Belagavi News In Kannada | News Belgaum

ಸಾಮಾಜಿಕ ನ್ಯಾಯ ಒದಗಿಸುವಂತೆ ಸವಿತಾ ಸಮಾಜ ಒತ್ತಾಯ

ಬೆಳಗಾವಿ: ಮಿಸಲಾತಿ ಹಾಗೂ ಜಾತಿನಿಂದನೆ  ಕಾಯ್ದೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸವಿತಾ ಸಮಾಜದ ವತಿಯಿಂದ  ಸುವರ್ಣಸೌಧ ಬಳಿ ಇರುವ ಸುವರ್ಣಗಾರ್ಡನ್‌ ಟೆಂಟ್‌ ನಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಕ್ಷೌರ ಮತ್ತು ನಾದಸ್ವರಕ್ಕೆ ಸವಿತಾ ಸಮಾಜದವರ ಸೇವೆ ಅಗತ್ಯವಿದೆ. ಆದರೆ, ಆಳುವ ಸರ್ಕಾರಗಳು ಸವಿತಾ ಸಮಾಜವನ್ನು ನಿರ್ಲಕ್ಷಿಸಿವೆ. ಸರ್ಕಾರಗಳಿಗೆ ಸಮುದಾಯದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ’ ಎಂದು ಸವಿತಾ ಸಮಾಜ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಸವಿತಾ ಸಮಾಜ ಶುಭ ಕಾರ್ಯಗಳಿಗೆ ಮುಂದಿರುತ್ತದೆ. ಈ ಸಮುದಾಯ ಇಲ್ಲದಿದ್ದರೆ ಮನುಷ್ಯ ಸಮುದಾಯವೇ ವಿಕಾರವಾಗಿರುತ್ತಿತ್ತು. ಯಾವುದೇ ಶುಭ ಸಮಾರಂಭಕ್ಕೆ ಸವಿತಾ ಸಮಾಜದವರ ಅಗತ್ಯವಿದೆ. ಸಮುದಾಯದವರನ್ನು ಶೋಷಿತರಾಗಿ ಕಾಣುವುದು ಸರಿಯಲ್ಲ’ ಎಂದು ಹೇಳಿದರು.
ಸವಿತಾ ಸಮಾಜದವರು ಪಾರಂಪರಿಕವಾಗಿ ಕ್ಷೌರಿಕ ವೃತ್ತಿ ನಂಬಿಕೊಂಡು ಬಂದಿದ್ದಾರೆ. ದೇವರುಗಳಿಗೂ ಸೇವೆ ಮಾಡಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಮುದಾಯವರು ಕುಲ ಕುಸುಬನ್ನೇ ನಂಬಿ ಜೀವನ ರೂಪಿಸಿಕೊಳ್ಳುವುದು ಕಷ್ಟ. ಸಮಾಜವು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ತುಂಬಾ ಹಿಂದುಳಿದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಕ್ಕಪಕ್ಕದ ರಾಜ್ಯಗಳಲ್ಲಿ ಸರ್ಕಾರವು ಸವಿತಾ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಟ್ಟಿದೆ. ಆದರೆ, ಕರ್ನಾಟಕದಲ್ಲಿ ಸರ್ಕಾರ ಸಮುದಾಯಕ್ಕೆ ₹ 5 ಕೋಟಿ ಮಾತ್ರ ಮೀಸಲಿಟ್ಟಿದೆ. ಇದರಿಂದ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

ಬೇಡಿಕೆಗಳು: ಇತರೆ ಜನಾಂಗದವರನ್ನು ಗೌರವಿಸಿ ಅಗತ್ಯ ಸೇವೆ ಒದಗಿಸುವಂತೆ ಸವಿತಾ ಸಮಾಜದ ಅಭಿವೃದ್ಧಿಗೂ ಯೋಜನೆ ರೂಪಿಸಬೇಕು. ಜಾತಿ ನಿಂದನೆ ತಡೆಗೆ ಪರಿಣಾಮಕಾರಿ ಕಾನೂನು ಜಾರಿಗೊಳಿಸಬೇಕು. ರಾಜಕೀಯವಾಗಿ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು,  ರಾಜ್ಯದ 4 ಭಾಗಗಳಲ್ಲಿ  ಕ್ಷೌರಿಕ ತರಬೇತಿ ಕೇಂದ್ರ ಹಾಗೂ ನಾದಸ್ವರ ಡೋಲು ನುಡಿಸುವ  ತರಬೇತಿ ಶಾಲೆ ಸ್ಥಾಪಿಸಬೇಕು,  ಸವಿತಾ ಸಮುದಾಯಕ್ಕೆ ಉಚಿತ ಆರೋಗ್ಯ ವಿಮೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿದ್ದಾರೆ.

ಪ್ರತಿಭಟನೆಯಲ್ಲಿ ಸವಿತಾನಂದನಾಥ ಸ್ವಾಮೀಜಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸವಿತಾ ಸಮಾಜವರು ಭಾಗವಹಿಸಿದ್ದರು./////C