Belagavi News In Kannada | News Belgaum

ಭಾರತ ಬಲಿಷ್ಠ ರಾಷ್ಟ್ರವಾಗಲು ಸಂವಿಧಾನ ಅಡಿಪಾಯ: ಸತೀಶ್ ಜಾರಕಿಹೊಳಿ

ಬೆಳಗಾವಿ: ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿ, ಚಿಂತನೆಯ ಫಲವಾಗಿ ನಾವಿಂದು ಜಗತ್ತಿಗೆ ಮಾದರಿಯಾದ ಸಂವಿಧಾನದ ವಾರಸುದಾರರಾಗಿದ್ದೇವೆ. ಪರಕೀಯರ ಆಡಳಿತದಲ್ಲಿದ್ದ ಭಾರತವು ಕೇವಲ 75 ವರ್ಷಗಳಲ್ಲಿ ಜಗತ್ತಿನ ಅತ್ಯಂತ ಬಲಿಷ್ಠ ಪ್ರಜಾತಂತ್ರ ರಾಷ್ಟ್ರವಾಗಿ ಹೊರಹೊಮ್ಮಲು ಈ ಸಂವಿಧಾನವೇ ಬುನಾದಿಯಾಗಿದೆ ಎಂದರೆ ತಪ್ಪಾಗಲಾರದು. ಸಾಮಾಜಿಕ ನ್ಯಾಯ, ಸಮಾನತೆ, ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳು ನಮ್ಮ ಸಂವಿಧಾನ ನಮಗೆ ಕಲ್ಪಿಸಿಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ ಎಂದು ಲೋಕೋಪಯೊಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದರು.

ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಅವರು, ಸಂವಿಧಾನ ಜಾರಿಗೆ ಬಂದ ಈ ಅಮೃತಗಳಿಗೆಯಲ್ಲಿ ನಮ್ಮ ಭಾರತ ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಗಣರಾಜ್ಯೋತ್ಸವ ದಿನವಾದ ಇಂದಿನಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಂವಿಧಾನ ಜಾಗೃತಿ ಜಾಥಾವನ್ನು ಸರಕಾರ ಹಮ್ಮಿಕೊಂಡಿದೆ ಎಂದರು.

ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರವು ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿನ ಜನರಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸಲಿದೆ.
ಸಂವಿಧಾನ ದಿನಾಚರಣೆಯ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾ ರಾಷ್ಟ್ರೀಯ ಮಟ್ಟದ ಸಮಾವೇಶ 25ನೇ ಫೆಬ್ರುವರಿ 2024 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಗಣರಾಜ್ಯೋತ್ಸವದ ಹೊಸ್ತಿಲಿನಲ್ಲಿ ಜನವರಿ 18, 2024 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಇಡೀ ಜಗತ್ತಿಗೆ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳಿಗೆ ಹೊಸ ದಿಕ್ಕು ನೀಡಿದ ವಚನ ಚಳವಳಿಯ ನಾಯಕ ಬಸವಣ್ಣನವರನ್ನು ನಮ್ಮ ಸರ್ಕಾರವು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.

ಇದೇ ವೇಳೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಗಣರಾಜ್ಯೋತ್ಸವ ಸಂಭ್ರಮದಲ್ಲಿ ಭಾಗಿಯಾಗಿರುವ ನಾಡಿನ ಎಲ್ಲ ಹಿರಿಯರಿಗೆೆ, ಕವಿ-ಸಾಹಿತಿಗಳಿಗೆ, ಚಿಂತಕರು, ಜಿಲ್ಲೆಯ ಶಾಸಕ ಮಿತ್ರರು, ಸಂಸದರು, ಹಾಗೂ ಎಲ್ಲ ಜನಪ್ರತಿನಿಧಿಗಳು, ನಾಗರಿಕ ಬಂಧುಗಳು ಮತ್ತು ಮಾಧ್ಯಮ ಸ್ನೇಹಿತರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಜನರಿಗೆ ನೀಡಿದ ಭರವಸೆಯಂತೆ ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಈ ಐದೂ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು..

 

ಇದಲ್ಲದೇ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಎಂದು ಗುರುತಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮನವರ ಗೌರವಾರ್ಥ ಕಿತ್ತೂರು ತಾಲ್ಲೂಕನ್ನು ಚನ್ನಮ್ಮನ ಕಿತ್ತೂರು ಎಂದು ಮರು ನಾಮಕರಣ ಕೂಡ ಮಾಡಲಾಗಿದೆ.. ಇತ್ತೀಚೆಗೆ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವದ ಸಂದರ್ಭದಲ್ಲಿ 257 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿ ಶಿಲ್ಪವನವನ್ನು ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ ಎಂದು ತಿಳಿಸಿದರು.

ನಾಗರೀಕ ಪೊಲೀಸ್ ಪಡೆ, ಕೆ.ಎಸ್.ಆರ್.ಪಿ ಪುರುಷ ಮತ್ತು ಮಹಿಳಾ ತುಕಡಿ, ಅಬಕಾರಿ ಇಲಾಖೆ, ಗೃಹ ರಕ್ಷಕ ದಳ, ಎನ್.ಸಿ.ಸಿ, ಭಾರತ ಸೇವಾದಳ ಮಹೇಶ್ವರಿ ಅಂದ ಮಕ್ಕಳ ಶಾಲೆ ಸೇರಿದಂತೆ ವಿವಿಧ ಶಾಲಾ ಮಕ್ಕಳು ಪರೇಡನಲ್ಲಿ ಭಾಗವಹಿಸಿದ್ದವು. 

ಈ ಸಂದರ್ಭದಲ್ಲಿ ಸಂಸದೆ ಮಂಗಳಾ ಅಂಗಡಿ, ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ, ಕುಡಚಿ ಶಾಸಕ ಮಹೇಶ್ ತಮ್ಮಣ್ಣವರ, ಪ್ರಾದೇಶಿಕ ಆಯಕ್ತ ಸಂಜಯ ಶೆಟ್ಟೇಣ್ಣವರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೋಲಿಸ್ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿ.ಪಂ ಸಿಇಓ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾಪೌರರು ಶೋಭಾ ಸೋಮನಾಚೆ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.