Belagavi News In Kannada | News Belgaum

ಕೆಂಭಾವಿ ರಾಮಲಿಂಗೇಶ್ವರ ಬೆಟ್ಟ ಅಭಿವೃದ್ಧಿಯಾಗಲಿ

ವೀರಣ್ಣ ಕಲಕೇರಿ ಕೆಂಭಾವಿ: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದಲ್ಲಿನ ಹಲವು ಪ್ರದೇಶಗಳು ಕೂಡ ಶ್ರೀರಾಮಚಂದ್ರನಿಗೆ ನಂಟುಕಟ್ಟಿಕೊಂಡಿವೆ ಎಂಬುವುದು ಆಯಾ ಪ್ರದೇಶದಲ್ಲಿನ  ಕುರಹಗಳು ಮತ್ತು ಪೌರಣಿಕ ಕಥೆಗಳಿಂದ ತಿಳಿದು ಬರುತ್ತದೆ‌. ಆ ಹಿನ್ನೆಲೆಯಲ್ಲಿ ಕೆಂಭಾವಿ ಪಟ್ಟಣದ ಸೀಮಾಂತರ ಪ್ರದೇಶದಲ್ಲಿರುವ ರಾಮಲಿಂಗೇಶ್ವರ ಬೆಟ್ಟ ಸಹ ಒಂದಾಗಿದೆ.
ಶ್ರೀರಾಮನು ವನವಾಸ ಸಂದರ್ಭದಲ್ಲಿ ಅರಣ್ಯವಾಸಿಯಾಗಿ  ತಾನು ತಣಿದ ಕೆಲವು ಸ್ಥಳಗಳಲ್ಲಿ ಶಿವನ ಆರಾಧನೆಗಾಗಿ ತಾನೆ ಲಿಂಗ ಸ್ಥಾಪನೆ ಮಾಡುತ್ತಾನೆ, ಅಂತಹ ಸ್ಥಳಗಳು ರಾಮಲಿಂಗ, ರಾಮಲಿಂಗೇಶ್ವರ ಎಂದು ಕರೆಯಲಾಗುತ್ತಿದೆ ಎಂಬ ಪ್ರತೀತಿ, ಪೌರಾಣಿಕ ಹಾಗೂ ಜನಪದ ವಾಣಿಗಳಿಂದ ತಿಳಿದು ಬರುವಂತೆ, ಕೆಂಭಾವಿ ಸೀಮಾಂತರಲ್ಲಿ ಕೆಂಭಾವಿ, ಕಿರದಳ್ಳಿ, ನಗನೂರ ಹಾಗೂ ಪರಸನಹಳ್ಳಿ ನಾಲ್ಕು ಸೀಮೆಗಳು ಸಂಧಿಸುವ ಸ್ಥಳವಾದ ಬೆಟ್ಟಗಳ ಸಾಲಿನ ಮಧ್ಯ ಇರುವ ಈ ಕ್ಷೇತ್ರ ಪೌರಾಣಿಕ ಕಥೆ ಜನಪದ ವಾಣಿಗೆ ಪುಷ್ಠಿ ನಿಡುವಂತಿದೆ.
ಪೌರಾಣಿಕ ಹಾಗೂ ಜನಪದ ಹಿನ್ನೆಲೆ ಏನೇ ಇದ್ದರೂ ರಾಮಲಿಂಗನ ಈ ಬೆಟ್ಟ ಭಾವದೋಳು ಭಕ್ತಿ ಬೆರೆಯುವ  ನಿಸರ್ಗ ಪ್ರಿಯರ ತಾಣ ಈ ಪ್ರದೇಶ. ಪಟ್ಟಣದಿಂದ ಕೂಗಳತೆಯಲ್ಲಿರುವ  ಶ್ರೀರಾಮಲಿಂಗೇಶ್ವರ ಈ ಬೆಟ್ಟ,  ನಿಸರ್ಗದ ಮಡಿಲಲ್ಲಿ ನೆಲೆನಿಂತ ನಿಸರ್ಗ ನಿರ್ಮಿತ ಸುಂದರ ಪ್ರೇಕ್ಷಣೀಯ ಸ್ಥಳವಾಗಿದೆ. ಇಲ್ಲಿನ ವಾತಾವರಣ ನಿಜಕ್ಕೂ ಅಹ್ಲಾದಕರ. ಇಲ್ಲಿ ಪ್ರಶಾಂತತೆಯ ಅನುಭವದ ಮಧ್ಯೆ ಹಕ್ಕಿಗಳ ಕಲರವ, ದುಂಬಿಗಳ ಝೇಂಕಾರ, ನೀರಿನ ಜುಳು ಜುಳು ನಾದ ಇವೆಲ್ಲವೂ ಬಾಹ್ಯ ಸೌಂದರ್ಯದಂತೆ, ಭಕ್ತಿ ಬೆರೆಸಿ ಅಂತರ್ ಸೌಂದರ್ಯದ ಅನುಭಾವ ತನ್ನಿಂದ ತಾನೇ ಭಾಸವಾಗುವುದಂತೂ ಸತ್ಯ.
ಇಲ್ಲಿ ಬೃಹತ್ ಬಂಡೆಗಳಿಂದ ನಿರ್ಮಾಣವಾದ ಸರಕಿನಲ್ಲಿ ರಾಮಲಿಂಗನ ಲಿಂಗ ಸ್ಥಾಪಿಸಲಾಗಿದ್ದು, ಬಂಡೆಗಲ್ಲಿಗೆ ಹೊಂದಿಕೊಂಡಂತೆ ಗೋಡೆ ಕಟ್ಟಿ ಗರ್ಭಗುಡಿ ನಿರ್ಮಿಸಲಾಗಿದೆ. ಈ ಕ್ಷೇತ್ರ ಹಲವು ಗ್ರಾಮಗಳ ಸಾಕಷ್ಟು ದೈವ ಭಕ್ತರ  ಸಮೂಹವನ್ನು  ಹೊಂದಿದ್ದು ಆಗಾಗ  ಪೂಜೆ ಪ್ರಾರ್ಥನೆ ಬಹುಕಾಲದಿಂದ ಬಂದ ಸಂಪ್ರದಾಯ. ಈ ಪ್ರದೇಶಕ್ಕೆ ತಲುಪಲು ಕೆಂಭಾವಿ ಸುರಪುರ ರಾಜ್ಯ ಹೆದ್ದಾರಿಯಿಂದ ಮೂರ್ನಾಲ್ಕು ಕಿ.ಮಿ ವರೆಗೆ ಬೆಟ್ಟದ ಹಾದಿಯಲ್ಲಿ ಬೈಕ್ ಇಲ್ಲವೆ ಕಾಲ್ನಡಿಗೆ ಅನಿವಾರ್ಯವಾಗಿದೆ.
ರಾಮಲಿಂಗ ಬೆಟ್ಟಕ್ಕೆ ಬೇಕಿದೆ ಕಾಯಕಲ್ಪ:
ಇತಂಹ ಇತಿಹಾಸಯುಳ್ಳ ರಾಮಲಿಂಗ ಬೆಟ್ಟ ನಿರ್ಲಕ್ಷಕ್ಕೆ ಒಳಗಾಗಿ, ಅಭಿವೃದ್ಧಿ ಶೂನ್ಯವಾಗಿದೆ ಎನ್ನುವ ಮಾತಿದ್ದು, ಈ ನಿಟ್ಟಿನಲ್ಲಿ ಇದಕ್ಕೆ ಕಾಯಕಲ್ಪ ಕಲ್ಪಿಸುವುದು ಅಗತ್ಯವಾಗಿದೆ. ದೇವಸ್ಥಾನದ ಸಮಗ್ರ ಅಭಿವೃದ್ಧಿಯೊಂದಿಗೆ ಮೂಲಭೂತ ಸೌಕರ್ಯಗಳು ಒದಗಿಸಬೇಕಾಗಿದೆ. ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಲಿ ಎನ್ನುವುದು ಭಕ್ತಾಧಿಗಳು ಒತ್ತಾಸೆಯಾಗಿದೆ.