Belagavi News In Kannada | News Belgaum

ಜಿಲ್ಲೆಯಾದ್ಯಂತ ವೀರ ಜ್ಯೋತಿ ಸಂಚಾರ: ಯಾತ್ರೆಗೆ ಜ.12 ರಂದು ಚಾಲನೆ

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಉತ್ಸವ-2024

 

ಬೆಳಗಾವಿ, ಜ.11 : ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸ್ಮರಣಾರ್ಥವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಜನವರಿ 17 ಹಾಗೂ 18 ರಂದು ಸಂಗೊಳ್ಳಿಯಲ್ಲಿ ಅದ್ದೂರಿಯಾಗಿ ಉತ್ಸವವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ಸ್ಥಳ ಖಾನಾಪೂರ ತಾಲೂಕಿನ ನಂದಗಡದಿಂದ ಜನವರಿ 12 ರಂದು ಬೆಳಿಗ್ಗೆ 9 ಗಂಟೆಗೆ ವೀರ ಜ್ಯೋತಿ ಯಾತ್ರೆಯನ್ನು ಬೀಳ್ಕೊಡಲಾಗುವುದು.

ಜ್ಯೋತಿ ಯಾತ್ರೆ ಬೀಳ್ಕೊಡುಗೆ ಸಮಾರಂಭದಲ್ಲಿ ಸ್ಥಳೀಯ ಶಾಸಕರು, ಪ್ರತಿನಿಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.
ಬೆಳಗಾವಿ ಜಿಲ್ಲೆಯಾದ್ಯಂತ ಜ್ಯೋತಿ ಸಂಚರಿಸಿ ಜನವರಿ 17 ರಂದು ಬೆಳಿಗ್ಗೆ 10 ಗಂಟೆಗೆ ಸಂಗೊಳ್ಳಿಗೆ ಆಗಮಿಸಲಿದೆ.

ವೀರ ಜ್ಯೋತಿ ಯಾತ್ರೆ ಕಾರ್ಯಕ್ರಮದ ವೇಳಾ ಪಟ್ಟಿ:

ಜನವರಿ 12 ರಂದು ನಂದಗಡದಿಂದ ಪ್ರಾರಂಭವಾಗಲಿರುವ ವೀರ ಜ್ಯೋತಿ ಯಾತ್ರೆ, ಬೆಳಗಾವಿ, ಕಾಕತಿ, ಹುಕ್ಕೇರಿ ಸಂಕೇಶ್ವರ ಮೂಲಕ ನಿಪ್ಪಾಣಿಗೆ ತಲುಪಿ, ವಾಸ್ತವ್ಯ ಮಾಡಲಿದೆ. ಜ.13 ರಂದು ನಿಪ್ಪಾಣಿಯಿಂದ ಜ್ಯೋತಿಯನ್ನು ಬಿಳ್ಕೊಡಲಾಗುವುದು ಬಳಿಕ ಚಿಕ್ಕೋಡಿ, ಕಾಗವಾಡ ಮೂಲಕ ಅಥಣಿಗೆ ಬಂದು, ವಾಸ್ತವ್ಯ ಮಾಡಲಿದೆ.

ಅದೇ ರೀತಿಯಲ್ಲಿ ಜ.14 ರಂದು ಅಥಣಿಯಿಂದ ರಾಯಬಾಗ, ಕಂಕಣವಾಡಿ, ಗುರ್ಲಾಪೂರ ಕ್ರಾಸ್ ಮಾರ್ಗವಾಗಿ ಮೂಡಲಗಿ ತಲುಪಿ, ಬಳಿಕ ಗೋಕಾಕ್, ಅಡಿಬಟ್ಟಿ-ಮೆಳವಂಕಿ- ಕೌಜಲಗಿ ಮೂಲಕ ಚಂದರಗಿ ತಲುಪಲಿದೆ.

ಚಂದರಗಿ ವಾಸ್ತವ್ಯದ ಬಳಿಕ ಜ.15 ರಂದು ಚಂದರಗಿಯಿಂದ ಯರಗಟ್ಟಿ, ಕಟಕೋಳ ಮಾರ್ಗವಾಗಿ ರಾಮದುರ್ಗ, ಸವದತ್ತಿ ಸಂಚರಿಸಿ ಬೈಲಹೊಂಗಲದಲ್ಲಿ ವಾಸ್ತವ್ಯವಾಗಲಿದೆ.

ಜ.16 ರಂದು ಬೈಲಹೊಂಗಲದಿಂದ ಜ್ಯೋತಿ ಸಂಚರಿಸಿ ಯರಡಾಲ, ನೇಗಿನಹಾಳ, ಹೊಳಿಹೊಸೂರ, ಎಂ.ಕೆ ಹುಬ್ಬಳ್ಳಿ, ದಾಸ್ತಿಕೊಪ್ಪ ಮಾರ್ಗವಾಗಿ ಇಟಗಿ ಕ್ರಾಸ್ ಮೂಲಕ ಕಿತ್ತೂರಿಗೆ ಆಗಮಿಸಲಿದೆ. ಬಳಿಕ ಮಲ್ಲಾಪುರ, ಚಿಕ್ಕನಂದಿಹಳ್ಳಿ ಮೂಲಕ ಸಂಗೊಳ್ಳಿ ಸೈನಿಕ ಶಾಲೆಗೆ ಆಗಮಿಸಿ ವಾಸ್ತವ್ಯ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.