Belagavi News In Kannada | News Belgaum

ಟೀ ಅಂಗಡಿಗೆ ಟ್ರಕ್‌ ನುಗ್ಗಿಸಿದ ಚಾಲಕ: ಐವರ ದುರ್ಮರಣ

ಚೆನ್ನೈ: ಚಾಲಕನೊಬ್ಬ ನಿದ್ದೆ ಮಂಪರಿನಲ್ಲಿ ಟೀ ಅಂಗಡಿಯೊಳಗೆ ಟ್ರಕ್‌ ನುಗ್ಗಿಸಿದ ಪರಿಣಾಮ ಐವರು ದಾರುಣವಾಗಿ ಮೃತಪಟ್ಟ ಘಟನೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಈ ಅವಘಡದಲ್ಲಿ 19 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿಮೆಂಟ್‌ ತುಂಬಿದ ಟ್ರಕ್ ಅರಿಯಲೂರಿನಿಂದ ಶಿವಗಂಗೈಗೆ ತೆರಳುತ್ತಿತ್ತು. ಹೀಗೆ ಹೋಗುತ್ತಿದ್ದ ಸಂದರ್ಭದಲಿ ಚಾಲಕನಿಗೆ ನಿದ್ದೆ ಬಂದಿದ್ದು, ಪರಿಣಾಮ ಟ್ರಕ್‌ ಚಾಲಕನಿಂದ ನಿಯಂತ್ರಣ ಕಳೆದುಕೊಂಡು ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ಟೀ ಅಂಗಡಿಗೆ ನುಗ್ಗಿದೆ.

ಇತ್ತ ಟೀ ಅಂಗಡಿಯಲ್ಲಿ ಶಬರಿಮಲೆ ಯಾತ್ರಾರ್ಥಿಗಳು ಟೀ ಕುಡಿಯುತ್ತಿದ್ದರು. ಈ ವೇಳೆ ಟ್ರಕ್‌ ಏಕಾಏಕಿ ನುಗ್ಗಿದೆ. ಅಪಘಾತದಿಂದ ಟೀ ಅಂಗಡಿ ಬಳಿ ನಿಲ್ಲಿಸಿದ್ದ ಕಾರು ಹಾಗೂ ಇತರೆ ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ.  ಪ್ರಾಥಮಿಕ ತನಿಖೆಯ ಪ್ರಕಾರ, ಸಿಮೆಂಟ್ ಟ್ರಕ್ ಚಾಲನೆ ಮಾಡುವಾಗ ನಿದ್ರಿಸಿದ ಕಾರಣ ಚಾಲಕ ತನ್ನ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಘಟನೆ ಸಂಬಂಧ ತನಿಖೆ ಮುಂದುವರಿದಿದೆ.