Belagavi News In Kannada | News Belgaum

ಬೆಳಗಾವಿ ಶಾಲಾ ಮಕ್ಕಳ ಧಾರವಾಡ ಪ್ರವಾಸ; ಧಾರವಾಡದ ಅಡ್ವೆಂಚರ್ ಪಾರ್ಕ್‍ನಲ್ಲಿ ಅಪಘಾತ:

ಇಬ್ಬರು ಮಕ್ಕಳ ಕೈಕಾಲು ಮುರಿತ; ಬಿಲ್ ಪಾವತಿಗೆ ಹಿಂಜರಿತ

 

ಬೆಳಗಾವಿ:ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವುದು ತಪ್ಪಲ್ಲ. ಮಕ್ಕಳ

ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಇಂತಹ ಚಟುವಟಿಕೆಗಳು ಅಗತ್ಯ. ಆದರೆ ಮಕ್ಕಳನ್ನು ಹೊರಗೆ ಕರೆದೊಯ್ದಾಗ ಅವರ ಸುರಕ್ಷತೆಯತ್ತ
ಗಮನ ಹರಿಸುವುದು ಅಷ್ಟೇ ಮುಖ್ಯ. ಮೇಲಾಗಿ ಪ್ರವಾಸಿ ತಾಣದ ಸ್ಥಳದಲ್ಲಿ
ಸುರಕ್ಷತೆ ಇದೆಯೇ ಎಂಬುದನ್ನು ಪರಿಶೀಲಿಸುವುದು ತುಂಬಾ ಮುಖ್ಯ.

ಅನುಮಾನ ಕಂಡುಬಂದಲ್ಲಿ ಅಲ್ಲಿ ಮಕ್ಕಳನ್ನು ಆಟವಾಡಲು ಮತ್ತು ವೀಕ್ಷಣೆಗೆ
ಬಿಡಲೇಬಾರದು. ಗುರುವಾರ ಬೆಳಗಾವಿಯ ಚನ್ನಮ್ಮ ವೃತ್ತದ ಕಾಲೇಜು ರಸ್ತೆಯಲ್ಲಿರುವ ಬಿ ಎಸ್ ಹಂಚಿನಾಳ ಶಾಲಾ ಮಕ್ಕಳನ್ನು ಧಾರವಾಡದ ಅಡ್ವೆಂಚರ್ ಪಾರ್ಕ್‍ಗೆ ಕರೆದೊಯ್ಯಲಾಗಿತ್ತು.

 

ಈ ಪಾರ್ಕ್ಅನ್ನು  ಮಕ್ಕಳಿಗೆ ತೋರಿಸುವುದು ಒಳ್ಳೆಯ ಸಂಗತಿ. ಆದರೆ ಅಲ್ಲಿ ನಡೆದಿರುವ ಅವಘಡವನ್ನು ನೋಡಿದರೆ ಮಕ್ಕಳನ್ನು ಎಲ್ಲಿಗೂ ಕಳುಹಿಸಬಾರದು ಎಂದುಅನ್ನಿಸದೇ ಇರದು.

ಈ ಅಡ್ವೆಂಚರ್ ಪಾರ್ಕ್ ನಲ್ಲಿ ಮಕ್ಕಳನ್ನು ಒಂದು ಸುತ್ತು ಹಾಕಿಸಲು ಟ್ರ್ಯಾಕ್ಟರ್ ವ್ಯವಸ್ಥೆ ಮಾಡಲಾಗಿದೆ. ಎರಡು ಟ್ರ್ಯಾಕ್ಟರ್ ಗಳಲ್ಲಿ
ಮಕ್ಕಳ ಸುತ್ತಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಒಂದು ಟ್ರ್ಯಾಕ್ಟರ್ನಲ್ಲಿ 9 ಮಕ್ಕಳಿರುತ್ತಾರೆ. ಹೆಚ್ಚು ಈ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಮಕ್ಕಳಿಗೆ ಗಂಭೀರ
ಗಾಯಗಳಾಗಿವೆ. ಆದರೆ ಎಲ್ಲ ಮಕ್ಕಳೂ ಅಪಾಯದಿಂದ ಪಾರಾಗಿದ್ದಾರೆ.
ಈ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಹುಡುಗ ಅಪ್ರಾಪ್ತ ವಯಸ್ಸಿನ ಬಾಲಕನಾಗಿದ್ದ
ಎಂದು ಪೋಷಕರು ಬೆಳಗಾವಿ ವರದಿಗೆ ಮಾಹಿತಿ ನೀಡಿದ್ದಾರೆ.

 

ಈ ಟ್ರ್ಯಾಕ್ಟರ್  ನಲ್ಲಿದ್ದ ಸುಂದರ್ ತಳವಾರ ಎಂಬ ಬಾಲಕನ ಕೈ ಮುರಿದಿದ್ದರೆ ಸಮರ್ಥ
ದೇಸೂರಕರ್ ಎಂಬ ಬಾಲಕನ ಕಾಲು ಮುರಿದಿದೆ. ತಕ್ಷಣವೇ ಅಡ್ವೆಂಚರ್ ಪಾರ್ಕ್
ಮಾಲೀಕರು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಮಕ್ಕಳನ್ನು ಬೆಳಗಾವಿಗೆ
ಕರೆತರಲಾಗಿದೆ. ಬೆಳಗಾವಿಯಲ್ಲಿ ಈ ಇಬ್ಬರೂ ಬಾಲಕರನ್ನು ಖಾಸಗಿ ಆಸ್ಪತ್ರೆಗೆ
ದಾಖಲಿಸಲಾಗಿದೆ.

ಇಲ್ಲಿಂದ ಮತ್ತೊಂದು ಸಮಸ್ಯೆ ಆರಂಭವಾಗಿದೆ. ಮಕ್ಕಳು ಹಲವು ದಿನಗಳ ಕಾಲ
ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಆದರೆ ಆಸ್ಪತ್ರೆಯ ಬಿಲ್ ಪಾವತಿಸುವವರು ಯಾರು ಎಂಬ ಸಮಸ್ಯೆ
ಉದ್ಭವವಾಗಿದೆ. ಅಡ್ವೆಂಚರ್ ಪಾಕ್ ್ ಮಾಲೀಕರು ಯಾರು ಎಂದು ಪೋಷಕರಿಗೆ
ಗೊತ್ತಿಲ್ಲ. ಅವರನ್ನು ಸಂಪರ್ಕಿಸುವುದೂ ಸಾಧ್ಯವಿಲ್ಲ. ಶಾಲಾ ಪ್ರಿನ್ಸಿಪಾಲರನ್ನು
ಕೇಳಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ನೀವು ಬಿಲ್ ಪಾವತಿಸಿ ನಂತರ
ನೋಡೋಣ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಪೋಷಕರು ಅಪಾದಿಸುತ್ತಾರೆ.
ಅಡ್ವೆಂಚರ್ ಪಾರ್ಕ್ ಮಾಲೀಕರೇ ಅಂತಿಮ ಬಿಲ್ ಪಾವತಿ ಮಾಡುತ್ತಾರೆ ಎಂದೂ
ಹೇಳುತ್ತಿದ್ದಾರೆ. ಇದರಿಂದ ಅವರಿಗೆ ಆತಂಕ ಶುರುವಾಗಿದೆ. ಒಂದು ಕಡೆ ಮಕ್ಕಳಿಗೆ
ಆದ ಅಪಾಯ ಮತ್ತೊಂದು ಕಡೆ ಬಿಲ್ ಪಾವತಿಸುವ ಸಮಸ್ಯೆ. ಈ ಶಾಲೆಯನ್ನು
ಪ್ರತಿಷ್ಠಿತ ಕೆಎಲ್ ಇ ಸಂಸ್ಥೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಈ ಅವಘಡವನ್ನು ಕುರಿತು ಶಿಕ್ಷಣ ಇಲಾಖೆಯ ಬಿಇಓ ಅವರಿಗೆ ಮಾಹಿತಿ ನೀಡಿಲ್ಲ ಎಂದೂ
ಹೇಳಲಾಗುತ್ತಿದೆ. ಇಂತಹ ಅಚಾತುರ್ಯಗಳು ನಡೆದಾಗ ಶಿಕ್ಷಣ ಇಲಾಖೆಯ
ಗಮನಕ್ಕೆ ತರುವುದು ಶಾಲಾ ಆಡಳಿತ ಮಂಡಳಿಯ ಕರ್ತವ್ಯ. ಆದರೆ ಈ
ಕೆಲಸವನ್ನು ಬೆಳಗಾವಿ ವರದಿ ದಿನಪತ್ರಿಕೆ ಮಾಡುತ್ತಿದೆ. ಕೂಡಲೇ ಶಿಕ್ಷಣ ಇಲಾಖೆ
ಸೂಕ್ತ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು
ನಡೆಯದ ಹಾಗೆ ಶಾಲೆಗಳು ಗಮನ ಹರಿಸಬೇಕು ಎನ್ನುವುದಷ್ಟೇ
ಪತ್ರಿಕೆಯ ಕಾಳಜಿ.