Belagavi News In Kannada | News Belgaum

ಅನ್ನಭಾಗ್ಯ ಪಡಿತರ ಅಕ್ಕಿ ಮಾರಾಟಕ್ಕೆ ಯತ್ನ: ದೂರು ದಾಖಲು ಇಬ್ಬರ ಬಂಧನ

ಹುಕ್ಕೇರಿ : ಪಟ್ಟಣ ಹೊರವಲಯದ ತೋಟದ ಮನೆಯೊಂದರ ಮೇಲೆ ಆಹಾರ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಸಾಗಿಸುತ್ತಿದ್ದ ೨೧೦ ಕ್ವೀಂಟಲ್ ಅನ್ನಭಾಗ್ಯ ಪಡಿತರ ಅಕ್ಕಿ ವಶಪಡಿಸಿಕೊಂಡು ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

ರಾಯಬಾಗ ತಾಲೂಕು ನಿಪನಾಳ ಗ್ರಾಮದ ಲಾರಿ ಚಾಲಕ ಸಂತೋಷ ಶಿವಾಜಿ ಕುರಣಿ (26) ಹಾಗೂ ಹುಕ್ಕೇರಿ ಪಟ್ಟಣದ ರವಿ ಶಿವಾನಂದ ಗಜಬರ ಎಂಬುವವರ ಮೇಲೆ ದೂರು ದಾಖಲಾಗಿದೆ. ಪ್ರಕರಣ ಮುಂದುವರೆದಿದೆ

ಖಚಿತ ಮಾಹಿತಿ ಮೇರೆಗೆ ಹುಕ್ಕೇರಿ ಪಟ್ಟಣ ಹೊರವಲಯದ ಬಸ್ತವಾಡ ರಸ್ತೆ ಬಳಿಯ ತೋಟದ ಮನೆಯೊಂದರ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದರು. ದಾಳಿ ವೇಳೆ ಅಕ್ರಮವಾಗಿ ದಾಸ್ತಾನು ಮಾಡಿದ್ದ 7.14 ಲಕ್ಷ ಮೌಲ್ಯದ 420 ಚೀಲಗಳುಳ್ಳ 210 ಕ್ವೀಂಟಲ್ ಪಡಿತರ ಅಕ್ಕಿ ಹಾಗೂ 15 ಲಕ್ಷ ಬೆಲೆಬಾಳುವ ಲಾರಿ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ನಂ. 2 ರವಿ ಗಜಬರ ಈತ  ಪ್ಲ್ಯಾಸ್ಟಿಕ್ ಚೀಲಗಳಲ್ಲಿ ತುಂಬಿದ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ಲಾರಿಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ಮಾಲು ಸಮೇತ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಹಾರ ನಿರೀಕ್ಷಕ ವೀರಭದ್ರ ಶೇಬನ್ನವರ ಅವರು ಆರೋಪಿಗಳ ಮೇಲೆ ಕರ್ನಾಟಕ ಅಗತ್ಯ ವಸ್ತುಗಳ ಕಾಯಿದೆ 1955ರ ಕಲಂ 3 ಮತ್ತು 7ನೇ ಅಡಿಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ