Belagavi News In Kannada | News Belgaum

ಮತದಾನ ದೇಶದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಆರ್.ಸಿ.ಯು ಕುಲಪತಿ ಪ್ರೊ. ವಿಜಯ ನಾಗಣ್ಣವರ

14ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2024

 

ಬೆಳಗಾವಿ, ಜ.22: ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಮತದಾನ ಅತೀ ಮುಖ್ಯವಾಗಿದೆ. ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ವಿಜಯ ನಾಗಣ್ಣವರ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ (ಜ.25) ನಡೆದ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2024ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನ್ಮದಿನ ಪ್ರತಿವರ್ಷ ಬರುತ್ತದೆ ಆದರೆ ಚುನಾವಣೆ ಐದು ವರ್ಷಕ್ಕೊಮ್ಮೆ ಬರುತ್ತದೆ. ಪ್ರತಿಯೊಂದು ಮತವು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಯತ್ನದ ಫಲವಾಗಿ ಪ್ರತಿಯೊಬ್ಬ ಭಾರತೀಯನಿಗೂ ಮತದಾನದ ಹಕ್ಕು ಲಭಿಸಿದೆ. ಅತ್ಯುತ್ತಮ ಆಡಳಿತಗಾರರನ್ನು ಆಯ್ಕೆ ಮಾಡುವ ಶಕ್ತಿ ಮತದಾನಕ್ಕಿದೆ ಎಂದು ಹೇಳಿದರು.

ಕೆಲ ದೇಶಗಳಲ್ಲಿ ಬಡವರು ಅಥವಾ ಮಹಿಳೆಯರಿಗೆ ಮತದಾನದ ಹಕ್ಕು ಇಲ್ಲ. ಆದರೆ ಅಂಬೇಡ್ಕರ್ ಅವರು ಪ್ರತಿಯೊಬ್ಬ ಭಾರತೀಯನಿಗೆ ಮತದಾನದ ಹಕ್ಕು ಒದಗಿಸಿರುವುದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ವಿಶ್ವದಲ್ಲೇ ಭಾರತ ವಿವಿಧ ಕಲೆ, ಸಂಸ್ಕೃತಿ ಅನೇಕ ಇತಿಹಾಸ ಹೊಂದಿರುವ ವಿಭಿನ್ನ ರಾಷ್ಟ್ರವಾಗಿದೆ. ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಯುವಕರಿಗೆ ಉತ್ತಮ ಆಡಳಿತವನ್ನು ಆಯ್ಕೆ ಮಾಡುವ ಅಧಿಕಾರ ಸಿಕ್ಕಿದೆ ಎಂದು ಪ್ರೊ. ವಿಜಯ ನಾಗಣ್ಣವರ ಅವರು ತಿಳಿಸಿದರು.

ಈ ವೇಳೆ ಮತದಾರರ ದಿನಾಚರಣೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಭಾರತ ಚುನಾವಣಾ ಆಯೋಗ ಪ್ರತಿ ವರ್ಷ ಚುನಾವಣೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿದೆ.
ಸುಮಾರು 140 ಕೋಟಿ ಹೆಚ್ಚು ಜನಸಂಖ್ಯೆ ಇರುವ ಭಾರತ ದೇಶದ ಚುನಾವಣಾ ಮಾದರಿಯನ್ನು ಇತರೆ ದೇಶದವರು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲೇ ಅತಿ ಹೆಚ್ಚು ಹೊಸ ಮತದಾರ ನೋಂದಣಿ:

ಜಿಲ್ಲೆಯಲ್ಲಿ 40 ಲಕ್ಷಕ್ಕಿಂತ ಹೆಚ್ಚು ಮತದಾರರಿದ್ದಾರೆ.
ಸುಮಾರು 2 ಲಕ್ಷ ಹೊಸ ಮತದಾರ ನೋಂದಣಿಗಳಾಗಿವೆ ಅದರಲ್ಲಿ 1.2 ಲಕ್ಷ ಹೊಸ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ.
ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಹೊಸ ಮತದಾರ ನೋಂದಣಿಗಳಾಗಿವೆ ಎಂದು ಹೇಳಿದರು.

17 ವರ್ಷ ತುಂಬಿದ ಎಲ್ಲರೂ ಮುಂಚಿತವಾಗಿ ಮತದಾರ ಪಟ್ಟಿ ಸೇರ್ಪಡೆಗೆ ನೋಂದಣಿ ಮಾಡಿಕೊಳ್ಳಬಹುದು. 18 ವರ್ಷ ಪೂರೈಸಿದ ಬಳಿಕ ನೇರವಾಗಿ ಪೋಸ್ಟ್ ಮೂಲಕ ಮತದಾರ ಚೀಟಿ ಅವರ ಮನೆಗಳಿಗೆ ಕಳುಹಿಸಲಾಗುವುದು.

ಅದೇ ರೀತಿಯಲ್ಲಿ ಮಹಾನಗರ ಪಾಲಿಕೆಯಿಂದ ಸುಮಾರು 45 ಸಾವಿರ ಜನರ ಮರಣ ಪ್ರಮಾಣ ಪತ್ರ ನೀಡಿ, ಮರಣ ಹೊಂದಿದ ವ್ಯಕ್ತಿಗಳ ಹೆಸರುಗಳನ್ನು ಮತದಾರ ಪಟ್ಟಿಯಿಂದ ತೆಗೆದು ಪರಿಷ್ಕರಿಸಲಾಗಿದೆ.

ಈ ಮೊದಲು ನಡೆದ ಚುನಾವಣೆಗಳಲ್ಲಿ ನ್ಯಾಯಸಮ್ಮತ ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲೆಯ ಎಲ್ಲಾ ಅಧಿಕಾರಿಗಳು ನಿರಂತರ ಶ್ರಮಿಸಿದ್ದಾರೆ. ವಿವಿಧ ಇಲಾಖೆಯ ಸುಮಾರು 25 ಸಾವಿರ ಅಧಿಕಾರಿ, ಸಿಬ್ಬಂದಿಗಳು ಚುನಾವಣಾ ಕರ್ತವ್ಯ ನಿರ್ವಹಿಸುವ ಮೂಲಕ ಪಾರದರ್ಶಕ ಚುನಾವಣೆ ನಡೆಸಲು ಸಹಕಾರ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿ ಮತದಾರರು ನಿಮ್ಮ ಹಕ್ಕು ಚಲಾಯಿಸಿ:

ಪ್ರಜಾಪ್ರಭುತ್ವದಲ್ಲಿ ಭಾರತ ಅತೀ ದೊಡ್ಡ ದೇಶವಾಗಿದೆ. ಮತದಾರ ಪಟ್ಟಿಯಲ್ಲಿ ತಮ್ಮ ಕುಟುಂಬದ ಸದಸ್ಯರ ಹೆಸರು ನೋಂದಣಿಯಾಗಿರುವ ಕುರಿತು ಖಾತರಿ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಭಾರತ ಚುನಾವಣಾ ಆಯೋಗ ಸಂಸ್ಥಾಪನಾ ದಿನವಾಗಿರುವ ಜ.25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಬೆಳಗಾವಿಯಲ್ಲಿ ಅತೀ ಹೆಚ್ಚು ಹೊಸ ಮತದಾರರ ನೋಂದಣಿ ಮಾಡಲಾಗಿರುತ್ತದೆ.

ಪ್ರತಿ ಕಾಲೇಜುಗಳಲ್ಲಿರುವ ಮತದಾರರ ಸಾಕ್ಷರತಾ ಕ್ಲಬ್ ಗಳ ಮೂಲಕವೂ ನೋಂದಣಿ ಅಭಿಯಾನ ಕೈಗೊಂಡು ಎಲ್ಲ ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕಿದೆ ಎಂದು ಪಾಲಿಕೆ ಆಯುಕ್ತರು ಹೇಳಿದರು.

ಪ್ರಶಸ್ತಿ ಪತ್ರ ವಿತರಣೆ :

ಜಿಲ್ಲಾ ಮಟ್ಟದ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಪ್ರಭಂದ ಸ್ಪರ್ಧೆ, ಭಿತ್ತಿ ಚಿತ್ರ, ರಸ ಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಶಸ್ತಿ ಪತ್ರಗಳನ್ನು ನೀಡಿದರು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಡಿಸಿಪಿ ಸ್ನೇಹ, ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಸಚಿವರಾದ ರಾಜಶ್ರೀ ಜೈನಾಪುರ, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಉದಯಕುಮಾರ ತಳವಾರ, ರೇಷ್ಮಾ ತಾಳಿಕೋಟಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕ ರವಿ ಪಂಗರಪ್ಪನವರ, ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಹಾಗೂ ವಿವಿಧ ಶಾಲಾ ಕಾಲೇಜು, ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮತದಾರರ ಜಾಗೃತಿ ಜಾಥಾ:

ಇದಕ್ಕೂ ಮುಂಚೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಿಂದ ಚನ್ನಮ್ಮ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ ಕಲಾ ಮಂದಿರದವರೆಗೆ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಮತದಾನದ ಕುರಿತು ವಿಶೇಷ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಸ್ವೀಪ್ ಕಮಿಟಿ ಹಾಗೂ ಜಿ.ಪಂ ಮುಖ್ಯ ನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿ.ಪಂ ಮುಖ್ಯ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಮತದಾರರ ಪ್ರತಿಜ್ಞಾ ವಿಧಿ:

ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ.