Belagavi News In Kannada | News Belgaum

ಭಕ್ತರ ಕಲ್ಪತರು, ಬೇಡಿದ್ದನ್ನು ದಯಪಾಲಿಸುವ ಭಕ್ತರ ಕಾಮಧೇನು ಮಾಚಕನೂರಿನ ಶ್ರೀ ಹೊಳೆಬಸವೇಶ್ವರ

ಮುಧೋಳ : ಲಕ್ಷಾಂತರ ಭಕ್ತಾಧಿಗಳನ್ನು ಹೊಂದಿರುವ ಸಕಲರ ಇಷ್ಟಾರ್ಥ ಪೂರೈಸುವ ಐತಿಹಾಸಿಕ ಪರಂಪರೆಯ ಪ್ರತೀಕವಾಗಿರುವ ಮಾಚಕನೂರ ಶ್ರೀ ಹೊಳೆಬಸವೇಶ್ವರ ದೇವಸ್ಥಾನ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಘಟಪ್ರಭೆ ನದಿ ದಂಡೆಯ ಮೇಲಿನ ಮಾಚಕನೂರ ಎಂಬ ಗ್ರಾಮದಲ್ಲಿದೆ.
ಮಹಾಕವಿ ಚಕ್ರವರ್ತಿ ರನ್ನನ ನಾಡಾದ ಈ ಮುದುವೊಳಲು ಪುರಾತನ ಇತಿಹಾಸ ಹೊಂದಿದೆ. ಈ ನಾಡು ಐತಿಹಾಸಿಕವಾಗಿ ಬದಾಮಿ ಚಾಲುಕ್ಯರ, ರಾಷ್ಟ್ರಕೂಟರ ನಂತರ ಕಲ್ಯಾಣ ಚಾಲುಕ್ಯರ ಸಾಮ್ರಾಜ್ಯದಲ್ಲಿತ್ತು ಎಂಬುದನ್ನು ನಾವು ಐತಿಹಾಸಿಕವಾಗಿ ನೋಡಬಹುದಾಗಿದೆ. ಹಾಗಾಗಿ ಈ ನಾಡಿನಲ್ಲಿ ಈ ಆಳರಸರ ಕಾಲದಲ್ಲಿ ಕಟ್ಟಿರಬಹುದಾದ ಹಲವಾರು ದೇವಸ್ಥಾನಗಳು ಇಂದಿಗೂ ಅಂದಿನ ಕಲಾ ಹಾಗೂ ಧಾರ್ಮಿಕ ಪರ್ವಕಾಲವನ್ನು ಪ್ರದರ್ಶಿಸುತ್ತಿವೆ.
ಇಂತಹ ದೇವಸ್ಥಾನಗಳಲ್ಲಿ ಮುಧೋಳ ತಾಲೂಕಿನ ಮಾಚಕನೂರಿನ ಶ್ರೀ ಹೊಳೆಬಸವೇಶ್ವರ ದೇವಸ್ಥಾನವೂ ಒಂದಾಗಿದೆ. ಮುಧೋಳದಲ್ಲಿರುವ ಕಲ್ಮೇಶ್ವರ ದೇವಸ್ಥಾನ, ನೆಲಗುಡಿ ಶಿವನ ದೇವಾಲಯ, ಬೆಳಗಲಿಯ ಅಮೃತೇಶ್ವರ ದೇವಸ್ಥಾನ ಹಾಗೂ ಲೋಕಾಪೂರದ ಲೋಕನಾಥ ದೇವಸ್ಥಾನ ಮತ್ತು ಮಾಚಕನೂರ ಶ್ರೀ ಹೊಳೆಬಸವೇಶ್ವರ ದೇವಸ್ಥಾನ ಪುರಾತನ ದೇವಾಲಯಗಳಾಗಿವೆ. ಆದರೆ ಈ ಎಲ್ಲ ದೇವಾಲಯಗಳು ಒಂದನ್ನೊಂದು ಹೋಲುವುದಿಲ್ಲ ಎಂಬುದು ವಿಶೇಷವಾಗಿದೆ. ಲೋಕನಾಥನ ದೇವಸ್ಥಾನ ರಾಷ್ಟ್ರಕೂಟರ ಅರಸರ ಎರಡನೇ ಕೃಷ್ಣನ ಕಾಲದಲ್ಲಿ ದಂಡನಾಯಕನಾಯಕನಾಗಿದ್ದ ವೀರಬಂಕೇಯ ಎಂಬ ದಂಡನಾಯಕನ ಮಗ ಲೋಕಟೇಶ ಎಂಬಾತ ಕಟ್ಟಿಸಿದ ಎಂಬುದನ್ನು ಶಾಸನದಿಂದ ತಿಳಿಯಬಹುದಾಗಿದೆ. ಉಳಿದ ಯಾವ ದೇವಾಲಯಗಳ ನಿರ್ಮಾಣದ ಇತಿಹಾಸ ಲಭ್ಯವಾಗುವುದಿಲ್ಲ. ಹಾಗೆಯೇ ಮಾಚಕನೂರಿನ ಶ್ರೀ ಹೊಳೆಬಸವೇಶ್ವರ ದೇವಸ್ಥಾನದ ನಿಮಾಣದ ಕಾಲ ಹಾಗೂ ನಿರ್ಮಾಣ ಮಾಡಿದ ಅರಸರು ಯಾರು ಎಂಬುದು ಕೂಡ ಐತಿಹಾಸಿಕ ದಾಖಲೆಗಳಿಲ್ಲ.
ಮಾಚಕನೂರ ಶ್ರೀ ಹೊಳೆಬಸವೇಶ್ವರ ದೇವಸ್ಥಾನ ಒಂದು ವಿಶಿಷ್ಟ ರೀತಿಯಲ್ಲಿ ಕಟ್ಟಲಾಗಿದೆ. ಈ ದೇವಾಲಯಕ್ಕೆ ಉಪಯೋಗಿಸಲಾಗಿರುವ ಕಲ್ಲು ಎಲ್ಲಿಂದ ತರಲಾಗಿದೆ ಎಂಬುದು ತಿಳಿದಿಲ್ಲ. ಸುತ್ತಮುತ್ತಲ ಪ್ರದೇಶದಲ್ಲಿ ಈ ತೆರನಾದ ಕಲ್ಲು ಇಲ್ಲ. ಸಂಪೂರ್ಣವಾಗಿ ಕಲ್ಲಿನಲ್ಲಿಯೇ ಅತ್ಯಂತ ಸುಂದರವಾಗಿ ಕಲಾತ್ಮಕವಾಗಿ 40 ಕಂಬಗಳ ಮೇಲೆ ಈ ದೇವಸ್ಥಾನ ಇದೆ. ಈ ದೇವಾಲಯ ದೂರದಿಂದ ಬಹು ಸುಂದರವಾಗಿ ಕಾಣುತ್ತದೆ. ಕಂಬಗಳನ್ನು ಎರಡು ನಮೂನೆಯಲ್ಲಿ ಕೆತ್ತಲಾಗಿದೆ. ಒಂದು ಗುಂಡಾಕಾರದಲ್ಲಿದ್ದರೆ ಇನ್ನೊಂದು ಚೌಕು ಆಕಾರದಲ್ಲಿದೆ. ಗುಂಡಾಕಾರದಲ್ಲಿ ಕಲಾತ್ಮಕ ಚಿತ್ರಗಳನ್ನು ಅದರಲ್ಲಿ ಕೆತ್ತಲಾಗಿದೆ. ಇನ್ನೊಂದು ಚೌಕ ಆಕಾರದಲ್ಲಿ ನಡುವೆ ಹಾಗೂ ಮೇಲೆ ಎಡ ಬಲಕ್ಕೆ ಎರಡು ಆನೆಗಳನ್ನು ಕಲ್ಲಿನಲ್ಲಿ ಸುಂದರವಾಗಿ ಕೆತ್ತಲಾಗಿದೆ. ಮೇಲ್ಗಡೆ ಮೂರು ಕಾಲುಗಳುಳ್ಳ ದೇವಿಯ ಚಿತ್ರವಿದೆ.
ಇನ್ನೊಂದು ಅಚ್ಛರಿಯ ಸಂಗತಿಯೊಂದಿತ್ತು. ಅದೆಂದರೆ ದೀಪ ಸ್ಥಂಭವೊಂದು ದೇವಾಲಯದ ಎದುರುಗಡೆ ಇತ್ತು. ಆ ಏಕಶಿಲಾ ದೀಪಸ್ಥಂಭದ ಕಲ್ಲು ಯಾವುದೇ ಆಧಾರವಿಲ್ಲದೇ ನಿಂತಿತ್ತು. ಅದು ಸಾರ್ವಜನಿಕರ ಅಚ್ಛರಿಗೆ ಕಾರಣವಾಗಿತ್ತು. ಆದರೆ ಇತ್ತೀಚೆಗೆ ಆ ಏಕಶಿಲಾ ಸ್ತಂಭವನ್ನು ಕೆಡವಿ ಅಲ್ಲಿ ಹೊಸ ಆಧುನಿಕ ದೀಪಸ್ತಂಭವನ್ನು ಕಟ್ಟಲಾಗಿದೆ.
ಹೊಳೆಬಸವನೆಂದೇ ಪ್ರಖ್ಯಾತನಾಗಿರುವ ಈ ನಂದಿಯ ಪ್ರತಿಮೆ ಬಹು ಸುಂದರವಾಗಿ ಕಾಣುತ್ತದೆ. ತನ್ನ ಕಾಲುಗಳನ್ನು ಮಡಚಿ ಕುಳಿತುಕೊಂಡಿರುವ ಈ ನಂದಿಯು ತನ್ನ ಮುಖವನ್ನು ಸ್ವಲ್ಪ ಎಡಕ್ಕೆ ತಿರುಗಿಸಿದೆ. ಸುಂದರವಾಗಿ ಕಲಾತ್ಮಕವಾಗಿ ಕೆತ್ತಲಾಗಿರುವ ಈ ನಂದಿಯ ಕೊರಳಿನಲ್ಲಿ ರುದ್ರಾಕ್ಷಿ ಸರ ಹಾಗೂ ಕೆಳಗೆ ಗಂಟೆಯನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ಸಾಲಗ್ರಾಮ ಶಿಲೆಯಿಂದ ನಿರ್ಮಿಸಿರುವ ಈ ವಿಗ್ರಹ ಅಂದಿನ ಶಿಲ್ಲಿಗಳ ನಯ ನಾಜೂಕಿನ ಕೆತ್ತನೆಯ ಪ್ರತಿಭೆಯನ್ನು ತೋರಿಸುತ್ತದೆ. ಈ ನಂದಿಯ ಬಲಕ್ಕೆ ಸಣ್ಣ ತೀರ್ಥದ ಹೊಂಡವನ್ನು ನಿರ್ಮಿಸಿದ್ದಾರೆ.
ಭಕ್ತರು ಟೆಂಗಿನಕಾಯಿ ಒಡೆದರೆ ಅದರ ಎಳೆನೀರು ಸಂಗ್ರಹವಾಗಲಿ ಎಂಬ ಉದ್ದೇಶಕ್ಕಾಗಿ ದೇವಸ್ಥಾನದ ಬಲಭಾಗದಲ್ಲಿ ಸಣ್ಣ ಹೊಂಡವೊಂದನ್ನು ನಿರ್ಮಿಸಲಾಗಿದೆ. ಈ ಸಣ್ಣ ಹೊಂಡ ಕಲಾತ್ಮಕವಾಗಿ ನಂದಿಯ ವಿಗ್ರಹ ಹೊಂದಿದ್ದು ಅಪರೂಪ ಎನ್ನಬಹುದಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಬರುವ ಭಕ್ತರು ಭಕ್ತಿಯಿಂದ ಪೂಜಿಸಿ ಬೇಡಿದ್ದನ್ನು ದಯಪಾಲಿಸುವ ಕಲ್ಪತರು ಕಾಮಧೇನು ಈ ಮಾಚಕನೂರಿನ ಹೊಳೆಬಸವೇಶ್ವರ ದೇವರು ಎಂಬುದು ಭಕ್ತರ ನಂಬುಗೆ.
ಅಚ್ಛರಿಯ ವಿಶೇಷ ಪೂಜೆ : ಘಟಪ್ರಭೆ ನದಿಗೆ ಪ್ರತಿ ವರ್ಷ ಮಹಾಪೂರ ಬರುತ್ತದೆ. ಆಗ ಮಾಚಮನೂರಿನ ಶ್ರೀ ಹೊಳೆಬಸವೇಶ್ವರ ದೇವಸ್ಥಾನ ನದಿಯಲ್ಲಿ ಮುಳುಗುತ್ತದೆ. ಆಗ ದೇವಸ್ಥಾನದ ಮೇಲಿನ ಕಳಸವೊಂದೇ ಕಾಣುತ್ತದೆ. ವಿಶೇಷವೆಂದರೆ ಆಗ ಶ್ರೀ ಹೊಳೆಬಸವೇಶ್ವರ ದೇವರ ಪೂಜೆ ತನ್ನಿಂದ ತಾನೆ ನಡೆಯುತ್ತದೆ ಎಂಬ ಪ್ರತೀತಿ ಇದೆ. ಪ್ರತಿ ದಿನ ಪೂಜೆ ನಡೆಯುವ ಸಮಯಕ್ಕೆ ಸರಿಯಾಗಿ ತನ್ನಿಂದ ತಾನೇ ಪೂಜೆ ನಡೆಯುತ್ತದೆ. ಆ ಸಮಯಕ್ಕೆ ಘಂಟೆ ನಿನಾದ ಹಾಗೂ ಧೂಪದ ಸುವಾಸನೆ ಬರುತ್ತದೆ ಎಂಬುದು ಭಕ್ತರ ಹೇಳಿಕೆಯಾಗಿದೆ. ಈ ವಿಶೇಷ ಇಲ್ಲಿ ಅತ್ಯಂತ ಮಹತ್ವ ಪಡೆದಿದೆ.
ಅದ್ಧೂರಿ ಜಾತ್ರೆ : ಹೊಳೆಬಸವಣ್ಣನ ಜಾತ್ರೆಯು ಡಿಸೆಂಬರ್ 31 ರಿಂದ ಜನೇವರಿ 4ರವರೆಗೆ ಅದ್ಧೂರಿಯಿಂದ ನಡೆಯಲಿದೆ. ಈ ಬಸವಣ್ಣನ ಪ್ರತಿಮೆ ಉದ್ಭವ ನಂದಿ ಎಂದು ಜನರ ನಂಬಿಕೆಯಾಗಿದೆ. ಈ ಮೂರ್ತಿಯಿದ್ದ ಹುತ್ತವೊಂದರಲ್ಲಿ ಆಕಳು ದಿನಾಲು ಹಾಲು ಕರೆಯುತ್ತಿತ್ತು. ಆಕಳ ಒಡೆಯ ಹುತ್ತ ಒಡೆದು ನೋಡಿದಾಗ ಈ ನಂದಿಮೂರ್ತಿ ಉದ್ಭವಿಸಿತು. ನಂತರದ ದಿನಗಳಲ್ಲಿ ದೇವಸ್ಥಾನ ನಿರ್ಮಿಸಲಾಯಿತು ಎಂಬ ನಂಬಿಕೆಯಾಗಿ ಭಕ್ತರಲ್ಲಿದೆ.
ಜಾತ್ರೆಯ ಅಂಗವಾಗಿ ಡಿ. 31ರಂದು ಬಾಳೆ ಕಂಬದ ಮಹಾಪೂಜೆ ನಡೆಯುವದು. ಸೋಮವಾರ ಜನೇವರಿ ದಿ. 01 ರಂದು ಕಾರ್ತಿಕೋತ್ಸವ ನಡೆಯಲಿದೆ. ದಿ. 2 ಮಂಗಳವಾರ ಶ್ರೀ ಹೊಳೆಬಸವೇಶ್ವರ ಮಹಾರಥೋತ್ಸವ ಜರುಗುತ್ತದೆ. ರಥೋತ್ಸವದ ನಂತರ ರಾತ್ರಿ 10-30ಕ್ಕೆ ನಾಟಕ ಮತ್ತು ಬೈಲಾಟ ಇರುತ್ತದೆ. ಬುಧವಾರ ದಿ. 3 ರಂದು ಮಧ್ಯಾಹ್ನ 3 ಘಂಟೆಗೆ ಪ್ರಸಿದ್ಧ ಕುಸ್ತಿ ಪಟುಗಳಿಂದ ಜಂಗಿ ನಿಕಾಲಿ ಕುಸ್ತಿಗಳು ನಡೆಯಲಿವೆ. ಗುರುವಾರ ದಿ. 4 ರಂದು ವಿವಿಧ ಊರುಗಳಿಂದ ಬಂದ ನಂದಿಕೋಲುಗಳ ಪೂಜೆ ಹಾಗೂ ಮೆರವಣಿಗೆಗಳೊಂದಿಗೆ ಕಾರ್ಯಕ್ರಮಗಳು ಮುಕ್ತಾಯವಾಗುತ್ತವೆ.