Belagavi News In Kannada | News Belgaum

ಮಹಾನಗರ ಪಾಲಿಕೆ: ನಗರ ಬಡತನ ನಿರ್ಮೂಲನಾ ಕೋಶ: ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ

ಬೆಳಗಾವಿ: ಜ 08: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ನಗರ ಬಡತನ ನಿರ್ಮೂಲನಾ ಕೋಶದ ಮಹಾನಗರ ಪಾಲಿಕೆ ಅನುದಾನದ ಶೇ.24.10, ಶೇ.7.25 ಹಾಗೂ ಶೇ.5ರ ಯೋಜನೆ ಹಾಗೂ ಎಸ್.ಎಫ್.ಸಿ ಅನುದಾನದ ಶೇ.24.10ರ ಯೋಜನೆಯಡಿಯಲ್ಲಿ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಆಸಕ್ತಿಯುಳ್ಳ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸಣ್ಣ ಉದ್ದಿಮೆದಾರರಿಗೆ ಸಹಾಯಧನ, ಶಸ್ತ್ರ ಚಿಕಿತ್ಸೆಗೆ ಸಹಾಯಧನ, ಎಮ್.ಬಿ.ಬಿ.ಎಸ್/ಬಿ.ಇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಖರೀದಿಗಾಗಿ, ರಾಜ್ಯ/ರಾಷ್ಟ್ರೀಯ ಮಟ್ಟದ ಕ್ರೀಡೆ/ಕಲೆ/ಸಾಂಸ್ಕøತಿಕ ಹಾಗೂ ಇತರೇ ವ್ಯಾಸಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಹೊಲಿಗೆ ಯಂತ್ರ, ಯಂತ್ರ ಚಾಲಿತ ತ್ರಿಚಕ್ರ ವಾಹನ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಯೋಜನೆಗಳಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆ ಹಾಗೂ ಆದ್ಯತೆಯ ಮೇರೆಗೆ ಲಭ್ಯವಿದ್ದ ಅನುದಾನಕ್ಕನುಗುಣವಾಗಿ ಅವಶ್ಯಕವಿದ್ದಲ್ಲಿ ಸ್ಥಳ ಪರಿಶೀಲನೆಯೊಂದಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಹಾಯಧನವನ್ನು ಫಲಾನುಭವಿಗಳಿಗೆ/ಸಾಲ ನೀಡಿದ ಬ್ಯಾಂಕುಗಳಿಗೆ ನೇರವಾಗಿ ಚೆಕ್ಕುಗಳನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ನಗರ ಬಡತನ ನಿರ್ಮೂಲನಾ ಕೋಶದ ಅಧಿಕಾರಿಗಳು/ಸಿಬ್ಬಂದಿಗಳಿಗೆ ಸಂಪರ್ಕಿಸಲು ವಿನಂತಿಸಲಾಗಿದೆ ಹಾಗೂ ಸದರಿ ಮಾಹಿತಿಯು ಬೆಳಗಾವಿ ಮಹಾನಗರ ಪಾಲಿಕೆಯ ವೆಬ್ ಸೈಟಿನಲ್ಲಿ www.belagavicity.mrc.gov.in ನಲ್ಲಿ ಲಭ್ಯವಿರುತ್ತದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.