Belagavi News In Kannada | News Belgaum

ಜನಜಂಗುಳಿ ಇರುವ ಕಡೆ ಪ್ರತಿಯೊಬ್ಬರು ಮಾಸ್ಕ್ ಹಾಕಿ: ಸಚಿವ ಗುಂಡೂರಾವ್ ಸಲಹೆ

ಬೆಂಗಳೂರು: ರಾಜ್ಯದಲ್ಲಿ ಬರೋಬ್ಬರಿ 34 ಜನರಿಗೆ ಕೊರೊನಾ ರೂಪಾಂತರಿ ಜೆನ್​.1 ಪತ್ತೆಯಾಗಿದೆ. ಕೊರೊನಾಗೆ ಮೂವರು ಸಾವನ್ನಪ್ಪಿದ ಬೆನ್ನಲ್ಲೆ ರಾಜ್ಯ ಸರ್ಕಾರ ಫುಲ್​​ ಅಲರ್ಟ್​ ಆಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ ಅವರು ಕ್ಯಾಬಿನೆಟ್ ಸಬ್​ ಕಮಿಟಿ ಸಭೆ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರೋ ಸಚಿವ ದಿನೇಶ್ ಗುಂಡೂರಾವ್, ಹೊಸ ಮಾರ್ಗಸೂಚಿ ಪ್ರಕಾರ ಸಾರ್ವಜನಿಕರು ಮಾಸ್ಕ್ ಹಾಕಿಕೊಳ್ಳುವುದು ಅವಶ್ಯಕತೆ ಇದೆ. 60 ವರ್ಷಗಳ ಮೇಲ್ಪಟ್ಟವರು ಮಾಸ್ಕ್ ಹಾಕಬೇಕು. ಶಾಲಾ ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ಬಂದರೆ ಅವರಿಗೆ ಶಾಲೆಗಳಿಗೆ ಕಳಿಸಬೇಡಿ ಎಂದು ಪೋಷಕರಿಗೆ ಸಲಹೆ ನೀಡಿದ್ದಾರೆ. ಹೊಸ ಮಾರ್ಗಸೂಚಿಯಲ್ಲಿ ಕೋವಿಡ್ ಸೋಂಕು ತಗುಲಿದ್ರೆ ಒಂದು ವಾರ ಹೋಮ್ ಐಸೋಲೇಷನ್ ಕಡ್ಡಾಯಗೊಳಿಸುವ ಸಾಧ್ಯತೆ ಇದೆ.
ಹೀಗೆ ಮಾತು ಮುಂದುವರೆಸಿದ ಅವರು, ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಜನಜಂಗುಳಿ ಇರುವ ಕಡೆ ಮಾಸ್ಕ್ ಹಾಕಿ, ಸ್ಯಾನಿಟೈಚರ್ ಬಳಸಿ. ಕೋವಿಡ್ ಬಂದವರು ಮನೆಯಲ್ಲಿ ಇರಬೇಕು. ಖಾಸಗಿ ಕಂಪನಿಗಳಿಗೆ 7 ದಿನ ರಜೆ ನೀಡಬೇಕು. ಯಾವುದೇ ರೀತಿ ಆತಂಕ ಪಡುವ ಅವಶ್ಯಕತೆ ಇಲ್ಲ. ಜೆಎನ್.1ನಿಂದ ಹೈ ರಿಸ್ಕ್ ಇಲ್ಲ. ಆದರೂ ನಾವು ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಪೊಲೀಸ್ ಇಲಾಖೆ,ಆರೋಗ್ಯ ಇಲಾಖೆ ನಿಯಮ ಪಾಲನೆ ಕ್ರಮ ತೆಗೆದುಕೊಳ್ಳುತ್ತೇವೆ. ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಟೆಸ್ಟ್​ಗೆ ಎರಡು ದಿನಗಳಲ್ಲಿ ದರ ನಿಗದಿ ಮಾಡುತ್ತೇವೆ. ಸಿಎಂ ಬೇಕಾದಷ್ಟು ಅನುದಾನ ನೀಡುತ್ತೇವೆ. ಅಂತಾರಾಷ್ಟ್ರೀಯ, ಅಂತರಾಜ್ಯಕ್ಕೆ ಪ್ರವಾಸಕ್ಕೆ ಯಾವುದೇ ನಿರ್ಬಂಧ ಇಲ್ಲ. ಇಂದು ಸಂಜೆ ಎಲ್ಲ ಮಾಹಿತಿ ಬಿಡುಗಡೆ ಮಾಡುತ್ತೇವೆ. ಸಂಜೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡ್ತೀವಿ. ವ್ಯಾಕ್ಸಿನ್ ಕಡ್ಡಾಯವಾಗಿ ತೆಗೆದುಕೊಳ್ಳಿ ಅಂತ ಹೇಳಲ್ಲ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದು ಹೇಳಿದ್ದಾರೆ.