Belagavi News In Kannada | News Belgaum

ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ದಿನಾಂಕ ಪ್ರಕಟ

ನವದೆಹಲಿ: ಕೇಂದ್ರ ಚುನಾವಣಾ ಆಯೋಗವು 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಇಂದು ದಿನಾಂಕವನ್ನು ಪ್ರಕಟಿಸಿದೆ.
ಫೆಬ್ರವರಿ 27 ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಮತ ಎಣಿಕೆ ಕೂಡ ನಡೆಯಲಿದೆ. 56 ಸದಸ್ಯರ ಅಧಿಕಾರಾವಧಿಯು ಏಪ್ರಿಲ್ 2024 ರಲ್ಲಿ ಅವರ ನಿವೃತ್ತಿಯ ಮೇಲೆ ಮುಕ್ತಾಯಗೊಳ್ಳಲಿದೆ. ಕರ್ನಾಟಕ ಸೇರಿ ಒಟ್ಟು 13 ರಾಜ್ಯಗಳ 50 ರಾಜ್ಯಸಭಾ ಸದಸ್ಯರ ಅವಧಿ ಏಪ್ರಿಲ್‌ 2ರಂದು ಮುಗಿಯಲಿದ್ದರೆ, ಎರಡು ರಾಜ್ಯಗಳ ಉಳಿದ ಆರು ಸದಸ್ಯರು ಏಪ್ರಿಲ್‌ 3ರಂದು ನಿವೃತ್ತರಾಗಲಿದ್ದಾರೆ. ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳು ಖಾಲಿಯಾಗಲಿದ್ದು, ಜಿ.ಸಿ ಚಂದ್ರಶೇಖರ್, ಎಲ್ ಹನುಮಂತಯ್ಯ, ನಾಸೀರ್ ಹುಸೇನ್, ರಾಜೀವ್ ಚಂದ್ರಶೇಖರ್ ಅವರ ಅವಧಿ ಅಂತ್ಯವಾಗಲಿದೆ.
ಚುನಾವಣಾ ಆಯೋಗದ ಪ್ರಕಾರ, ರಾಜ್ಯಸಭಾ ಚುನಾವಣೆಗೆ ಫೆ.8ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಫೆ.15 ಕೊನೆಯ ದಿನವಾಗಿದೆ. ಫೆ.16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಫೆ.20 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಫೆಬ್ರವರಿ 27 ರಂದು ಬೆಳಗ್ಗೆ 9 ರಿಂದ ಸಂಜೆ 4 ರ ನಡುವೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.
ಚುನಾವಣೆ ನಡೆಯುವ ಸ್ಥಾನಗಳ ಸಂಖ್ಯೆ: ಆಂಧ್ರಪ್ರದೇಶ: 3, ಬಿಹಾರ್:‌ 6, ಛತ್ತೀಸ್‌ಗಢ: 1, ಗುಜರಾತ್‌: 4, ಹರಿಯಾಣ: 1, ಹಿಮಾಚಲಪ್ರದೇಶ: 1, ಕರ್ನಾಟಕ: 4, ಮಧ್ಯಪ್ರದೇಶ: 5, ಮಹಾರಾಷ್ಟ್ರ: 6, ತೆಲಂಗಾಣ: 3, ಉತ್ತರಪ್ರದೇಶ: 10, ಉತ್ತರಾಖಂಡ್:‌ 1, ಪಶ್ಚಿಮಬಂಗಾಳ: 5, ಒಡಿಶಾ: 3, ರಾಜಸ್ಥಾನ: 3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.//////