Belagavi News In Kannada | News Belgaum

ವಿಜಯಪುರ ಮಹಾನಗರ ಪಾಲಿಕೆ ಅಧಿಕಾರ ಕೈ ವಶ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್‌ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಎರಡೂ ಸ್ಥಾನಗಳು ಕಾಂಗ್ರೆಸ್‌ ಪಾಲಾಗಿದೆ.

ನೂತನ ಮೇಯರ್‌ ಆಗಿ ಕಾಂಗ್ರೆಸ್‌ನ ಮಾಹೆಜಬೀನ್‌ ಹೊರ್ತಿ, ಉಪ ಮೇಯರ್‌ ಆಗಿ ದಿನೇಶ್‌ ಹಳ್ಳಿ ಆಯ್ಕೆಯಾದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮಹಾಪೌರ ಸ್ಥಾನಕ್ಕೆ 34ನೇ ವಾರ್ಡಿನ ಸದಸ್ಯೆ ಮಾಹೆಜಬೀನ್‌ ಹೊರ್ತಿ ಹಾಗೂ ಬಿಜೆಪಿಯಿಂದ 12ನೇ ವಾರ್ಡಿನ ಸದಸ್ಯ ರಶ್ಮಿ ಕೋರಿ ನಾಮಪತ್ರ ಸಲ್ಲಿಸಿದ್ದರು.

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಉಪ ಮಹಾಪೌರ ಸ್ಥಾನಕ್ಕೆ 18ನೇ ವಾರ್ಡಿನ ಸದಸ್ಯ ದಿನೇಶ್‌ ಹಳ್ಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.

35 ಸದಸ್ಯರಿರುವ ಮಹಾನಗರ ಪಾಲಿಕೆಗೆ 2022ರ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್‌ 10, ಎಎಂಐಎಂ 2, ಜೆಡಿಎಸ್‌ 1 ಹಾಗೂ ಪಕ್ಷೇತರರು 5 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಯಾವೊಂದು ಪಕ್ಷಕ್ಕೂ ನಿಶ್ಚಳ ಬಹುಮತ ಇಲ್ಲದೇ ಪಾಲಿಕೆ ಅತಂತ್ರವಾಗಿತ್ತು. ಬಳಿಕ ಮೇಯರ್‌, ಉಪಮೇಯರ್‌ ಸ್ಥಾನದ ಮೀಸಲಾತಿ ಪ್ರಶ್ನಿಸಿ ಕೆಲ ಸದಸ್ಯರು ಹೈಕೋರ್ಟ್‌ ಮೇಟ್ಟಿಲೇರಿದ್ದ ಕಾರಣ 14 ತಿಂಗಳಿಂದ ಚುನಾವಣೆ ನಡೆದಿರಲಿಲ್ಲ.

ಎಸ್‌ಟಿಗೆ ಮೀಸಲಾಗಿದ್ದ ಉಪಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ ಸದಸ್ಯ ದಿನೇಶ್‌ ಹಳ್ಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಪಾಲಿಕೆ ಅಧಿಕಾರ ಕಾಂಗ್ರೆಸ್‌ ಪಾಲಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲ್‌ ಎರಚಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಠಲ ಕಟಕಧೋಂಡ, ವಿಧಾನ ಪರಿಷತ್‌ ಸದಸ್ಯರಾದ ಸುನೀಲ್‌ಗೌಡ ಪಾಟೀಲ, ಪ್ರಕಾಶ ರಾಠೋಡ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.