Belagavi News In Kannada | News Belgaum

ಮುಖ್ಯಮಂತ್ರಿಯವರ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ 57809 ಅರ್ಜಿ ಸ್ವೀಕಾರ: ಸಚಿವ ಜಮೀರ್ ಅಹಮದ್ ಖಾನ್

ಬೆಳಗಾವಿ ಸುವರ್ಣ ಸೌಧ: ಮುಖ್ಯಮಂತ್ರಿಯವರ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ 23-11-2023 ರ ವರೆಗೆ ಆನ್‌ಲೈನ್ ಮೂಲಕ 57809 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಅವರು ಇಂದು ವಿಧಾನಪರಿಷತ್‌ನಲ್ಲಿ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಮುಖ್ಯ ಮಂತ್ರಿಯವರ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಆರಂಭಿಕ ಠೇವಣಿಯನ್ನು ಪಾವತಿಸಿದ ನಂತರ ಫಲಾನುಭವಿಗಳೇ ಸ್ವತಃ ತಮ್ಮ ಫ್ಲಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್-ಲೈನ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಆರಂಭಿಕ ಠೇವಣಿಯನ್ನು ಪಾವತಿಸಿ,11,568 ಫಲಾನುಭವಿಗಳು ಫ್ಲಾಟ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ಯೋಜನೆಯನ್ನು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಮಾತ್ರ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ಈವರೆಗೆ ಪೂರ್ಣಗೊಳಿಸಿರುವ ಒಟ್ಟು 1150 ಪ್ಲಾಟ್ ಗಳಿಗೆ ಪ್ರತ್ಯೇಕ ಇ ಖಾತೆಯನ್ನು ಪಡೆಯುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಈಗಾಗಲೇ ಇ-ಖಾತೆಯನ್ನು ಪಡೆದಿರುವ ಪ್ಲಾಟ್ ಗಳ ಫಲಾನುಭವಿಗಳಿಗೆ ಉಳಿಕೆ ಹಣವನ್ನು ಪಾವತಿಸುವಂತೆ ಬೇಡಿಕೆ ಪತ್ರವನ್ನು ಕಳುಹಿಸಲಾಗಿದ್ದು, ಫಲಾನುಭವಿಗಳು ಪೂರ್ಣ ಹಣವನ್ನು ಪಾವತಿಸಿದ ನಂತರ ಪ್ಲಾಟ್ ಗಳನ್ನು ನೊಂದಣಿ ಮಾಡಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತದೆ , ಫಲಾನುಭವಿ ವಂತಿಕೆಯನ್ನು ಭರಿಸಲು ಅನುಕೂಲವಾಗುವಂತೆ ಅವರುಗಳಿಗೆ ಬ್ಯಾಂಕ್ ಸಾಲವನ್ನು ಕೊಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ 3 ಲಕ್ಷ ಮನೆ ನಿರ್ಮಾಣ ಗುರಿ: ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಹಿಂದಿನ ಶ್ರೇಣಿಗಳಲ್ಲಿ ಪ್ರಗತಿಯಲ್ಲಿದ್ದ ಮನೆಗಳನ್ನು ಒಳಗೊಂಡ0ತೆ 2023-24 ನೇ ಆರ್ಥಿಕ ವರ್ಷದಲ್ಲಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದ್ದು, 28-11-2023 ಕ್ಕೆ 1,12,891 ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಅವರು ಇಂದು ವಿಧಾನಪರಿಷತ್‌ನಲ್ಲಿ ಸದಸ್ಯ ಸುನೀಲ್ ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ರಾಜ್ಯದಲ್ಲಿ ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ 18,92,756 ವಸತಿ ರಹಿತರು ಹಾಗೂ 7,13,950 ನಿವೇಶನ ರಹಿತರು ಕಂಡು ಬಂದಿರುತ್ತಾರೆ. ವಸತಿ ರಹಿತ ಕುಟುಂಬಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸರ್ಕಾರವು ವಿವಿದ ವಸತಿ ಯೋಜನೆಗಳಡಿ ಗ್ರಾಮ ಪಂಚಾಯಿತಿ/ನಗರ ಸ್ಥಳೀಯ ಸಂಸ್ಥೆಗಳಿಗೆ ಗುರಿ ಹಂಚಿಕೆ ಮಾಡಿ ಅರ್ಹ ಫಲಾನುಭವಿಗಳಿಗೆ ವಸತಿ ಕಲ್ಪಿಸಲಾಗುತ್ತಿದೆ. 2020-21 ರಿಂದ 2022-23 ನೇ ಸಾಲಿನವರೆಗೆ ವಿವಿಧ ವಸತಿ ಯೋಜನೆಗಳಡಿ ಒಟ್ಟಾರೆ 6,35,412 ಮನೆಗಳ ಗುರಿ ಹಂಚಿಕೆ ಮಾಡಲಾಗಿದ್ದು, ಈವರೆಗೆ 4,07,923 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.//////