Belagavi News In Kannada | News Belgaum

ಬೆಳಗಾವಿಯಲ್ಲಿ ವಿಶ್ವ ಗ್ರಾಹಕರ ದಿನಾಚರಣೆ..

ಗ್ರಾಹಕರು ಜಾಗರೂಕತೆಯಿಂದ ವಸ್ತುಗಳನ್ನು ಖರೀದಿಸಿ: ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಮುರಳೀಮೋಹನ್ ರೆಡ್ಡಿ

ಬೆಳಗಾವಿ, :   ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಯುವಕರು ಹಾದಿ ತಪ್ಪಿಸುವ ಜಾಹೀರಾತುಗಳನ್ನು ನಂಬಿ ಅನೇಕ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಮರುಳಾಗದೆ ಜಾಗೃತ ವಹಿಸಿ ವಸ್ತುಗಳನ್ನು ಖರೀದಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಮುರಳೀಮೋಹನ್ ರೆಡ್ಡಿ ಅವರು ತಿಳಿಸಿದರು..

 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ ಕಾನೂನು ಮಾಪನ ಶಾಸ್ತ್ರ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಆಹಾರ ಸುರಕ್ಷತೆ ಗುಣಮಟ್ಟ ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ( ಡಿ.ಸಿ.ಐ.ಸಿ) ಹಾಗೂ ಇತರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ (ಡಿ.28) ಏರ್ಪಡಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು..

 

ದೇಶದಲ್ಲಿ ಯಾವುದೇ ಕಂಪನಿ ವಸ್ತುಗಳನ್ನು ಉಚಿತವಾಗಿ ಕೊಡುವುದಿಲ್ಲ, ಆದ್ದರಿಂದ ಯಾವುದೇ ಜಾಹೀರಾತು, ಹಾಗೂ ಅಪರಿಚಿತ ಲಿಂಕ್ ಗಳನ್ನು ನೋಡಿದ ತಕ್ಷಣ ಖರೀದಿಸಿದೆ ಅದರ ಸಂಪೂರ್ಣ ಮಾಹಿತಿ ತಿಳಿದು ನಂತರ ಅಗತ್ಯ ವಸ್ತುಗಳನ್ನು ಖರೀದಿಸಬೇಕು ಎಂದು ಹೇಳಿದರು..

 

ಆನ್ ಲೈನ್ ವ್ಯಾಪಾರ ವ್ಯವಹಾರ ಮಾಡುವಂತ ಗ್ರಾಹಕರು ಹೆಚ್ಚು ಪ್ರಚಾರದಲ್ಲಿರುವ ಕಂಪನಿಗಳ ವಸ್ತುಗಳನ್ನು ಖರೀದಿಸಿದರೆ ಇಂತಹ ವಂಚನೆ ತಡೆಯಬಹುದು ಎಂದು ತಿಳಿಸಿದರು..

 

ಇದೇ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಸುನಂದ ಎಸ್. ಕಾದ್ರೊಳ್ಳಿಮಠ ಅವರು ಮಾತನಾಡಿ ಗ್ರಾಹಕರು ಯಾವುದೇ ವಸ್ತು ಖರೀದಿಸುವ ಮುನ್ನ ಅದರ ಗುಣಮಟ್ಟ, ಯೋಗ್ಯ ಬೆಲೆ ಕೂಲಂಹಕುಷವಾಗಿ ಪರೀಕ್ಷಿಸುವುದರ ಜೊತೆಗೆ ಕಡ್ಡಾಯವಾಗಿ ರಶೀದಿ (ಬಿಲ್ಲ್) ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಬೆಳಗಾವಿ ಜಿಲ್ಲಾ ಗ್ರಾಹಕರ ಸಂಘದ ಅಧ್ಯಕ್ಷರು ಹಾಗೂ ನ್ಯಾಯವಾದಿಗಳಾದ  ಎನ್. ಆರ್  ಲಾತೂರ ಅವರು.

 

ಇ- ಕಾಮರ್ಸ್ ಮತ್ತು ಡಿಜಿಟಲ್ ಯುಗದಲ್ಲಿ ಆನಲೈನ್ ವ್ಯವಹಾರದಿಂದ ಸಮಯ ಉಳಿತಾಯ ಮಾಡುವ ಭರದಲ್ಲಿ ಹೆಚ್ಚಿನ ಸಮಸ್ಯೆಗಳಿಗೆ ಸಿಲುಕಿ ನೋವು,ನಷ್ಟ, ಹಾಗೂ ಪ್ರಾಣ ಕಳೆದುಕೊಳ್ಳುವ ಉದಾಹರಣೆಗಳಿವೆ. ಆದ್ದರಿಂದ ಗ್ರಾಹಕರು ವಸ್ತು ಖರೀದಿಸುವಾಗ ಹೆಚ್ಚಿನ ಗಮನ ಹರಿಸುವುದು ಅವಶ್ಯಕ ಎಂದು ತಿಳಿಸಿದರು..

 

ಗ್ರಾಹಕರ ಹಕ್ಕು ಮತ್ತು ಜವಾಬ್ದಾರಿಗಳನ್ನು ಕುರಿತು ಕರಪತ್ರಗಳನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಸುನಂದ ಎಸ್. ಕಾದ್ರೊಳ್ಳಿಮಠ ಅವರು ಬಿಡುಗಡೆ ಮಾಡಿದರು.

 

ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಗಿರೀಶ್ ಪಾಟೀಲ, ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮೋಹನಕುಮಾರ ಹಂಚಾಟೆ, ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್ ಸದಸ್ಯರಾದ ಪೂರ್ಣಿಮಾ ಪಟ್ಟಣಶೆಟ್ಟಿ, ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂ.ಬಿ.ಎ ವಿಭಾಗದ ನಿರ್ದೇಶಕರಾದ ಡಾ. ಸೂರ್ಯಕುಮಾರ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯಹಾರಗಳ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಶೈಲ ಕಂಕಣವಾಡಿ,

ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಂಜುನಾಥ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಾದ ಆರ್. ಐ ಬಿಸಗುಪ್ಪಿ, ಮಹಿಳಾ ಕಲ್ಯಾಣ ಸಂಸ್ಥೆ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಗೌರವ ಕಾರ್ಯದರ್ಶಿಯಾದ ವೈಜಯಂತಿ ಚೌಗಲಾ ಹಾಗೂ ಶಾಲಾ ಎಂಬಿಎ ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.