Belagavi News In Kannada | News Belgaum

ಆತ್ಮಾಭಿವ್ಯಕ್ತಿಯೇ ಕಾವ್ಯ: ಡಾ. ಸಿ.ಕೆ ನಾವಲಗಿ

ಬೆಳಗಾವಿ: ನಮಗರಿವಿಲ್ಲದೆಯೇ ನೋವನ್ನು ದುಖಃವನ್ನು ಅನುಭವಿಸುತ್ತೆವೆ, ಪೂಜಿಸುತ್ತೆವೆ.  ಆ ಅನುಭವವೇ  ಅನುಭೂತಿಯಾಗುತ್ತದೆ. ಕ್ಷಣವೊಂದರ ಅನುಭವದ ಆತ್ಮಾಭಿವ್ಯಕ್ತಿಯೇ ಕಾವ್ಯವಾಗುತ್ತದೆ. ಕಾವ್ಯಕ್ಕೆ ನೋವು , ದುಖಃ ವಿರಹವೇ ಮುಖ್ಯ ಪರಿಣಾಮಕಾರಕ ಎಂದು ಜಾನಪದ ವಿದ್ವಾಂಸ-ಚಿಂತಕ ಡಾ. ಸಿ.ಕೆ. ನಾವಲಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ  ಆಯೋಜಿಸಲಾದ ಸಾಹಿತ್ಯ ಸಂವಾದ ಹಾಗೂ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ಆಶಾ ಕಡಪಟ್ಟಿ ಅವರ ಮೂರು  ಕೃತಿಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಆಶಾ ಕಡಪಟ್ಟಿ ಅವರ ” ಅವ್ವ ನಿನ್ನಾರ ಹೋಲರ” ತ್ರಿಪದಿ ಕವನ ಸಂಕಲವನ್ನು  ಪರಿಚಯಿಸುತ್ತಾ ಮಾತನಾಡಿದ  ಅವರು,  ತಾಯಿಯನ್ನು , ಪತಿಯನ್ನು ಕಳೆದುಕೊಂಡ ದುಃಖತಪ್ತ ಕವಯಿತ್ರಿ ತನ್ನ ವಿರಹವೇದನೆಯ ಅಳಲನ್ನು ಮಮ್ಮಲ ಮರಗುವಂತೆ ತೋಡಿಕೊಂಡಿದ್ದಾಳೆ. ಇದು ಅತ್ಮಗತ ಕಾವ್ಯವೆನಿಸಿದರೂ ಎಲ್ಲ ತಾಯಿ ಮಗಳಿಗೂ ಅನ್ವಯಿಸುವಂಥದ್ದು, ಹಾಗಾಗಿ ಇದೊಂದು ಜನಪದ ತ್ರಿಪದಿ ಸಾಹಿತ್ಯಕ್ಕೆ ನಿಷ್ಠೆಯಿಂದ ಕೊಟ್ಟ ವಿಶಿಷ್ಠ ಕೊಡುಗೆ ಎಂದು ನಾವಲಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ. ಸರಜೂ ಕಾಟ್ಕರ್   ಮಾತನಾಡಿ,   ಸಾಕಷ್ಟು ಮಹಿಳೆಯರನ್ನು ಸಾಹಿತ್ಯ ಕ್ಷೇತ್ರದಲ್ಲಿ  ಪ್ರೋತ್ಸಾಹಿಸಿ ಬೆಳೆಸಿರುವ ಕೀರ್ತಿ ಆಶಾ ಕಡಪಟ್ಟಿ ಅವರಿಗೆ ಸಲ್ಲುತ್ತದೆ.   ಒಂದು ಕಾಲಕ್ಕೆ ಬೆಳಗಾವಿ ಲೇಖಕಿಯರ ಸಂಘದಲ್ಲಿ ಕೇವಲ ನಾಲ್ಕು ಸದಸ್ಯರು ಇದ್ದರು. ಇವತ್ತು ಅದು ತುಂಬು ಕುಟುಂಬವಾಗಿದೆ. ಬರೆಯಲು ಪ್ರೋತ್ಸಾಹಿಸಿ ಸಾಕಷ್ಟು ಬೆಂಬಲ ನೀಡುತ್ತಾರೆ  ಎಂದು  ಸಂತಸ ವ್ಯಕ್ತಪಡಿಸಿದರು.

ಹಾವೇರಿ ವಿಶ್ವವಿದ್ಯಾಲಯದ    ಕುಲಸಚಿವರಾದ ಡಾ.ವಿಜಯಲಕ್ಷ್ಮಿ ಪುಟ್ಟಿ ಅವರು ಮಾತನಾಡಿ,  ಆಶಾ ಕಡಪಟ್ಟಿ  ಅವರು ಒಬ್ಬ ಸೃಜನಶೀಲ ಹೃದಯವಂತ  ಕವಿಯತ್ರಿ,  ತಾವು ಬೆಳೆದು ಜತೆಗೆ ಇರುವವರನ್ನು ಬೆಳೆಸುವ ಮನೋಭಾವ ಹೊಂದಿದವರು. ಈ ಸಂಘವು ಇಂದು ಬೃಹದಾಕಾರವಾಗಿ ಬೆಳೆದಿರುವುದು ಹೆಮ್ಮೆಯ ವಿಷಯ ಎಂದರು.

ಡಾ. ಗುರುದೇವಿ ಹುಲೆಪ್ಪನವರಮಠ “ಹರಕು ಕೌದಿಯ ಕಿಂಡಿ” ಪುಸ್ತಕ ಅವಲೋಕಿಸುತ್ತಾ ಜೀವನದಲ್ಲಿ ಏನೇ ಬಂದರೂ ನಗುತ ಬದುಕುವ ಕಲೆ ಕಂಡುಕೊಂಡವರು ಆಶಾ ಎನ್ನುತ್ತಾ ಅವರ ಕವನಗಳ ಬುತ್ತಿ ಮುಂದಿಟ್ಟರು. ಹಾದಿಗಳ ಹುಡುಕುತ್ತಾ ಎಂಬ ಕಥಾಸಂಕಲನ ಪರಿಚಯಿಸುತ್ತ ಸುನಂದ ಎಮ್ಮಿಯವರು ಆಶಾ ಅವರು ನಮ್ಮೆಲ್ಲರಿಗೂ ಸಲಹೆ ಸೂಚನೆಗಳನ್ನು ನೀಡುತ್ತಾ ಹುರಿದುಂಬಿಸುತ್ತಿರುವ ಸಹೃದಯರು.  ಅವರ ಕಥೆಗಳು ಓದುಗರ ಹಿಡಿದಿಡುವಲ್ಲಿ ಸಫಲವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ  ಸ್ವಾಗತಿಸಿದರು.ಹೀರಾ ಚೌಗಲೆ ಪ್ರಾರ್ಥಿಸಿದರು. ಕೀರ್ತಿ ಮತ್ತು ಕವಿತಾ ನಾಡಗೀತೆ ಹಾಡಿದರು .  ಸುನಂದಾ ಎಮ್ಮಿ, ಡಾ.ರಾಜೇಶ್ವರಿ ಹಿರೇಮಠ  ಡಾ. ಅನ್ನಪೂರ್ಣ ಹಿರೇಮಠ ನಿರೂಪಿಸಿ, ವಂದಿಸಿದರು.//////