Belagavi News In Kannada | News Belgaum

ಸಕ್ಕರೆ ಸಚಿವ ಹೇಳಿಕೆ ಖಂಡಿಸಿ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ

ಬೆಳಗಾವಿ: ರೈತರು ಬರ ಬರಲಿ ಎಂದು ಬಯಸುತ್ತಾರೆ ಎಂಬ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿಕೆಯನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಗೂ ರೈತರು ನಗರದ ಎಸ್‌ .ನಿಜನಿಂಗಪ್ಪ ಸಕ್ಕರೆ ಸಂಸ್ಥೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಇದಕ್ಕೂ ಮೊದಲು ಗಣೇಶಪುರ ರಸ್ತೆಯಲ್ಲಿರುವ ಎಸ್‌ .ನಿಜನಿಂಗಪ್ಪ ಸಕ್ಕರೆ ಸಂಸ್ಥೆ ಗೇಟ್‌ ಬಳಿ ಸೇರಿದ ಪ‍್ರತಿಭಟನಕಾರರು, ಶಿವಾನಂದ ಪಾಟೀಲ ವಿರುದ್ಧ ಘೋಷಣೆ ಕೂಗಿ ತಾವು ತಂದಿದ್ದ ಭಂಡಾರವನ್ನು ಎರಚಿ ಸಚಿವ ಶಿವಾನಂದ ಪಾಟೀಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಪೊಲೀಸರು ರೈತ ಮುಖಂಡರನ್ನು ವಶಕ್ಕೆ ಪಡೆದರು.
ಈ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಚುನಪ್ಪ ಪೂಜಾರಿ ಮಾತನಾಡಿ, ರಾಜ್ಯ, ರಾಷ್ಟ್ರಮಟ್ಟದಲ್ಲಿ ರೈತ ದಿನಾಚರಣೆ ಆಚರಿಸಿ, ರೈತ ದೇಶದ ಬೆನ್ನೆಲುಬು, ದೇಶಕ್ಕೆ ಅನ್ನ ನೀಡುವ ಅನ್ನದಾತ ಎಂದು ಹೊಗಳುತ್ತಿರುವ ಸಂದರ್ಭದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು, ರೈತರು ಬರಗಾಲ ಬರಬೇಕು ಎಂದು ಬಯಸುತ್ತಾರೆ, ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸುತ್ತಾರೆ. ವಿದ್ಯುತ್‌ ಉಚಿತವಾಗಿ ನೀಡಲಾಗುತ್ತಿದೆ. ಗೊಬ್ಬರಕ್ಕೆ ಸಬ್ಸಿಡಿಯನ್ನೂ ಕೊಡಲಾಗುತ್ತಿದೆ. ಹಾಗಾಗಿ, ಸಾಲ ಮನ್ನಾ ಮಾಡುವುದನ್ನು ಅವರು ನಿರೀಕ್ಷಿಸಬಾರದು ಎಂದು ಹೇಳಿದ್ದಾರೆ. ಇದು ಅತ್ಯಂತ ಖಂಡನೀಯ. ಶಿವಾನಂದ ಪಾಟೀಲ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಸಿಎಂಸಿದ್ದರಾಮಯ್ಯ ಅವರು ಇತ್ತೀಚೆಗೆ ಅಧಿವೇಶನದಲ್ಲಿ ಮಾತನಾಡುವಾಗ, ರೈತರ ಕೃಷಿ ಪತ್ತಿನ ಸಹಕಾರ ಸಂಘದ ಸಾಲದ ಮೇಲಿನ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡುತ್ತೇವೆ ಎಂದು ಹೇಳಿದ್ದರು. ಆಗ ಈ ಶಿವಾನಂದ ಪಾಟೀಲ ಎಲ್ಲಿದ್ದರು. ಆಗ ಇವರು ಪ್ರತಿಭಟನೆ ಮಾಡಬೇಕಿತ್ತು. ಕೇಂದ್ರ ಸರ್ಕಾರ ಕಾರ್ಪೊರೇಟ್‌ ಕಂಪನಿಗಳ ಸಾಲ ಮನ್ನಾ ಮಾಡಿದಾಗ ಇವರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದ್ದರು.
ಸಚಿವ ಶಿವನಾಂದ ಪಾಟೀಲ ಅವರು ಕಳೆದ ವರ್ಷ ರೈತರ ಆತ್ಮಹತ್ಯೆ ವಿಚಾರದ ಬಗ್ಗೆಯೂ ಹಗುರವಾಗಿ ಮಾತನಾಡಿದ್ದರು. ಆಗ ಅವರಿಗೆ ತಕ್ಕ ಪಾಠ ಕಲಿಸಿದ್ದೆವು. ಪ್ರತಿ ಬಾರಿಯೂ ಅವರು ಇಂತಹದೇ ಹೇಳಿಕೆಯನ್ನು ನೀಡುತ್ತಿದ್ದಾರೆ. ರೈತರಿಗೆ ಅನುಕೂಲವಾಗುವ ಯೋಜನೆಯನ್ನು ಜಾರಿಗೆ ತರಲು ಇವರಿಗೆ ಆಗುವುದಿಲ್ಲ. ಹೆಚ್ಚುವರಿ ಕಬ್ಬು ಬಾಕಿಯನ್ನು ರೈತರಿಗೆ ಕೊಡಿಸಲು ಕ್ರಮ ಕಗೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ, ಹಗುರವಾಗಿ ಮಾತನಾಡುತ್ತಾರೆ ಎಂದು ದೂರಿದರು.
ಸಚಿವರು ತಕ್ಷಣ ರೈತರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಅವರು ರಾಜ್ಯದಲ್ಲಿ ಎಲ್ಲಿಯೂ ಓಡಾಡುವುದಕ್ಕೆ ನಾವು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು./////