Belagavi News In Kannada | News Belgaum

ಮಾತೃ ಭಾಷೆಯನ್ನು ಪ್ರೀತಿಸಿ, ಅನ್ಯಭಾಷೆಗಳನ್ನು ಗೌರವಿಸುವ ಔದಾರ್ಯತೆ ಕನ್ನಡಿಗರದ್ದು – ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಕಾರದಗಾ (ನಿಪ್ಪಾಣಿ) : ಮಾತೃ ಭಾಷೆಯನ್ನು ಪ್ರೀತಿಸಿ, ಅನ್ಯ ಭಾಷೆಗಳನ್ನು ಗೌರವಿಸುವುದು ಕನ್ನಡಿಗರ ಔದಾರ್ಯವಾಗಿದೆ. ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಭಾನುವಾರ 6ನೇ ಕನ್ನಡ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರದಗಾದಲ್ಲಿ ಕನ್ನಡಿಗರು ಮತ್ತು ಮರಾಠಿ ಭಾಷಿಕರು ಅನ್ಯೋನ್ಯವಾಗಿದ್ದಾರೆ. ಇದು ಮುಂದುವರಿಯಬೇಕು. ನಮ್ಮ ಭಾಷೆ, ಕಲೆ, ಸಂಸ್ಕೃತಿಯನ್ನು ಬೆಳಸುವ ಜೊತೆಗೆ ಅನ್ಯರನ್ನೂ ಗೌರವಿಸಿವುದು ನಮ್ಮ ದೊಡ್ಡತನ ಎಂದು ಅವರು ಹೇಳಿದರು.
ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. 8 ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದೆ. ಕನ್ನಡಿಗರು, ಭಾರತೀಯರು ವಿವಿಧತೆಯಲ್ಲಿ ಏಕತೆನ್ನು ಕಂಡವರು. ಅದರಿಂದಾಗಿಯೇ ಭಾರತ ಇಂದು ವಿಶ್ವ ಗುರುವಾಗಿ ಮುನ್ನಡೆಯುತ್ತಿದೆ. ಕರ್ನಾಟಕ ರಾಜ್ಯ ನಾಮಕರಣದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಇಂತಹ ಸಮಾವೇಶದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ಅತ್ಯಂತ ಅದ್ದೂರಿಯಾಗಿ ಇಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ. ಮುಂದಿನ ವರ್ಷದಿಂದ ರಾಜ್ಯ ಸರಕಾರದಿಂದ ಈ ಸಮಾವೇಶಕ್ಕೆ ನೆರವನ್ನು ಕೊಡಿಸುವ ಜೊತೆಗೆ ಇಲ್ಲಿಯ ಸಂಘಟನೆಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
 ಸಮಾವೇಶದಲ್ಲಿ ಚಿಕ್ಕೊಡಿಯ ಚರಮೂರ್ತಿಮಠದ ಶ್ರೀ ಸಂಪಾದನಾ ಮಹಾಸ್ವಾಮಿಗಳು, ಡೋಣೆವಾಡಿಯ ಆತ್ಮಾಮಾಲಿಕಧ್ಯಾನ ಪೀಠದ ಶ್ರೀ ಸಾಧನಾನಂದ ಮಹಾರಾಜರು, ಸಮಾವೇಶದ ಸರ್ವಾಧ್ಯಕ್ಷರಾದ ಡಾ.ಸರಜೂ ಕಾಟ್ಕರ್, ಮಾಜಿ ಶಾಸಕ ಸುಭಾಷ್ ಜೋಶಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ, ಪಂಕಜ್ ಪಾಟೀಲ, ಅಣ್ಣಾಸಾಹೇಬ್ ಹವಲೆ, ಸುಪ್ರಿಯಾ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.