Belagavi News In Kannada | News Belgaum

ಅರಣ್ಯ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪೋಷಿಸಲು ಹುಕ್ಕೇರಿ ಪ್ರಾದೇಶಿಕ ಅರಣ್ಯ ವಲಯವು ಹನಿ ಮತ್ತು ತುಂತುರು ನೀರಾವರಿ ಅಳವಡಿಸಿರುವುದು ರಾಜ್ಯದಲ್ಲಿಯೇ ಮಾದರಿ

ಹುಕ್ಕೇರಿ: ಅರಣ್ಯ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪೋಷಿಸಲು ಹುಕ್ಕೇರಿ ಪ್ರಾದೇಶಿಕ ಅರಣ್ಯ ವಲಯವು ಹನಿ ಮತ್ತು ತುಂತುರು ನೀರಾವರಿ ಅಳವಡಿಸಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

 

ಪಟ್ಟಣ ಹೊರವಲಯದ ಬೆಲ್ಲದ ಬಾಗೇವಾಡಿ-ಘಟಪ್ರಭಾ ಕ್ರಾಸ್‌ನ ನೂತನ ಲೇಔಟ್‌ನಲ್ಲಿ ಶನಿವಾರ ನಡೆದ ಹುಕ್ಕೇರಿ ಪ್ರಾದೇಶಿಕ ಅರಣ್ಯ ವಲಯ ಕಚೇರಿಯ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಳೆ ಮತ್ತು ನೀರಿನ ಕೊರತೆಗೆ ಉಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈ ರೀತಿಯ ಹೊಸ ಪ್ರಯೋಗ ನಡೆಸಿರುವುದು ಹೆಮ್ಮೆಯ ಸಂಗತಿ ಎಂದರು.

ಕೃಷಿ ಕ್ಷೇತ್ರದಲ್ಲಿ ಹನಿ, ತುಂತುರು ನೀರಾವರಿ ಅಳವಡಿಸುವುದು ಸಹಜ ಪ್ರಕ್ರಿಯೆ. ಆದರೆ, ಅರಣ್ಯ ಪ್ರದೇಶದಲ್ಲಿ ಇಂಥ ಯೋಜನೆ ಅನುಷ್ಠಾನಕ್ಕೆ ತರುವುದು ಸುಲಭದ ಕೆಲಸವಲ್ಲ. ಈ ಕಠಿಣ ಕಾರ್ಯವನ್ನು ಹುಕ್ಕೇರಿ ಪ್ರಾದೇಶಿಕ ಅರಣ್ಯ ಇಲಾಖೆ ನಡೆಸುವುದು ಮೂಲಕ ಇತರೆ ಇಲಾಖೆಗಳನ್ನು ಹುಬ್ಬೇರಿಸುವಂತೆ ಮಾಡಿದೆ. ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಸಸಿಗಳನ್ನು ಬೆಳೆಸುವಲ್ಲಿ ಪ್ರಾಯೋಗಿಕವಾಗಿ ಹೊಸ ಹೊಸ ಪ್ರಯೋಗಗಳನ್ನು ನಡೆಸುವಂತಾಗಬೇಕು ಎಂದು ಅವರು ಹೇಳಿದರು. 

ಲೋಕೋಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿ, ಈ ಸುಸಜ್ಜಿತ ಕಟ್ಟಡ ಹುಕ್ಕೇರಿ ತಾಲೂಕಿನ ಹೆಮ್ಮೆ. ರೈತರ ಸಮಸ್ಯೆ ಮತ್ತು ಅಹವಾಲುಗಳಿಗೆ ತ್ವರಿತ ಪರಿಹಾರ ಸಿಗಲಿದೆ. ಸುಗಮ ಆಡಳಿತ ನಡೆಸುವ ಮೂಲಕ ಅಧಿಕಾರಿ-ಸಿಬ್ಬಂದಿ ಅರಣ್ಯ ಪ್ರದೇಶ ಸಂರಕ್ಷಿಸಿ ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಶಾಸಕ ನಿಖಿಲ್ ಕತ್ತಿ ಮಾತನಾಡಿ, ಅತ್ಯಂತ ಸೊಗಸಾದ ಪರಿಸರದಲ್ಲಿ ಹಳ್ಳಿಯ ಮನೆ ರೀತಿಯಲ್ಲೇ ಕಚೇರಿ ನಿರ್ಮಾಣವಾಗಿದೆ. ಇದರಿಂದ ಈ ಭಾಗದ ಸಾರ್ವಜನಿಕರ ಬಹುವರ್ಷದ ಬೇಡಿಕೆ ಈಡೇರಿದಂತಾಗಿದೆ. ತಾಲೂಕಿನ ಸಮಸ್ತ ರೈತರು ಪ್ರಯೋಜನ ಪಡೆದುಕೊಳ್ಳಬೇಕು.

ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ಪ್ರಸನ್ ಬೆಲ್ಲದ, ಗುತ್ತಿಗೆದಾರ ಬಸವರಾಜ ಪರವೀನಾಯ್ಕರ, ಲೋಕೋಪಯೋಗಿ ಎಇಇ ಪ್ರವೀಣ ಮಾಡ್ಯಾಳ, ಅಭಿಯಂತರರಾದ ಪ್ರಭಾಕರ ಕಾಮತ್, ಜಯಂತ ಗುಂಜಟಕರ ಪಾಟೀಲ, ಸಿಪಿಐ ಮಹಾಂತೇಶ ಬಸ್ಸಾಪುರ, ಮುಖಂಡರಾದ ಅಶೋಕ ಪಟ್ಟಣಶೆಟ್ಟಿ, ಸತ್ಯಪ್ಪಾ ನಾಯಿಕ, ಎ.ಕೆ.ಪಾಟೀಲ, ಆನಂದ ಗಂಧ, ಕಿರಣ ರಜಪೂತ, ರಿಷಭ್ ಪಾಟೀಲ, ರವೀಂದ್ರ ಜಿಂಡ್ರಾಳಿ, ಇಲಿಯಾಸ ಇನಾಮದಾರ, ವಾಗ್ದೇವಿ ತಾರಳಿ, ಗುರು ಕುಲಕರ್ಣಿ, ರಾಜು ಕುರಂದವಾಡೆ, ಮೌನೇಶ ಪೋತದಾರ, ರಾಜು ಸಿದ್ನಾಳ, ಮಹಾಂತೇಶ ತಳವಾರ, ಮಧುಕರ ಕರನಿಂಗ ಮತ್ತಿತರರು ಉಪಸ್ಥಿತರಿದ್ದರು.