Belagavi News In Kannada | News Belgaum

ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದಿಂದ ಬೃಹತ್‌ ಪ್ರತಿಭಟನೆ

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ನಗರದ ಚನ್ನಮ್ಮ ವೃತ್ತದಲ್ಲಿ  ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ,  ಕಾಂಗ್ರೆಸ್ ಸರ್ಕಾರ ಬಂದು ಏಳು ತಿಂಗಳಾದರೂ ಸಮಾಜಕ್ಕೆ 2 ಎ ಮೀಸಲಾತಿ ಸಿಕ್ಕಿಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ‌ ಮೀಸಲಾತಿ ಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಶೀಘ್ರವೇ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲಿ. ಇಲ್ಲದಿದ್ದರೆ ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ ನಡೆದ ಹೋರಾಟದ ಮಾದರಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಯಾವುದೇ ರಾಜಕೀಯ ಆಸೆ ಆಮೀಷಗಳಿಗೆ ಬಗ್ಗದೆ ಸಮಾಜದ ಮೀಸಲಾತಿಗಾಗಿ ಸ್ವಾಮೀಜಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಲಿಂಗ ಪೂಜೆ ಮಾಡಿಕೊಂಡು ಹೋರಾಟ ಮಾಡಿದ್ದಾರೆ ಎಂದು ಕೂಡಲಸಂಗಮ ಸ್ವಾಮೀಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೂ ಕೂಡ ನಾನು ಹೋರಾಟ ಮಾಡಿದ್ದೇನೆ. ಯಾವುದೇ ಸರ್ಕಾರ ಇದ್ದರೂ ನಾನು ಹೋರಾಟ ಮಾಡುತ್ತೇನೆ. ಅಧಿವೇಶನ ಮುಗಿದ ಬಳಿಕ ಬೆಂಗಳೂರಿಗೆ ಹೋಗಿ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುವೆ ಎಂದಿದ್ದಾರೆ. ಈ ವಿಚಾರವಾಗಿ ಒಂದು ವಾರಗಳ ಕಾಲ ಸಮಯ ನೀಡಿ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಇಷ್ಟು ವರ್ಷಗಳ ಕಾಲ ಕಾಯ್ದಿದ್ದೇವೆ ಇನ್ನೊಂದು ವಾರ ಕಾಯೋಣ. ಒಂದು ವಾರಗಳ ಅವಧಿ ಒಳಗೆ ಸಿಎಂ ಸಮಗ್ರವಾಗಿ ಚರ್ಚೆ ಮಾಡಲಿ. ಅಲ್ಲಿಯವರೆಗೆ ನಮ್ಮ ಸಮಾಜದವರು ಶಾಂತ ರೀತಿಯಿಂದ ಇರೋಣ ಎಂದು ಹೇಳಿದರು.

 

 

ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕಳೆದ ಮೂರು ವರ್ಷದಿಂದ ಮೀಸಲಾತಿ ಕೋರಿ ವಿವಿಧ ಹಂತದ ಹೋರಾಟ ನಡೆಸಲಾಗಿದೆ. ಈಗ ಸಾಮೂಹಿಕ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ನಡೆಸಲಾಗುತ್ತಿದೆ. ಎಲ್ಲಿಯೂ ದೇವರ ಪೂಜೆಯ ಮೂಲಕ ಹೋರಾಟ ನಡೆಸಿಲ್ಲ. ಲಿಂಗಾಯತ ಪಂಚಮಸಾಲಿ ಸಮಾಜದವರು ಶಾಂತಿ ಪ್ರಿಯರು. ಹಾಗಾಗಿ ದೇವರ ಪೂಜೆ ಮೂಲಕ ಹೋರಾಟ ನಡೆಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಮೀಸಲಾತಿ ನೀಡದೆ ಹೋದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಳಗಾವಿ ಜಿಲ್ಲೆಯ ಜನರ ಒತ್ತಾಯಕ್ಕೆ ಮತ್ತೆ ಹೋರಾಟ ಶುರು ಮಾಡಿದ್ದೇವೆ. ಮೀಸಲಾತಿ ಸಿಗುವವರೆಗೂ ಹೋರಾಟ ಬಿಡಲ್ಲ. ಯಡಿಯೂರಪ್ಪ ಇದ್ದಾಗ, ಬೊಮ್ಮಾಯಿ ಇದ್ದಾಗ ಹೋರಾಟ ಮಾಡಿದ್ದೇವು. ಈಗ ಸಿದ್ದರಾಮಯ್ಯ ಇದ್ದಾಗ ಹೋರಾಟ ಮಾಡಿ ಅಂತಾ ಜನ ಹೇಳಿದ್ದಾರೆ. ನಿನ್ನೆ ಚರ್ಚೆ ಬಳಿಕ ಸಿಎಂ ಜತೆಗೆ ಮಾತಾಡಿದ್ದನ್ನ ಇಲ್ಲಿ ಹೇಳ್ತಿದ್ದೇನೆ. ಅಡ್ವೋಕೆಟ್ ಜನರಲ್ ಜತೆಗೆ ಮೀಟಿಂಗ್ ಕರೆಯುತ್ತೇನೆ ಅಂತಾ ಸಿಎಂ ಹೇಳಿದ್ದರು ಎಂದರು.


ಪ್ರತಿಭಟನೆ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಬೆಳಗಾವಿ: ತಾಂತ್ರಿಕ ಮಾಹಿತಿಗಳನ್ನು ಪಡೆದು, ಒಂದು ವಾರದೊಳಗಾಗಿ ಪಂಚಮಸಾಲಿ ಮುಖಂಡರ ಸಭೆ ಕರೆದು, ಮತ್ತೊಮ್ಮೆ ಮಾತನಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಶಾಂತಿಯುತವಾದ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಕಳೆದ 3 ವರ್ಷಗಳಿಂದ ನಿರಂತರವಾಗಿ ನಾವು ಹೋರಾಟ ಮಾಡುತ್ತಾ ಬಂದಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕೂಡ ಸುಧೀರ್ಘ ಹೋರಾಟ ನಡೆದಿದೆ. ಏನನ್ನಾದರೂ ಪಡೆಯಬೇಕಾದರೆ ನಾವು ಹೋರಾಟ ಮಾಡಿಯೇ ಪಡೆಯಬೇಕಾಗಿದೆ. ಹೋರಾಟ ನಮ್ಮ ರಕ್ತದಲ್ಲೇ ಬಂದಿದೆ ಎಂದು ಅವರು ಹೇಳಿದರು. ನಾವು ಪಂಚಮಸಾಲಿ‌ ಮಂತ್ರಿಗಳು ಹಾಗೂ ಶಾಸಕರು ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೇವೆ. ನಿನ್ನೆ ಕೂಡ ಭೇಟಿಯಾಗಿ ಮಾತನಾಡಿದ್ದೇವೆ‌. ವಾರದೊಳಗಾಗಿ ಹಿಂದುಳಿದ ವರ್ಗಗಳ ಆಯೋಗದ ಜತೆ ಚರ್ಚಿಸಿ, ಪಂಚಮಸಾಲಿ ಪ್ರಮುಖರ ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ನಾವು ಯಾರ ಪಾಲನ್ನೂ ಕೇಳುತ್ತಿಲ್ಲ, ಬೇರೆಯವರಿಗೆ ಕೊಡಲು ನಮ್ಮ ಅಭ್ಯಂತರವಿಲ್ಲ ನಮಗೆ ನ್ಯಾಯಯುತವಾಗಿ ಸಿಗಬೇಕಾದದ್ದನ್ನು ಮಾತ್ರ ಕೇಳುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಸರ್ಕಾರಕ್ಕೆ  ನಿರ್ದಾಕ್ಷಿಣ್ಯವಾಗಿ 2 ಎ ಮೀಸಲಾತಿ ನೀಡಬೇಕು. ಪೂಜ್ಯರಲ್ಲಿ ನೇತೃತ್ವದಲ್ಲಿ ಸರ್ಕಾರದ ಜತೆ ಚರ್ಚೆ  ಮಾಡಲಾಗಿದೆ. ಸಿಎಂ ಅವರು ಸಹಮತಿಯನ್ನು ತಿಳಿಸಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ಸಾವಿರಾರೂ ಸಂಖ್ಯೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಬಾಂಧವರು ಭಾಗವಹಿಸಿದ್ದರು.//////