Belagavi News In Kannada | News Belgaum

ಸಚಿವೆ ಹೆಬ್ಬಾಳ್ಕರ್ ತವರು ಜಿಲ್ಲೆಯ ಅಂಗಡಿಯಲ್ಲೇ ಅಂಗನವಾಡಿ : ಅಂಗನವಾಡಿಗಳಿಗೆ ಸ್ವಂತ ಕಟ್ಟಡಕ್ಕೆ ಕ್ರಮ

ಬೆಳಗಾವಿ: ಖಾಲಿ ಇದ್ದ ಅಂಗಡಿಯಲ್ಲೇ ಅಂಗನವಾಡಿ ಶಾಲೆ ನಡೆಸಲಾಗುತ್ತಿರುವ ಘಟನೆ ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆಯ ಮುರಗೋಡ ಗ್ರಾಮದಲ್ಲಿ ಕಂಡು ಬಂದ ಪರಿಸ್ಥಿತಿ ಇದು..

ಹೌದು…ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಅಂಗನವಾಡಿ ಸಂಖ್ಯೆ 3ರಲ್ಲಿ ನಿತ್ಯ ಅಂಗಡಿಯಲ್ಲೇ  ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿದೆ. ಸೂಕ್ತ  ಕಟ್ಟಡವಿಲ್ಲದೆ ಅಂಗಡಿಯಲ್ಲಿ ಅಂಗನವಾಡಿ ಶಾಲೆ ನಡೆಸುತ್ತಿದ್ದಾರೆ. ಅಲ್ಲಿನ ಸಿಬ್ಬಂದಿ. ಮುಂದೆ ಚರಂಡಿ ನೀರು, ದೊಡ್ಡ ಗುಂಡಿ ಇದ್ದರೂ ಸಹ ಅಲ್ಲಿಯೇ ಮಕ್ಕಳ ಕಲಿಕೆ ಮುಂದುವರಿದ್ದನ್ನೂ ನೋಡಿದ ಹಿರಿಯ ಪ್ರಜ್ಞಾವಂತರೂ ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಸ್ವಂತ್‌ ಕಟ್ಟಡ ಕಾಣದ ಅಂಗನವಾಡಿ: ಇದ್ದ ಕಟ್ಟಡ ಸಂಪೂರ್ಣವಾಗಿ ಹಾಳಾಗಿ ಹೋದರೂ ಇಲಾಖೆ ಅಧಿಕಾರಿಗಳು ಡೊಂಟ್ ಕೇರ್ ಎನ್ನುತ್ತಿರುವದರಿಂದ ಸದ್ಯ ಅಂಗನವಾಡಿ ಪಾನ್ ಬೀಡಾ ಅಂಗಡಿಯಲ್ಲಿ ನಿತ್ಯ ಮಕ್ಕಳು ಕುಳಿತು ವಿದ್ಯಾಭ್ಯಾಸ ಮಾಡುವ ದುಸ್ಥಿತಿ ಎದುರಾಗಿದೆ.  ಮುಖ್ಯವಾಗಿ ಒಂದಡೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ  ನಡೆಯುತ್ತಿದ್ದರೆ, ಇನ್ನೋಂದೆಡೆ ಜೀವ ಕೈಯಲ್ಲಿ ಹಿಡಿದು ಮಕ್ಕಳು ಅಂಗನವಾಡಿಗೆ ಹೋಗುವ ಸ್ಥಿತಿ ಎದುರಾಗಿದೆ. ಇಂಥ ಕೆಟ್ಟ ಸ್ಥಿತಿ  ಸಚಿವೆ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲೇ ನಡೆಯುತ್ತಿದ್ದರೂ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಷಾದಕರವಾಗಿದೆ.


ಅಂಗನವಾಡಿಗಳಿಗೆ ಸ್ವಂತ ಕಟ್ಟಡಕ್ಕೆ ಕ್ರಮ ಎಂದ ಸಚಿವೆ ಹೆಬ್ಬಾಳ್ಕರ್: ರಾಜ್ಯದಲ್ಲಿ ಸಾಧ್ಯವಾದಷ್ಟುಕಡೆ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನಸಭೆಗೆ ಮಾಹಿತಿ ನೀಡದ್ದಾರೆ.
ತಿಪಟೂರಿನ ಷಡಕ್ಷರಿ.ಕೆ ಕೇಳಿದ ಪ್ರಶ್ನೆಗೆ ಸಚಿವರು ಬುಧವಾರ ಉತ್ತರಿಸಿದರು. ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 376 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, 274 ಕೇಂದ್ರಗಳಿಗೆ ಸ್ವಂತಕಟ್ಟಡಗಳಿವೆ. 62 ಬಾಡಿಗೆ ಕಟ್ಟಡಗಳಲ್ಲಿವೆ. 22 ಶಾಲಾ ಆವರಣಗಳಲ್ಲಿ ನಡೆಯುತ್ತಿವೆ. 8 ಸಮುದಾಯಭವನಗಳಲ್ಲಿ ನಡೆಯುತ್ತಿವೆ. 3 ಪಂಚಾಯಿತಿ ಕಟ್ಟಡಗಳಲ್ಲಿ ನಡೆಯುತ್ತಿವೆ. 7 ಇತರ ಕಟ್ಟಡಗಳಲ್ಲಿ ನಡೆಯುತ್ತಿವೆ. ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಕಳೆದ 3 ವರ್ಷಗಳಲ್ಲಿ 364 ಲಕ್ಷ ರೂ. ಗಳನ್ನು ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ 4 ಸಾವಿರ ಸರ್ಕಾರಿ ನಿವೇಶನಗಳಿಗೆ ಅಂಗನವಾಡಿ ಹೆಸರು ಹಾಕಿಸಲಾಗಿದೆ. ನಿವೇಶನ ಸಿಕ್ಕ ತಕ್ಷಣ ಅಗತ್ಯವಿರುವ ಎಲ್ಲ ಕಡೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು. ಸಾರ್ವಜನಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿರುವ ಸೈಟ್ ಗಳನ್ನು ಅಂಗನವಾಡಿ ಕಟ್ಟಡಕ್ಕೆ ಬಳಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.//////