Belagavi News In Kannada | News Belgaum

ಡಿ. 30ರೊಳಗೆ ಲೋಕಸಭೆ ಆಕಾಂಕ್ಷಿಗಳ ಲಿಸ್ಟ್‌ ಹೈಕಮಾಂಡ್‌ಗೆ: ಸಚಿವ ಸತೀಶ್‌ ಜಾರಕಿಹೊಳಿ

ವಿಜಯಪುರ: ಈಗಾಗಲೇ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿಗಳ ಹೆಸರುಗಳನ್ನು ಹೈಕಮಾಂಡ್‌ ಗೆ ಕಳುಹಿಸಬೇಕಾಗಿತ್ತು. ಸ್ವಲ್ಪ ತಡವಾಗಿದೆ. ಡಿ. 30ರೊಳಗೆ ಲಿಸ್ಟ್‌ ಕಳುಹಿಸಬೇಕಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದರು.

ನಗರದ ಕಾಂಗ್ರೆಸ್ ಕಚೇರಿ ಎದುರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿಗಳ ಅರ್ಜಿ ಪಡೆಯಲು ವೀಕ್ಷಕನಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.

 

ಡಿಸಿಎಂ ಸ್ಥಾನಕ್ಕೆ ಹೈಕಮಾಂಡ್‌ ಎದುರು ಬೇಡಿಕೆ ಇಟ್ಟಿದಿರಾ.? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿಸಿಎಂ ಸ್ಥಾನದ ಬಗ್ಗೆ ಚರ್ಚೆ ಮಾಡಿಲ್ಲ. ಮುಂದೆ ಬಂದಾಗ ನೋಡೋಣ. ನಾನು ಹಿಂದೆನೂ ರೆಬಲ್‌ ಇಲ್ಲಾ, ಮುಂದೆನೂ ರೆಬಲ್‌ ಇಲ್ಲಾ, ಈಗಾಗಲೇ ಸಚಿವನಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆಂದು ಹೇಳಿದರು.

 

ಇನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರ ಬಿಳುತ್ತದೆ ಎಂಬ ಹೇಳಿಕೆ ಬಗ್ಗೆ ಮಾತನಾಡಿದ ಸಚಿವ ಸತೀಶ್‌, ಹೆಚ್.ಡಿ. ಕುಮಾರಸ್ವಾಮಿ ಅವರು, ಸರ್ಕಾರ ಈಗ ಬಿಳುತ್ತೆ, ಇನ್ನು ಆರು ತಿಂಗಳು ಬಿಟ್ಟು ಬಿಳುತ್ತೆ ಎಂತಾ ಹಾಗೆ ಐದು ವರ್ಷಗಳ ಕಾಲ ಹೇಳುತ್ತಾ ಇರುತ್ತಾರೆ. ಆದರೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಐದು ವರ್ಷ ಸುಭದ್ರವಾಗಿ ಇರುತ್ತದೆ ಎಂದರು.

ಬಿಎಸ್‌ ವೈ ಆಡಳಿತದಲ್ಲಿ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಈಗಾಗಲೇ ಸರ್ಕಾರದಿಂದ ತನಿಖೆ ನಡೆಯುತ್ತಿದ್ದು, ವರದಿ ಬಂದ ಬಳಿಕ ಎಷ್ಟು ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬುವುದು ಗೊತ್ತಾಗಲಿದೆ ಎಂದ ಅವರು, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿ, ಎರಡು ಶಕ್ತಿ ಒಂದಾದ ಕುರಿತಾಗಿ ವಿಚಾರ ಮಾಡಲೇಬೇಕಾಗುತ್ತದೆ. ಅದರ ಬಗ್ಗೆ ಪರಿಣಾಮಕಾರಿಯಾಗಿ ಚರ್ಚೆ ಮಾಡಬೇಕಿದೆ ಎಂದು ತಿಳಿಸಿದರು. 

ಟಿಕೆಟ್ ಆಕಾಂಕ್ಷಿಗಳ ಜತೆಗೆ ಸಭೆ :

ನಂತರ ವಿಜಯಪುರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿಯವರು ವೀಕ್ಷಕರಾಗಿ ಪಾಲ್ಗೊಂಡು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಆಯ್ಕೆಯ ಕುರಿತು ಟಿಕೆಟ್ ಆಕಾಂಕ್ಷಿಗಳ ಜತೆಗೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಸಚಿವರಾದ ಶಿವಾನಂದ ಪಾಟೀಲ್‌, ಶಾಸಕರಾದ ಯಶವಂತರಾಯಗೌಡಾ ಪಾಟೀಲ್, ಸಿ.ಎಸ್.‌ ನಾಡಗೌಡ, ಅಶೋಕ‌ ಮನಗೂಳಿ, ಮಾಜಿ ಶಾಸಕರಾದ ಮನೋಹರ, ಮಕ್ಬುಲ್ ಬಾಗವಾನ, ಮುಖಂಡರಾದ ಅಬ್ದುಲ್ ಹಮೀದ್ ಶರೀಫ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಅಲಗೂರ, ಪಕ್ಷದ ಮುಂಚೂಣಿ ಘಟಕಗಳ‌ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.///////