Belagavi News In Kannada | News Belgaum

ವರಾಹಿ ಶಾಶ್ವತ ಕುಡಿಯುವ ನೀರಿನ ಯೋಜನೆ ಮಾರ್ಚ್, ಏಪ್ರಿಲ್ ವೇಳೆಗೆ ಪೂರ್ಣ: ಸಚಿವ ಬಿ.ಎಸ್.ಸುರೇಶ್

ಬೆಳಗಾವಿ ಸುವರ್ಣಸೌಧ: ಉಡುಪಿ ನಗರಕ್ಕೆ ವರಾಹಿ ನದಿಯಿಂದ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆ ಮಾರ್ಚ್ ಅಥವಾ ಏಪ್ರಿಲ್ ವೇಳೆ ಪೂರ್ಣಗೊಳ್ಳಲಿದೆ. ಯೋಜನೆಯಿಂದ 40 ಎಂ.ಎಲ್.ಡಿ ನೀರು ಉಡುಪಿ ನಗರಕ್ಕೆ ಲಭಿಸುವುದು ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದರು.

ಬೆಳಗಾವಿ ಚಳಿಗಾಲದ ಅಧಿವೇಶನಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಯಶ್‌ಪಾಲ್ ಎ ಸುವರ್ಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ರೂ.160 ಕೋಟಿ ವೆಚ್ಚದಲ್ಲಿ ವರಾಹಿ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ವರಾಹಿ ನದಿ ಮೂಲದಿಂದ ಉಡುಪಿ ನಗರಕ್ಕೆ ನೀರು ಸರಬರಾಜು ಮಾಡಲು ಕ್ವಿಮಿಪ್ ಯೋಜನೆಯಲ್ಲಿ ಹಾಲಾಡಿ ಬಳಿ 45 ಎಂ.ಎಲ್.ಡಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಶುದ್ಧೀಕರಿಸಿದ ನೀರನ್ನು ಮಣಿಪಾಲ್ ಬಳಿ ಇರುವ ಜಲಸಂಗ್ರಹಗಾರಕ್ಕೆ ಪಂಪ್ ಮಾಡಿ ಗುರುತ್ವಾಕರ್ಷಣೆ ಮೂಲಕ ಹೊಸದಾಗಿ ನಿರ್ಮಿಸಲಾಗುತ್ತಿರುವ 07 ಮೇಲ್ಮಟ್ಟದ ಜಲಸಂಗ್ರಹಗಾರಗಳಿಗೆ ಕಳುಹಿಸಿ, ಉಡುಪಿ ನಗರ ಹಾಗೂ ಮಾರ್ಗ ಮಧ್ಯದ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರನ್ನು ನೀಡಲಾಗುವುದು. ಇದರಿಂದ ನಗರಕ್ಕೆ ಶಾಶ್ವತ ಪರಿಹಾರ ದೊರಕಲಿದೆ ಎಂದರು.

ಸದ್ಯ ಉಡುಪಿ ನಗರಕ್ಕೆ ಸ್ವರ್ಣ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಸ್ವರ್ಣ ನದಿಗೆ ನಿರ್ಮಿಸಿರುವ ಬಜೆಕಿಂಡಿ ಅಣೆಕಟ್ಟಿನಲ್ಲಿ ಸುಮಾರು 3.5 ಲಕ್ಷ ಟನ್ ಹೂಳು ಸಂಗ್ರಹವಾಗಿದೆ. ಹೂಳು ತಗೆಯಲು ನಗರ ಸಭೆಯು ರೂ.5 ಕೋಟಿ ಯೋಜನೆ ರೂಪಿಸಿದೆ. ಅಣೆಕಟ್ಟಿನಲ್ಲಿ ಹೂಳಿನೊಂದಿಗೆ ಇರುವ ಮರಳನ್ನು ಖಾಸಗಿಯವರು ಬಳಸಿಕೊಂಡು ಯಾವುದೇ ವೆಚ್ಚವಿಲ್ಲದೆ ಹೂಳು ಮತ್ತು ಮರಳನ್ನು ಹೊರತೆಗೆಯಲು ಅನುಮತಿ ನೀಡಬಹುದು ಎಂದು ಉಡುಪಿ ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಈ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಬರುವ ಬೇಸಿಗೆ ವೇಳೆ ನೀರು ಒದಗಿಸಲು ಮುಜಾಂಗ್ರತೆಯ ವಹಿಸಿ, ರೂ.10 ಲಕ್ಷ ಅನುದಾನವನ್ನು ಮೀಸಲು ಇರಿಸಲಾಗಿದೆ. ಅಗತ್ಯ ಬಿದ್ದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಸಚಿವ ಬಿ.ಎಸ್.ಸುರೇಶ್ ಹೇಳಿದರು./////