Belagavi News In Kannada | News Belgaum

ಬೆಂಗಳೂರಿನಲ್ಲಿ ಬೋಯಿಂಗ್ ಸುಕನ್ಯಾ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಬೆಂಗಳೂರು: ದೇವನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಬೋಯಿಂಗ್ ನ ಹೊಸ ಅತ್ಯಾಧುನಿಕ ಜಾಗತಿಕ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಆವಿಷ್ಕಾರ ಕ್ಯಾಂಪಸ್ ನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಬಳಿಕ ‘ಬೋಯಿಂಗ್ ಸುಕನ್ಯಾ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಬೋಯಿಂಗ್ ಸುಕನ್ಯಾ ಯೋಜನೆ ರಾಷ್ಟ್ರದಲ್ಲಿ ಬೆಳೆಯುತ್ತಿರುವ ವಿಮಾನಯಾನ ಕ್ಷೇತ್ರಕ್ಕೆಹೆಣ್ಣು ಮಕ್ಕಳು ಪ್ರವೇಶಿಸಲು ಉತ್ತೇಜನ ನೀಡುವ ಯೋಜನೆಯಾಗಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಅತ್ಯಂತ ಕಠಿಣವಾದ ವಿದ್ಯೆಯನ್ನು ಹೆಣ್ಮಕ್ಕಳು ಮತ್ತು ಮಹಿಳೆಯರಿಗೆ ಇಲ್ಲಿ ಅವಕಾಶ ಸಿಗಲಿದೆ. ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ, ಇದು ಹೆಣ್ಣು ಮಕ್ಕಳಿಗೆ ವಾಯುಯಾನ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿಯನ್ನು ಪಡೆಯಲು ವಿಫುಲ ಅವಕಾಶಗಳನ್ನು ಒದಗಿಸುತ್ತದೆ.

ಯುವತಿಯರನ್ನು ವಿಮಾನ ಯಾನ ಕ್ಷೇತ್ರದ ಹಲವು ಉದ್ಯೋಗಗಳಿಗೆ ಸಿದ್ಧಪಡಿಸುವ ಕೆಲಸ ಈ ಯೋಜನೆಯ ಮೂಲಕ ನಡೆಯಲಿದೆ. ಈ ಯೋಜನೆಯ ಅಡಿಯಲ್ಲಿ ಪೈಲಟ್ ಗಳಾಗಲು ತರಬೇತಿ ಪಡೆಯುವ ಮಹಿಳೆಯರಿಗೆ ವಿದ್ಯಾರ್ಥಿ ವೇತನ ಕೂಡಾಸಿಗಲಿದೆ.

ಬಾಲಕಿಯರಿಗಾಗಿ ಬೋಯಿಂಗ್ ಸುಕನ್ಯಾ ಯೋಜನೆ 150 ಸ್ಥಳಗಳಲ್ಲಿ ಎಸ್ಟಿಇಎಂ ಪ್ರಯೋಗಾಲಯಗಳನ್ನು ತೆರೆಯಲಿದ್ದು, ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಉತ್ತೇಜನ ನೀಡಲಿವೆ. ಬೋಯಿಂಗ್ ಭಾರತೀಯ ಮಿಲಿಟರಿಯೊಡನೆ ಕೈ ಜೋಡಿಸಿ, ರಕ್ಷಣಾ ವಲಯದಲ್ಲಿ ಹೆಚ್ಚುತ್ತಿರುವ ವಿಮಾನದ ಬೇಡಿಕೆಯನ್ನು ಪೂರೈಸಲು ಮತ್ತು ‘ಆತ್ಮನಿರ್ಭರ ಭಾರತ’ ಯೋಜನೆಯನ್ನು ಬೆಂಬಲಿಸಲು ಯೋಜಿಸುತ್ತಿದೆ.