗಿಗಳ ದಾಖಲಾತಿಯನ್ನು ಪ್ರಾರಂಭಿಸಲು ಸೂಚಿಸಲಾಗಿದೆ. ಆಯುಷ್ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೊರತೆ ಇರುವ ಕಡೆ ಗಮನ ಕೊಟ್ಟು ಔಷಧಿ ಖರೀದಿ, ಸಿಬ್ಬಂದಿ ನೇಮಕ ಮತ್ತು ಆಯುಷ್ ತಜ್ಞ ವೈದ್ಯರ ನೇಮಕಕ್ಕೆ ಒತ್ತು ಕೊಡಲಾಗುತ್ತಿದೆ.
ಕೇಂದ್ರ ಸರ್ಕಾರವು ಆಯುಷ್ ಆಸ್ಪತ್ರೆಗಳಿಗೆ ಔಷಧಿ, ಸಲಕರಣೆ ಮತ್ತು ಉಪಕರಣಕ್ಕೆ ನೀಡಿದ ಅನುದಾನದ ಸದ್ಭಳಕೆ ಮಾಡಲಾಗುತ್ತಿದೆ. ಎರಡು ತಿಂಗಳೊಳಗೆ ಅವಶ್ಯವಿರುವ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

 

 

ಸುವರ್ಣಸೌಧದ ಅಂಗಳದಲ್ಲಿ ಕರ್ನಾಟಕ ಸಂಭ್ರಮ-50

ಡಿ‌.12 ರಂದು ಆಳ್ವಾಸ್ “ವಿರಾಸತ್-ನುಡಿಸಿರಿ” 

 

ಬೆಳಗಾವಿ ಸುವರ್ಣವಿಧಾನಸೌಧ ಡಿ.08: ಮೈಸೂರ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 2023ಕ್ಕೆ 50 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈಗಾಗಲೇ ವಿವಿಧ ಕಾರ್ಯಕ್ರಮಗಳು ನಡೆಯುತಿದ್ದು, ಅದರಂತೆ ಬೆಳಗಾವಿಯ ಸುವರ್ಣಸೌಧದ ಆವರಣದಲ್ಲಿ ಸಹ ಡಿಸೆಂಬರ್ 12ರಂದು ಸಂಜೆ 6 ಗಂಟೆಗೆ ಕರ್ನಾಟಕ ಸಂಭ್ರಮ-50ರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಧಾನಸಭೆಯ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಹೇಳಿದರು.
ಸುವರ್ಣವಿಧಾನಸೌಧದಲ್ಲಿ ಡಿಸೆಂಬರ್ 8ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳಿಗೆ ತಿಳಿಸಿದ್ದು ಕಾರ್ಯಕ್ರಮದ ಸಿದ್ಧತೆಯು ಭರ್ಜರಿಯಾಗಿ ನಡೆದಿದೆ. ಅಂದು 1 ಗಂಟೆ ವೇದಿಕೆ ಕಾರ್ಯಕ್ರಮ ಮತ್ತು 2 ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಅಂದಿನ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಸಂಪುಟದ ಎಲ್ಲ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಎಲ್ಲ ಗಣ್ಯರು ಉಪಸ್ಥಿತರಿರುವರು. ಈ ಕಾರ್ಯಕ್ರಮದಲ್ಲಿ ವಿಧಾನ ಮಂಡಲದ ಹಿಂದಿನ ಎಲ್ಲ ವಿಧಾನಸಭೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತನ ಸಭಾಪತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ನಾಡಿನಾದ್ಯಂತ ಹೆಸರು ಮಾಡಿದ, ಮೂಡುಬಿದಿರೆಯಲ್ಲಿ ಪ್ರತಿ ಬಾರಿ ನಡೆಯುವ ಆಳ್ವಾಸ ವಿರಾಸತ್ ಮತ್ತು ಆಳ್ವಾಸ ನುಡಿಸಿರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಡಿಸೆಂಬರ್ 12ರಂದು ಸುವರ್ಣ ವಿಧಾನಸೌಧದ ಅಂಗಳದಲ್ಲಿ ಆಯೋಜಿಸಿ ಉತ್ತರ ಕರ್ನಾಟಕ ಭಾಗದ ಜನತೆಗೆ ದಕ್ಷಿಣ ಕರ್ನಾಟಕ ಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲೆ ಸೇರಿದಂತೆ ಈ ಭಾಗದ ಎಲ್ಲಾ ಜಿಲ್ಲೆಗಳ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಲಾಗಿದೆ. ವಿದ್ಯಾರ್ಥಿ ಯುವಜನರು, ಮಹಿಳೆಯರು, ಮಕ್ಕಳು, ನೌಕರರು ಸೇರಿದಂತೆ ಎಲ್ಲಾ ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸುವರ್ಣ ವಿಧಾನಸೌಧವು ಉತ್ತರ ಕರ್ನಾಟಕ ಭಾಗದ ಜನರ ಸ್ವಾಭಿಮಾನದ ಸಂಕೇತವಾಗಿದೆ. ಈ ಸೌಧದ ನಿರ್ಮಾಣದಿಂದ ಈ ಭಾಗದ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ದೊರೆಕಿದೆ. ಈ ಭಾಗದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗಿದೆ. ಸಾರ್ವಜನಿಕರ ಒತ್ತಾಸೆಯಂತೆ ಸುವರ್ಣ ವಿಧಾನಸೌಧದ ಪೂರ್ಣ ಬೆಳಕೆಯ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಹೊಸ ಪರಂಪರೆ:
ವಾಡಿಕೆಯಂತೆ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ಭಾರಿಯ ಅಧಿವೇಶನದ ವಿಶೇಷತೆಯಾಗಿ ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮ ರೂಪಿಸಲು ನಿರ್ಧರಿಸಿದ್ದೇವೆ. ಅಧಿವೇಶನ ಸಂದರ್ಭದಲ್ಲಿ ನಾಡುನುಡಿಗೆ ಸಂಬಂಧಿಸಿದ ಕಾರ್ಯಕ್ರಮ ರೂಪಿಸುತ್ತಿರುವುದು ಹೊಸ ಪರಂಪರೆಯಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಇದೆ ವೇಳೆ ತಿಳಿಸಿದರು.
ನಾಡುನುಡಿಯ ಅಭಿಮಾನದ ಈ ಕಾರ್ಯಕ್ರಮಕ್ಕೆ ಸರ್ವ ಶಾಸಕರಿಗೂ ಆಹ್ವಾನ ನೀಡಿದ್ದೇವೆ. ಎಲ್ಲ ಗಣ್ಯಮಾನ್ಯರಿಗೂ ಸರ್ವ ಜನರಿಗೂ ಈ ಮೂಲಕ ಆಹ್ವಾನ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು. ಅಂದು ನಡೆಯುವ ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ಜನ ಕಲಾವಿದರು ಭಾಗಿಯಾಗಲಿದ್ದು ಉತ್ತರ ಕರ್ನಾಟಕ ಭಾಗದ ಜನರು ಈ ಕಾರ್ಯಕ್ರಮಕ್ಕೆ ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸವಿಯನ್ನು ಸವಿಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಭಾರಿಯ ಅಧಿವೇಶನದಲ್ಲಿ ಹೋರಾಟಗಳ ಸಂಖ್ಯೆ ಕಡಿಮೆಯಾಗಿದೆ. ಡಿಸೆಂಬರ್ 4ರಿಂದ ನಡೆದ ಕಲಾಪಗಳಲ್ಲಿ ವಿವಿಧ ವಿಷಯಗಳ ಮೇಲೆ ಆರೋಗ್ಯಕರ ಚರ್ಚೆಯಾಗಿದೆ ಎಂದು ಹೊರಟ್ಟಿ ಅವರು ತಿಳಿಸಿದರು.

 

ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬಿ.ಎಸ್. ಸುರೇಶ(ಬೈರತಿ) ಅವರ ಅಧ್ಯಕ್ಷತೆಯಲ್ಲಿ ವಿಶ್ವಬ್ಯಾಂಕ್ ನರೆವಿನ “ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ” (KUWSMP) ಪ್ರಗತಿ ಪರಿಶೀಲನಾ ಸಭೆ ದಿನಾಂಕ 11-12-2023 ರಂದು ‌ಸುವರ್ಣ ವಿಧಾನ ಸೌಧ, ಬೆಳಗಾವಿಯಲ್ಲಿ ಜರುಗಿತು
*ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ  ಜನವಸತಿ ಪ್ರದೇಶಗಳಲ್ಲಿ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಕಾರ್ಯವನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮೂಲಕ ಎಲ್ ಅಂಡ್‌ ಟಿ ಸಂಸ್ಥೆ ಗುತ್ತಿಗೆ ಪಡೆದಿದ್ದು ಸಮರ್ಪಕವಾಗಿ ಕೆಲಸ ನಿರ್ವಹಿಸದ ಕಾರಣ ಸಚಿವರಾದ ಶ್ರೀ ಬೈರತಿ ಸುರೇಶ ಅವರು ಅಸಮಾಧಾನ ವ್ಯಕ್ತಪಡಿಸಿದರು*
*ಹೆಸರಿಗಷ್ಟೆ ದೊಡ್ಡ ಸಂಸ್ಥೆ, ಆದರೆ ಕಾಮಗಾರಿಗಳು ಕಳಪೆ ಮಟ್ಟದ್ದಾಗಿದ್ದು. ಅದನ್ನು ಸರಿಪಡಿಸುವ ಕೆಲಸ ಆಗಬೇಕು ಎಂದು ಮಾನ್ಯ ಸಚಿವರು ತಾಕೀತು ಮಾಡಿದರು*.
*ಕಾಮಗಾರಿಗಳು ಗುಣಮಟ್ಟ ದಿಂದ ಕೂಡಿದರೆ ಮಾತ್ರ ಬಾಕಿ ಇರುವ ಬಿಲ್ ಅನ್ನು ಪಾವತಿಸಲು ಅಧಿಕಾರಿಗಳಿಗೆ ಸೂಚಿಸಿದರು*
**ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ತಿಂಗಳಾದರೂ ಪೈಪ್ ಲೈನ್ ಹಾಕಲ ಸಾಧ್ಯವಾಗದಿರಲೂ ಕಾರಣವೇನು ಎಂದು ಪ್ರಶ್ನಿಸಿದ ಸಚಿವರು ಸಮಸ್ಯೆ ಇದ್ದಲ್ಲಿ ತಿಳಿಸಿ ಎಂದು ಸೂಚಿಸಿದರು. ಅದಕ್ಕೆ ಉತ್ತರಿಸಿದ ಎಲ್ ಅಂಡ್‌ ಟಿ ಸಂಸ್ಥೆಯವರು ಇದೇ ತಿಂಗಳ 22ರ ಒಳಗೆ ಪೈಪ್ ಗಳು ಬರಲಿದೆ ಎಂದಾಗ, ಅದರ ಮೇಲೆ ನಿಗಾ ವಹಿಸಲು ಅಧಿಕಾರಿಗಳಿಗೆ ಶ್ರೀ ಬೈರತಿ ಸುರೇಶ ಅವರು ಸೂಚಿಸಿದಲ್ಲದೆ, ಇದೇ ಶನಿವಾರ ನಮ್ಮ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು*.
*ಅಳವಡಿಸಿರುವ ಕಳಪೆ ಗುಣಮಟ್ಟದ ಪೈಪ್ ಗಳನ್ನು ತೆಗೆದು ಉತ್ತಮ ಗುಣಮಟ್ಟದ ಪೈಪ್ ಗಳನ್ನು ಅಳವಡಿಸಲು ಗುತ್ತಿಗೆ ಪಡೆದ ಸಂಸ್ಥೆಗೆ ತಾಕೀತು ಮಾಡಿದರು*.
*ಮತ್ತೆ ಒಂದು ತಿಂಗಳಲ್ಲಿ ಸಭೆ ‌ನಡೆಸಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ. ನಡೆದಿರುವ ಕಾಮಗಾರಿಯಲ್ಲಿ ಮತ್ತೆ ಕಳಪೆ ಕಂಡಲ್ಲಿ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಶ್ರೀ ಬೈರತಿ ಸುರೇಶ ಅವರು ನೀಡಿದರು*.
*ಸಭೆಯಲ್ಲಿ ಭಾಗವಹಿಸಿದ್ದ ಮೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿಧಾನ ಸಭಾ ಕ್ಷೇತ್ರದ ಶಾಸಕರುಗಳಾದ ಅಲ್ಲಮಪ್ರಭು ಪಾಟೀಲ, ಎನ್.ಹೆಚ್. ಕೋನರೆಡ್ಡಿ, ಅಬ್ಬಯ್ಯ GC ಪ್ರಸಾದ್, ವಿನಯ್ ಕುಲಕರ್ಣಿ, ಅಭಯ್ ಪಾಟೀಲ, ಮಹೇಶ್ ತೆಂಗಿನಕಾಯಿ ಸಹ ಎಲ್ ಅಂಡ್‌ ಟಿ ಸಂಸ್ಥೆ ನಡೆಸಿರುವ ಕಾಮಗಾರಿ ತೃಪ್ತಿ ತಂದಿಲ್ಲ ಎಂದರು*.
*ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎಂ.ಎನ್. ಅಜಯ್ ನಾಗಭೂಷಣ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ‌ವ್ಯವಸ್ಥಾಪಕ ನಿರ್ದೇಶಕರಾದ ‌ದೀಪ ಚೋಳನ್, ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ, ಕೆಯುಐಡಿಎಫ್ಸಿ ಜಂಟಿ ನಿರ್ದೇಶಕ ‌ಲಕ್ಷ್ಮೀಕಾಂತ ರೆಡ್ಡಿ, ಬೆಳಗಾವಿ, ಹುಬ್ಬಳ್ಳಿ -ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು*.