Belagavi News In Kannada | News Belgaum

ಬಬಲಾದಿ ಮಠಕ್ಕೆ ಭೇಟಿ ನೀಡಿ ಶ್ರೀ ಗಳ ಆಶೀರ್ವಾದ ಪಡೆದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಅರಭಾವಿ ಬಬಲಾದಿ ಮಠಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುರುವಾರ ಸಂಜೆ ಭೇಟಿ ನೀಡಿ ಶ್ರೀ ಗಳ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಬಲಾದಿ ಮಠದ ಜಾತ್ರೆಯು ನಾಳೆಯಿಂದ ಅದ್ದೂರಿಯಿಂದ ಜರುಗಲಿದೆ. ನಮ್ಮ ರಾಜ್ಯವಲ್ಲದೇ ನೆರೆಯ ರಾಜ್ಯಗಳ ಅಪಾರ ಭಕ್ತರು ಈ ಐತಿಹಾಸಿಕ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ನನ್ನ ಪೂರ್ವ ನಿಗದಿತ ಕಾರ್ಯಕ್ರಮ ನಿಗದಿಯಾಗಿದ್ದರಿಂದ ನಾಳಿನ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜಾತ್ರೆಯ ಮುನ್ನಾ ದಿನವಾದ ಇಂದು ಬಬಲಾದಿ ಮಠದ ಅಜ್ಜನವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಆಗಮಿಸಿದ್ದೇನೆಂದು ಅವರು ಹೇಳಿದರು.

ಜಾತ್ರೆಗಳು ನಮ್ಮ ಇತಿಹಾಸ, ಭವ್ಯ ಪರಂಪರೆಯನ್ನು ಬಿಂಬಿಸುತ್ತವೆ. ದೇವರ ಆಶೀರ್ವಾದದಿಂದ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ನಮ್ಮ ದೇಶದಲ್ಲಿ ನಾನಾ ಜಾತಿ- ಧರ್ಮಗಳು ಇದ್ದರೂ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. ನಮ್ಮ ಭಾರತೀಯ ಸಂಸ್ಕೃತಿಯು ಇಡೀ ವಿಶ್ವಕ್ಕೆ ಮಾದರಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಶ್ರೀ ಮಠದ ಪೀಠಾಧಿಪತಿ ಶಿವಯ್ಯ ಮಹಾ ಸ್ವಾಮಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿದರು.

ಈ ಸಂದರ್ಭದಲ್ಲಿ ಅರಭಾವಿ- ಶಿಂಧಿಕುರಬೇಟ ಗ್ರಾಮಗಳ ಸುತ್ತಲಿನ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.//////