Belagavi News In Kannada | News Belgaum

‘ಕಾರಂತ ನಾಟಕೋತ್ಸವದಲ್ಲಿ ಗುರುಸಿದ್ಧಸ್ವಾಮೀಜಿ ಅಭಿಪ್ರಾಯ ನಗೆಯರಳಿಸುವ ಕೆಲಸವನ್ನು ರಂಗಸಂಪದ ಮಾಡುತ್ತಲಿದೆ

ಬೆಳಗಾವಿ 24- ಇಂದಿನ ದಿನಗಳಲ್ಲಿ ನಗುವವರೆ ಕಡಿಮೆಯಾಗುತ್ತಿದ್ದಾರೆ. ಯಾವಾಗಲೂ ಮುಖ ಬಿಗಿದುಕೊಂಡೇ ಇರುತ್ತಾರೆ. ನಮ್ಮ ರಂಗಸಂಪದ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ದಂತಹ ಸಾಮಾಜಿಕ ಹಾಸ್ಯ ನಾಟಕದ ಪ್ರದರ್ಶನದೊಂದಿಗೆ ಮುಖವನ್ನು ಸಡಲಿಸಿ, ನಗೆಯನ್ನು ಅರಳಿಸುವ ಕೆಲಸವನ್ನು ಮಾಡುತ್ತಲಿದೆ ಎಂದು ಕಾರಂಜಿ ಮಠದ ಗುರುಸಿದ್ಧಸ್ವಾಮೀಜಿಯವರು ಇಂದಿಲ್ಲಿ ಹೇಳಿದರು.
ಶೇಖ ಆಸ್ಪತ್ರೆಯ ಎದುರಿನಲ್ಲಿರುವ (ರಾಮದೇವ ಹೊಟೇಲ ಹತ್ತಿರ) ಕನ್ನಡ ಭವನದಲ್ಲಿ ನಗರದ ರಂಗಸಂಪದದವರು ‘ಕಾರಂತ ನಾಟಕೋತ್ಸವನ್ನು’ ಹಮ್ಮಿಕೊಂಡಿದ್ದರು. ನಾಟಕೋತ್ಸವದ ಎರಡೂ ನಾಟಕಗಳ ರಚನೆ ರಾಜೇಂದ್ರ ಕಾರಂತಯವರದ್ದಾಗಿದ್ದು ಇವುಗಳಿಗೆ ಡಾ. ಅರವಿಂದ ಕುಲಕರ್ಣಿಯವರ ನಿರ್ದೇಶನವಿತ್ತು. ಇಂದು ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ಪ್ರದರ್ಶನಗೊಂಡಿತು. ನಾಟಕೋತ್ಸವವನ್ನು ಜಾಗಟೆಯನ್ನು ಬಾರಿಸುವುದರೊಂದಿಗೆ ಉದ್ಘಾಟಿಸಿದ ಗುರುಸಿದ್ಧಸ್ವಾಮೀಜಿಯವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ ಸ್ವಾಮೀಜಿಯವರು ಬಡುವರಿಗೆ, ಶ್ರೀಮಂತರಿಗೆ, ರಾಜಕಾರಣಿಗಳಿಗೆ, ಮಠಾಧೀಶರಿಗೆ ಎಲ್ಲರಿಗೂ ನೋವುಗಳು ಇರುವುದು ಸಹಜ. ಎಲ್ಲರೂ ಸಮಸ್ಯಗಳ ಮಧ್ಯೆಯೇ ಬದುಕುತ್ತಿರುತ್ತಾರೆ. ಮನಸ್ಸು ಪ್ರಫುಲ್ಲವಾಗಿರಬೇಕೆಂದರೆ ಕಷ್ಟ. ನೋವು, ಸಂಕಟಗಳ ನಡುವೆಯೂ ಸಂತೋಷದಿಂದಿರುವ ಪ್ರಯತ್ನ ಮಾಡಬೇಕು. ಇದಕ್ಕೆ ಒಂದೇ ರಾಮಬಾಣವೆಂದರೆ ನಗು ಎಂದು ಹೇಳಿದರು.
ರಂಗಸಂಪದ ಅಧ್ಯಕ್ಷ ಹಾಗೂ ‘ಮುದ್ದಣ್ಣನ ಪ್ರಮೋಷನ ಪ್ರಸಂಗ’ ನಾಟಕದ ನಿರ್ದೇಶಕ ಡಾ. ಅರವಿಂದ ಕುಲಕರ್ಣಿಯವರು ಮಾತನಾಡುತ್ತ, ನಾಟಕಕ್ಕೆ ನಿರೀಕ್ಷೆಗಿಂತ ತುಂಬ ಕಡಿಮೆ ಪ್ರೇಕ್ಷಕಕರು ಬಂದಿರುವುದು ತುಂಬ ನೋವನ್ನುಂಟು ಮಾಡಿದೆ. ಲೋಕಮಾನ್ಯ ರಂಗಮಂದಿರ ಯಾವಾಗಲೂ ತುಂಬಿರುತ್ತದೆ. ಬೆಳಗಾವಿ ಉತ್ತರ ಭಾಗದ ಜನರಲ್ಲಿ ಇನ್ನೂ ನಾಟಕ ನೋಡುವ ಅಭಿರುಚಿಯನ್ನು ಹೆಚ್ಚಿಸಬೇಕಿದೆ ಎಂದು ತುಂಬ ನೋವಿನಿಂದ ಹೇಳಿದರು.
ಸಾಹಿತ್ಯ ಭವನದ ಕಾರ್ಯದರ್ಶಿ, ಸಾಹಿತಿ ಯ. ರು. ಪಾಟೀಲ ಅವರು ಮಾತನಾಡುತ್ತ ನಾಟಕ ಮಾಡುವುದು ತುಂಬ ಕಷ್ಟದ ಕೆಲಸ. ಪ್ರೇಕ್ಷಕರು ಬಂದು ನಾಟಕವನ್ನು ನೋಡಿದಾಗ ಅವರು ಪಟ್ಟ ಶ್ರಮ ಸಾರ್ಥಕವಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದು ನಾಟಕ ನೋಡುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ಸಂಪೂರ್ಣ ಹಾಸ್ಯ ನಾಟಕವಾಗಿದ್ದು ಮುದ್ದಣ್ಣ ತನ್ನ ಪ್ರಮೋಷನ್ನಗಾಗಿ ಪಡುವ ಪಾಡೇ ನಾಟಕದ ಕಥಾವಸ್ತುವಾಗಿದೆ. ಪ್ರತಿಯೊಂದು ದೃಶ್ಯವೂ ಪ್ರೇಕ್ಷಕನನ್ನು ನಗೆಗಡಲ್ಲಲ್ಲಿ ತೇಲಿಸುತ್ತ ಹೋಗುತ್ತದೆ. ನಾಟಕದ ಕೊನೆವರೆಗೂ ನೋಡುಗರನ್ನು ಸೆರೆಹಿಡಿಯುತ್ತದೆ. ಸಮಾಜಕ್ಕೆ ಸಂದೇಶ ಈ ನಾಟಕದಲ್ಲಿದ್ದು. ನಾಟಕದಲ್ಲಿ ಬರುವ ‘ಗ್ಯಾರೆಂಟಿ… ಗ್ಯಾರಂಟಿ… ಎಂಬ ಆಶ್ವಾಸನೆಯನ್ನು ಕೊಡುತ್ತಾ ಕೊನೆಯಲ್ಲಿ ಕೈ ಕೊಡುವುದಿಲ್ಲ ತಾನೆ’ ಎಂಬ ಸರಕಾರದ ಟೀಕೆ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ.
ಮುದ್ದಣ್ಣನ ಪಾತ್ರದಲ್ಲಿ ನಟಿಸಿ ನಾಟಕವನ್ನು ಡಾ. ಅರವಿಂದ ಕುಲಕರ್ಣಿ ನಿರ್ದೇಶಿಸಿದ್ದಾರೆ. ಬೇರೆ ಬೇರೆ ಪಾತ್ರಗಳಿಗೆ ಅರವಿಂದ ಪಾಟೀಲ, ಪ್ರಸಾದ ಕಾರಜೋಳ, ರುದ್ರೇಶ ಹಿರೇಮಠ, ಪದ್ಮಾ ಕುಲಕರ್ಣಿ, ಪ್ರತಿಭಾ ಕಳ್ಳಿಮಠ, ವಿನೋದ ಸಪ್ಪಣ್ಣವರ, ಯೋಗೇಶ ದೇಶಪಾಂಡೆ, ಆರ್.ವಿ. ಭಟ್, ಶರಣಯ್ಯ ಮಠಪತಿ ಜೀವ ತುಂಬಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ತಾಂತ್ರಿಕ ನೆರವು ಪ್ರಶಾಂತ ಪಾಂಡವ ಅವರದ್ದಿದೆ.
ಗುರುನಾಥ ಕುಲಕರ್ಣಿ ನಿರೂಪಿಸಿದರು. ರಾಮಚಂದ್ರ ಕುಲಕರ್ಣಿ, ಎ.ಎಂ. ಕುಲಕರ್ಣಿ, ಚಿದಾನಂದ ವಾಳಕೆ ಉಪಸ್ಥಿತರಿದ್ದರು.