Belagavi News In Kannada | News Belgaum

ವಿವಿಧ ಜಯಂತಿಗಳ ಆಚರಣೆ: ಪೂರ್ವಭಾವಿ ಸಭೆ

ಸಿದ್ಧರಾಮೇಶ್ವರ ಜಯಂತಿ ಜ.16, ವೇಮನ ಜಯಂತಿ ಜ.19 ಹಾಗೂ ಅಂಬಿಗರ ಚೌಡಯ್ಯ ಜಯಂತಿ ಜ.28 ರಂದು ಆಚರಣೆ: ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ 

ಬೆಳಗಾವಿ, ಜ.06: ಸರ್ಕಾರದ ಮಾರ್ಗಸೂಚಿಯಂತೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಜನವರಿ 16, ಮಹಾಯೋಗಿ ವೇಮನ ಜಯಂತಿ ಜ.19 ರಂದು ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಜ.28 ರಂದು ಸಂಭ್ರಮದಿಂದ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಜ.06) ನಡೆದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ, ಮಾಹಾಯೋಗಿ ವೇಮನ ಜಯಂತಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜ. 16 ರಂದು ನಡೆಯಲಿರುವ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಕುಮಾರ್ ಗಂಧರ್ವ ರಂಗಮಂದಿರದಲ್ಲಿ ಆಚರಿಸಲಾಗುವುದು.
ಅದೇ ರೀತಿಯಲ್ಲಿ ಮಹಾಯೋಗಿ ವೇಮನ ಜಯಂತಿ ಮೆರವಣಿಗೆ ಕಾರ್ಯಕ್ರಮ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಿಂದ ಕುಮಾರ ಗಂಧರ್ವ ಕಲಾ ಮಂದಿರ ನಡೆಯಲಿದೆ.
ಈ ಸಂದರ್ಭದಲ್ಲಿ ವಿವಿಧ ಕಲಾ ತಂಡಗಳು ಮೆರವಣಗೆಯಲ್ಲಿ ಪಾಲ್ಗೊಳ್ಳಲಿವೆ. ನಂತರ ಕುಮಾರ್ ಗಂಧರ್ವ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.ಎಂದು ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ತಿಳಿಸಿದರು.
ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ:
ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ಈ ಬಾರಿ ಸಮಾಜದ ಮುಖಂಡರ ಮನವಿಯ ಮೇರೆಗೆ ಬೆಳಗಾವಿ ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ನಡೆಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಸಮಾಜದ ಮುಖಂಡರ ಮನವಿಯಂತೆ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಜ.28 ರಂದು ನಗರದ ಸರ್ದಾರ ಮೈದಾನದಲ್ಲಿ ಆಯೋಜನೆ ಮಾಡಲಾಗುವದು. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸರ್ದಾರ್ ಮೈದಾನದವರೆಗೂ ಮೆರವಣಿಗೆ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದು, ವೇದಿಕೆ ಸಿದ್ಧತೆ, ಸೂಕ್ತ ಪೊಲೀಸ್ ಬಂದೋಬಸ್ತ್, ಟ್ರಾಫಿಕ್ ಸುವ್ಯವಸ್ಥೆ ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಮೆರವಣಿಗೆ ಕಾರ್ಯಕ್ರಮದಲ್ಲಿ ಹೆಚ್ಚಿನ ಕಲಾತಂಡಗಳು ಭಾಗವಹಿಸಬೇಕು ಎಂದು ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಸಮಾಜದ ಮುಖಂಡರಾದ ದಿಲೀಪ್ ಕುರಂದವಾಡೆ ಅವರು ಮನವಿ ಮಾಡಿಕೊಂಡರು.
ಕುಡಿಯುವ ನೀರು, ಆಸನ ವ್ಯವಸ್ಥೆ ಸೇರಿದಂತೆ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಯಾವುದೇ ತೊಂದರೆ ಆಗಬಾರದು. ಸಂಬಂಧಿಸಿದ ಇಲಾಖೆಗಳು ಜಯಂತಿ ಆಚರಣೆಗೆ ಅಗತ್ಯವಿರುವ ಸಿದ್ಧತೆ ಪೂರ್ಣಗೊಳಿಸಿ ಸಹಕಾರ ನೀಡಬೇಕು ಎಂದು ಅವರು ಸಭೆಯಲ್ಲಿ ಕೋರಿದರು.
ಜಿಲ್ಲೆಯ ಎಲ್ಲ ಶಾಲಾ, ಕಾಲೇಜು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಣೆಗೆ ಸೂಚನೆ ನೀಡಬೇಕು ಎಂದು ದಿಲೀಪ್ ಕುರಂದವಾಡೆ ಅವರು ಮನವಿ ಮಾಡಿಕೊಂಡರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ಸಭೆಯನ್ನು ನಿರ್ವಹಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ್ ತಳವಾರ, ವಿವಿಧ ಸಮಾಜದ ಮುಖಂಡರಾದ ರಾಮಚಂದ್ರ ಸುಣಗಾರ, ಅಶೋಕ ಕೋಳಿ, ಅಪ್ಪಯ್ಯ ರಾಮರಾವ್, ಗೀತಾ ಕೋಳಿ, ಅಪ್ಪಾಸಾಹೇಬ ಪೂಜಾರಿ, ಮಂಜುನಾಥ ಪಾಟೀಲ, ಆರ್. ಬಿ ಬಂಡಿವಡ್ಡರ, ಎಸ್.ಬಿ ರೆಡ್ಡಿ, ಶಂಕರ ಹಾದಿಮನಿ, ರಾಜೇಂದ್ರ ಪಾಟೀಲ, ಟಿ.ಕೆ ಪಾಟೀಲ, ಎಸ್.ಎ ಅರಕೇರಿ, ಎಚ್ ವಿ ಪಾಟೀಲ ಸೇರಿದಂತೆ ಮತ್ತಿತರು ಸಭೆಯಲ್ಲಿ ಉಪಸ್ಥಿತರಿದ್ದರು.