Belagavi News In Kannada | News Belgaum

ಮೂರು ತಿಂಗಳಲ್ಲೇ ಸಮಸ್ಯೆಗೆ ಸ್ಪಂದಿಸಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಅನುವು: ಸಚಿವ ಸತೀಶ್‌ ಜಾರಕಿಹೊಳಿ

 

ಬೆಳಗಾವಿ: ಕೇಂದ್ರ ಸಾರಿಗೆ ಸಚಿವ ನಿತೀನ್‌ ಗಟ್ಕರಿ ನೇತೃತ್ವದಲ್ಲಿ ಡಿ. 24 ರಂದು ಪಣಜಿಯಲ್ಲಿ ಸಭೆ ನಡೆಸಿ ರಾಜ್ಯಕ್ಕೆ ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 10 ಸಾವಿರ ಕೋಟಿ ವೆಚ್ಚದ 15 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ವಿವಿಧ ಕಾರಣದಿಂದ ವಿಳಂಬವಾಗಿವೆ. ಇದುವರೆಗೆ ಎರಡು ಸಾವಿರ ಕೋಟಿ ವೆಚ್ಚಮಾಡಲಾಗಿದೆ. ಅರಣ್ಯ ಇಲಾಖೆ ಒಪ್ಪಿಗೆ ಸೇರಿದಂತೆ ಅನೇಕ ಕಾರಣಗಳಿಂದ ಅನೇಕ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾಮಗಾರಿಗೆ ತೊಡಕಾಗಿದ್ದು, ಕಳೆದ 12 ವರ್ಷಗಳಿಂದ ಸಣ್ಣ ಪುಟ್ಟ ತೊಂದರೆಯಿಂದ ಕೆಲವು ಹೆದ್ದಾರಿಗಳ ನಿರ್ಮಾಣ ಸ್ಥಗಿತವಾಗಿವೆ. ಕೇಂದ್ರ ಸಚಿವರು ಈ ಬಗ್ಗೆ ರಾಜ್ಯ ಸರ್ಕಾರ ಮುತುರ್ವಜಿ ವಹಿಸಬೇಕೆಂದು ತಿಳಿಸಿದ್ದು, ಮೂರು ತಿಂಗಳ ಕಾಲಾವಕಾಶ ತೆಗೆದುಕೊಂಡಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿ ಶೀಘ್ರವೇ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಅಡೆತಡೆಯಾದ ವಿಷಯಗಳ ಬಗ್ಗೆ ಚರ್ಚಿಸಲು ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆ ಅಧಿಕಾರಗಳೊಂದಿಗೆ ನಾನು ಸಭೆ ನಡೆಸಿದ್ದು, ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಇನ್ನು ವಿಜಯಪುರ-ಹುಬ್ಬಳ್ಳಿ ಹೆದ್ದಾರಿ ನಿರ್ಮಾಣ ಶೇ.99% ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೇ. 1% ರಷ್ಟು ಕಾಮಗಾರಿ ಉಳಿದಿದ್ದು, ಇಂತಹ ಅನೇಕ ಹೆದ್ದಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಚೋರ್ಲಾ ಘಾಟ್‌ ಮೂಲಕ ಬೆಳಗಾವಿ ಮತ್ತು ಗೋವಾಗೆ ಸಂಪರ್ಕಿಸುವ ರಸ್ತೆಯನ್ನು ಕರ್ನಾಟಕದ ಗಡಿವರೆಗೆ ಅಭಿವೃದ್ಧಿ ಪಡಿಸಲು ಸೂಮಾರು 58 ಕೋಟಿ ರೂ. ಮಂಜೂರಾಗಿದ್ದು, ಒಂದು ವಾರದೊಳಗೆ ಟೆಂಡರ್‌ ಕರೆದು 2024 ಎಪ್ರಿಲ್‌ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಸಚಿವ ಶಿವಾನಂದ್​ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್‌ ಜಾರಕಿಹೊಳಿ, ರೈತರು ಯಾವುದೇ ಕಾರಣಕ್ಕೂ ಬರಗಾಲ ಬರಲಿ ಅಂತ ಅಪೇಕ್ಷಿಸಲ್ಲ. ಬರಗಾಲ ಬಂದರೆ ರೈತರಿಗೆ ಮಾತ್ರ ತೊಂದರೆ ಆಗಲ್ಲ. ಬರಗಾಲ ಬಂದರೆ ಎಲ್ಲರಿಗೂ ತೊಂದರೆ ಆಗುತ್ತದೆ. ಎಲ್ಲೋ ಏನೋ ಮಿಸ್ಟೇಕ್​ ಆಗಿ ಶಿವಾನಂದ್​ ಪಾಟೀಲ್ ಹೇಳಿರುತ್ತಾರೆ ಎಂದು ಪ್ರತಿಕ್ರಿಯಿಸಿದರು.

ಸಿಎಂ ಸಿದ್ದರಾಮಯ್ಯ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುತ್ತೇವೆ ಎಂದು ಹೇಳಿಕೆಗೆ ಬಗ್ಗೆ ಮಾತನಾಡಿದ ಸಚಿವರು, ನಮ್ಮ ಸರಕಾರ ಬಂದ ಮೇಲೆ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದೆವು. ಅದರಂತೆ ವಾಪಸ್ ಪಡೆಯುತ್ತೇವೆ. ಇದನ್ನು ಚುನಾವಣಾ ಪ್ರಣಾಳಿಕೆಯಲ್ಲೇ ಹೇಳಿದ್ದೆವು. ಈ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯಕ್ಕೆ ಸರ್ಕಾರದ ನಿಲುವು ತಿಳಿಸುತ್ತೇವೆ ಎಂದಿದ್ದಾರೆ.

ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಸದಸ್ಯರು ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಕುರಿತು ಮಾತನಾಡಿದ ಸಚಿವ ಸತೀಶ್‌, ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ನಾಯಕ ಸಿಕ್ಕಿರಲಿಲ್ಲ. ಮೈತ್ರಿಕೂಟ ‘ಇಂಡಿಯಾ’ದ ಸದಸ್ಯರು ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಆಗಿ ಘೋಷಣೆ ಮಾಡಿರುವುದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸರಿಸಮ ನಾಯಕರಾಗಿ ಬಿಂಬಿತರಾಗಲಿದ್ದು, ಪ್ರಧಾನಿ ಮೋದಿ ವರ್ಸಸ್ ಖರ್ಗೆ ಎಂಬುದು ಖಂಡಿತ ಪರಿಣಾಮ ಬೀರಲಿದೆ ಎಂದರು ತಿಳಿಸಿದರು.

ವಾರದೊಳಗೆ ಹೈಕಮಾಂಡ್‌ ಗೆ ಅಭ್ಯರ್ಥಿಗಳ ಲಿಸ್ಟ್:‌

ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಬಯಸುವಂತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಪಡೆದು ಹೈಕಮಾಂಡ್‌ ಗೆ ಸಲ್ಲಿಸಲಾಗುವುದು. ಇನ್ನು ವಿಜಯಪುರಕ್ಕೂ ಹೋಗಿ ನಾಳೆ ಸಭೆ ನಡೆಸುತ್ತಿದ್ದು, ಎಲ್ಲ ಅರ್ಜಿಗಳನ್ನು ಒಟ್ಟರೆ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ನಾಗರಾಜ ಯಾದವ್‌, ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಗಂಳೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್‌ ಹಣಮನ್ನವರ್‌, ಕೆಪಿಸಿಸಿ ಸದಸ್ಯ ಕಿರಣ ಸಾಧುನ್ನವರ್‌ ಸೇರಿದಂತೆ ಅನೇಕ ಹಿರಿಯ ಮುಖಂಡರು ಇದ್ದರು.