Belagavi News In Kannada | News Belgaum

ಎಪಿಎಂಸಿ-ಜೈ ಕಿಸಾನ್ ಮಾರುಕಟ್ಟೆ ವ್ಯಾಪಾರಸ್ಥರು ಪರಸ್ಪರ ಸಹಕರಿಸಬೇಕು: ಸಚಿವ ಸತೀಶ ಜಾರಕಿಹೊಳಿ ಸಲಹೆ


ಬೆಳಗಾವಿ: ಜನವರಿ 01:: ನಗರದಲ್ಲಿರುವ ಎ.ಪಿ.ಎಂ.ಸಿ ಹಾಗೂ ಜೈಕಿಸಾನ್ ಎರಡು ಮಾರ್ಕೆಟ್ ಗಳಿಗೆ ವ್ಯಾಪಾರ ವಹಿವಾಟುಗಳನ್ನು ಮಾಡಲು ಅವಕಾಶವಿದ್ದು, ವ್ಯಾಪಾರಸ್ಥರು ಪರಸ್ಪರ ಸಹಕಾರ ಮತ್ತು ಸೌಹಾರ್ದತೆಯಿಂದ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಜ.01) ಏರ್ಪಡಿಸಲಾಗಿದ್ದ ಎಪಿಎಂಸಿ ಹಾಗೂ ಜೈಕಿಸಾನ್ ಮಾರುಕಟ್ಟೆಗಳ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.
ಎಪಿಎಂಸಿ ಮಾರುಕಟ್ಟೆಯನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿದೆ. ಆದರೆ ಹೊಸದಾಗಿ ಜೈಕಿಸಾನ್ ಮಾರುಕಟ್ಟೆ ಆರಂಭಿಸಿರುವುದರಿಂದ ಎಪಿಎಂಸಿ ಮಾರುಕಟ್ಟೆ ನಷ್ಟ ಅನುಭವಿಸುತ್ತಿದೆ. ಆದ್ದರಿಂದ ಇದಕ್ಕೆ ಜೈಕಿಸಾನ ಮಾರುಕಟ್ಟೆ ಸಹಕಾರ ಅವಶ್ಯಕವಾಗಿದೆ ಎಂದು ಹೇಳಿದರು.
ಸಮಯ ನಿಗದಿ ಮಾಡಿದರೆ ಎರಡು ಮಾರುಕಟ್ಟೆ ವ್ಯಾಪಾರ ವಹಿವಾಟು ಕುಂಠಿತವಾಗುವುದು. ಆದ್ದರಿಂದ ಎರಡು ಮಾರುಕಟ್ಟೆಯವರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಮಂದಿನ ದಿನಗಳಲ್ಲಿ ಸಮಸ್ಯೆ ಹೆಚ್ಚಾದರೆ ಇನ್ನೊಂದು ಬಾರಿ ಸಭೆ ನಡೆಸಿ ಅಗತ್ಯ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಆಸೀಫ್ (ರಾಜು) ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ನೀತೇಶ್ ಪಾಟೀಲ, ಹಾಗೂ ಎ.ಪಿ.ಎಂ.ಸಿ ಹಾಗೂ ಜೈಕಿಸಾನ್ ಎರಡು ಮಾರ್ಕೆಟ್ ವ್ಯಾಪಾರಸ್ಥರು, ಸದಸ್ಯರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.