Belagavi News In Kannada | News Belgaum

ಬಿ.ವೈ.ವಿಜಯೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಧರಣಿ ಸತ್ಯಾಗ್ರಹ

ಬೆಂಗಳೂರು: ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ನೇರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಬಿ.ವೈ.ವಿಜಯೇಂದ್ರ ತಮ್ಮ ಶಾಸಕ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು.

ಇಲ್ಲಿನ ಆನಂದರಾವ್ ವೃತ್ತದಲ್ಲಿನ ಕಾಂಗ್ರೆಸ್ ಕಚೇರಿ ಬಳಿ ಧರಣಿ ನಡೆಸಿದ ಕಾರ್ಯಕರ್ತರು, ಶಾಸಕ ಯತ್ನಾಳ್ ಬಹಿರಂಗವಾಗಿ ಮಾಜಿ ಸಿಎಂ ಬಿಎಸ್‍ವೈ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ 40ಸಾವಿರ ಕೋಟಿ ರೂ.ಕೋವಿಡ್ ಹಗರಣದ ಆರೋಪ ಮಾಡಿದ್ದು, ಬಿಜೆಪಿ ಮುಖಂಡರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕೂಡಲೇ ಈ ಕುರಿತು ಸ್ಪಷ್ಟಣೆ ನೀಡಬೇಕು ಎಂದು ಒತ್ತಾಯಿಸಿದರು.

ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ದೇಶದಲ್ಲಿ ಬಿಜೆಪಿಯನ್ನು ವಿರೋಧಿಸುವ ವಿಪಕ್ಷಗಳ ವಿರುದ್ಧ ಸಿಬಿಐ, ಈಡಿ, ಐಟಿ ಮೂಲಕ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಆದರೆ, ಬಿಜೆಪಿ ಮುಖಂಡರೇ 40 ಸಾವಿರ ಕೋಟಿ ರೂ.ಕೋವಿಡ್ ಹಗರಣ ನಡೆಸಿದ್ದಾರೆಂದು ಸ್ವತಃ ಬಿಜೆಪಿ ಶಾಸಕರೂ ಆರೋಪ ಮಾಡಿದ್ದರೂ ಈ ಬಗ್ಗೆ ಕೇಂದ್ರ ಬಿಜೆಪಿ ಮೌನವಹಿಸಿದೆ ಎಂದು ದೂರಿದರು.

ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಕಂಡು ಜನ ತಕ್ಕ ಉತ್ತರ ನೀಡಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಯಡಿಯೂರಪ್ಪರನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಹೋರಾಟದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಜನಾರ್ಧನ್, ಸುಧಾಕರ್ ರಾವ್, ಪರಿಸರ ರಾಮಕೃಷ್ಣ, ಹೇಮರಾಜ್, ಪ್ರಕಾಶ್, ಬಬಳೇಶ್, ಉಮೇಶ್, ಆನಂದ್, ಚಂದ್ರಶೇಖರ, ದರ್ಶನ್, ಪುಟ್ಟರಾಜು ಸಹಿತ ಇನ್ನಿತರರು ಪಾಲ್ಗೊಂದಿದ್ದರು.