Belagavi News In Kannada | News Belgaum

ಬರ ನಿರ್ವಹಣೆ: ಅಗತ್ಯ ಸಿದ್ಧತೆಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ

ಜಿಲ್ಲೆಯ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ

ಬೆಳಗಾವಿ, ಜ.31: ಕುಡಿಯುವ ನೀರು ಕೊರತೆ ಕಂಡುಬಂದಾಗ ತಕ್ಷಣವೇ ನೀರು ಪೂರೈಸಲು ಅನುಕೂಲವಾಗುವಂತೆ ಖಾಸಗಿ ಕೊಳವೆಬಾವಿಗಳ ಮಾಲೀಕರೊಂದಿಗೆ ಮುಂಚಿತವಾಗಿಯೇ ಒಪ್ಪಂದ ಮಾಡಿಕೊಳ್ಳಬೇಕು. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಒಂದು ಸಮಿತಿಯನ್ನು ರಚಿಸಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಸೂಚನೆ ನೀಡಿದರು.

ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಬುಧವಾರ(ಜ.31) ನಡೆದ ಕಂದಾಯ ಇಲಾಖೆಯ ಬೆಳಗಾವಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬರ ಸಂದರ್ಭದಲ್ಲಿ ಟ್ಯಾಂಕರ್ ಹಾಗೂ ಕೊಳವೆಬಾವಿ ಬಾಡಿಗೆಯನ್ನು ಎಸ್.ಡಿ.ಆರ್.ಎಫ್. ಅನುದಾನದಲ್ಲಿ ಪಾವತಿಸಬಹುದು ಎಂದು ಸಲಹೆ ನೀಡಿದರು.

ರೂ.64.84 ಕೋಟಿ ಬೆಳೆಹಾನಿ ಪರಿಹಾರ ಬಿಡುಗಡೆ:

ಜಿಲ್ಲೆಯ 3.43 ಲಕ್ಷ ರೈತರಿಗೆ 63.84 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರವನ್ನು ನೀಡಲಾಗಿದೆ. ಪರಿಹಾರ ವಿತರಣೆಯ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯಿತಿಗಳ ನೋಟಿಸ್ ಫಲಕದಲ್ಲಿ ಪ್ರದರ್ಶಿಸಬೇಕು ಎಂದು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ಬೆಳಗಾವಿ ಜಿಲ್ಲೆಯ 3.43 ಲಕ್ಷ ರೈತರಿಗೆ ಈಗಾಗಲೇ ಬೆಳೆಹಾನಿ ಪರಿಹಾರ ನೀಡಲಾಗಿದೆ. ಉಳಿದವರಿಗೆ ಇನ್ನೊಂದು ವಾರದಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.

ಫ್ರುಟ್ಸ್ ಇಂದೀಕರಣ ಚುರುಕುಗೊಳಿಸಲು ಕಟ್ಟುನಿಟ್ಟಿನ ಸೂಚನೆ:

ಫ್ರುಟ್ಸ್(Farmer Registration and Unified Beneficiary Information System) ಇಂದೀಕರಣವನ್ನು ಶೇ.80 ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಶೇ.85ರಷ್ಟು ಸಾಧನೆಗೆ ಇಂದೀಕರಣ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ತಿಳಿಸಿದರು.

ಫ್ರುಟ್ಸ್ ಇಂದೀಕರಣದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ತಹಶೀಲ್ದಾರರ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ಅವರು ತೀಕ್ಷಣವಾಗಿ ಎಚ್ಚರಿಕೆ ನೀಡಿದರು.
ಕಡಿಮೆ ಪ್ರಗತಿ ಸಾಧಿಸಿರುವ ತಹಶೀಲ್ದಾರರಿಗೆ ಕಾಲಮಿತಿ ನಿಗದಿಗೊಳಿಸಿ ಗುರಿ ನೀಡಬೇಕು. ನಿಗದಿತ ಗುರಿ ಸಾಧಿಸದಿದ್ದರೆ ತಮಗೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಫ್ರುಟ್ಸ್ ಇಂದೀಕರಣ ಮಾಡುವುದರಿಂದ ರೈತರಿಗೆ ತಕ್ಷಣವೇ ಪರಿಹಾರವನ್ನು ನೀಡುವುದು ಸಾಧ್ಯವಾಗಲಿದೆ. ಇದಲ್ಲದೇ ಪರಿಹಾರ ವಿತರಣೆಯಲ್ಲಿ ಗೊಂದಲ ಅಥವಾ ದುರ್ಬಳಕೆಯನ್ನೂ ತಡೆಗಟ್ಟಬಹುದು. ಆದ್ದರಿಂದ ಆದ್ಯತೆ ಮೇರೆಗೆ ಇದನ್ನು ಪೂರ್ಣಗೊಳಿಸಬೇಕು ಎಂದರು.

ಆರ್ ಟಿಸಿಗೆ ಆಧಾರ್ ಜೋಡಣೆ ಪ್ರಕ್ರಿಯೆ ಶೀಘ್ರ:

ಆರ್‌ಟಿಸಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿದ ಬಳಿಕ ಬಹುತೇಕ ದುರ್ಬಳಕೆಯನ್ನು ತಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಈ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಪೌತಿ ಆಂದೋಲನವನ್ನು ಹಮ್ಮಿಕೊಂಡು ಆರ್‌ಟಿಸಿ ಸರಿಪಡಿಸುವ ಕೆಲಸ ಚುರುಕುಗೊಳಿಸಬೇಕು.
ಕಂದಾಯ ಗ್ರಾಮಗಳ ರಚನೆಗಾಗಿ ಬೆಳಗಾವಿ ಜಿಲ್ಲೆಯಲ್ಲಿ 164 ಗ್ರಾಮಗಳನ್ನು ಗುರುತಿಸಲಾಗಿದೆ. ಆದರೆ ಇನ್ನೊಮ್ಮೆ‌ ಪರಿಶೀಲನೆ ಮಾಡುವ ಮೂಲಕ ಕೈಬಿಟ್ಟು ಹೋಗಿರುವ ಇನ್ನಷ್ಟು ಗ್ರಾಮಗಳನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆಯನ್ನು ಕಳಿಸುವಂತೆ ಸಚಿವರು ತಿಳಿಸಿದರು.

ಈ ಬಾರಿ ಜನರಿಗೆ ಮನೆಗಳ ಹಕ್ಕುಪತ್ರ ನೀಡುವಾಗ ಡಿಜಿಟಲ್ ಹಕ್ಕುಪತ್ರ ನೀಡುವುದರ ಜತೆಗೆ ನೋಂದಣಿಯನ್ನು ಮಾಡಿಕೊಡಲು ಯೋಜನೆ ರೂಪಿಸಲಾಗುತ್ತಿದೆ.
ನಕಲು ಮಾಡುವುದು; ತಿದ್ದುಪಡಿ ತಡೆಯಲು ಹಾಗೂ ಶಾಶ್ವತ ದಾಖಲೆಯಾಗಿ ಸಂರಕ್ಷಿಸಲು ಡಿಜಿಟಲ್ ಹಕ್ಕುಪತ್ರ ನೀಡಲಾಗುವುದು ಎಂದು ತಿಳಿಸಿದರು.

ಸರಕಾರಿ ಜಮೀನು ರಕ್ಷಣೆಗೆ ಬೀಟ್ ವ್ಯವಸ್ಥೆ:

ಸರಕಾರಿ ಜಮೀನು ಗುರುತಿಸಿ ಅವುಗಳು ಒತ್ತುವರಿಯಾಗದಂತೆ ತಡೆಗಟ್ಟಬೇಕು‌ ಒಂದು ವೇಳೆ ಒತ್ತುವರಿಯಾಗಿದ್ದು ಕಂಡುಬಂದರೆ ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಒಂದು ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಸರಕಾರಿ ಜಮೀನುಗಳನ್ನು ಗುರುತಿಸಿ ಅವುಗಳಿಗೆ ಜಿಯೋಫೆನ್ಸಿಂಗ್ ಮಾಡಲಾಗುವುದು. ಇದಾದ ಬಳಿಕ ಪೊಲೀಸ್ ಬೀಟ್ ಮಾದರಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿ/ಸಿಬ್ಬಂದಿ ಪ್ರತಿ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ವಿವರಿಸಿದರು.

ತಹಶೀಲ್ದಾರ ನ್ಯಾಯಾಲಯದಲ್ಲಿರುವ 90 ದಿನಗಳ ಹಿಂದಿನ ಪ್ರಕರಣಗಳನ್ನು ಫೆಬ್ರುವರಿ 15 ರೊಳಗೆ ಇತ್ಯರ್ಥಪಡಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಸಚಿವರು ನೀಡಿದರು.

ಭೂ ಕಂದಾಯ ಹಾಗೂ ರಾಜಸ್ವವನ್ನು ಸಮರ್ಪಕವಾಗಿ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು. ರಾಜಸಗವ ವಂಚಿಸುವವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಬಿಸಿ ಮುಟ್ಟಿಸಬೇಕು ಎಂದು ಸೂಚನೆ ನೀಡಿದರು.
ಸಾರ್ವಜನಿಕ‌ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಲು ಅನುಕೂಲವಾಗುವಂತೆ ಎಲ್ಲ ತಹಶೀಲ್ದಾರ ಕಚೇರಿಗಳಲ್ಲಿ ಇ-ಆಫೀಸ್ ವ್ಯವಸ್ಥೆಯನ್ನು ಬಲಪಡಿಸಬೇಕು. ಕಡತಗಳ ವಿಲೇವಾರಿ ಚುರುಕುಗೊಳಿಸಲು ಟಪಾಲು ಸೇರಿದಂತೆ ಎಲ್ಲ ವಿಭಾಗದ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಹೊಸ ತಾಲ್ಲೂಕು-ಮಿನಿ ವಿಧಾನಸೌಧ ನಿರ್ಮಾಣಕ್ಕೆ ಮನವಿ:

ಕಾಗವಾಡ ತಾಲ್ಲೂಕು ಹೊಸದಾಗಿ ರಚನೆಯಾಗಿದ್ದು, ಮೂಲಸೌಕರ್ಯಗಳನ್ನು ಒದಗಿಸಲು ಅನುದಾನ ಬಿಡುಗಡೆ ಮಾಡಬೇಕು ಎಂದು ಕಾಗವಾಡ ಶಾಸಕ ರಾಜು ಕಾಗೆ ಒತ್ತಾಯಿಸಿದರು.

ಅಧಿಕಾರಿಗಳು, ಸಿಬ್ಬಂದಿ ಕೊರತೆಯಿದೆ‌. ಬಹುತೇಕ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಆದ್ದರಿಂದ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕಾಗೆ ಅವರು ಸಚಿವರಿಗೆ ಮನವಿ ಮಾಡಿಕೊಂಡರು.

ಆದಷ್ಟು ಬೇಗನೇ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಭೈರೇಗೌಡ ಭರವಸೆ ನೀಡಿದರು.

ಬರ ನಿರ್ವಹಣೆಗೆ ಕ್ರಮ-ಜಿಲ್ಲಾಧಿಕಾರಿ:

ಹದಿನೈದು ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ. ಘಟಪ್ರಭಾ ಜಲಾಶಯದಲ್ಲಿ ಶೇ.66.11, ಮಾರ್ಕಂಡೇಯ ಶೇ.68.15, ಮಲಪ್ರಭಾ ಜಲಾಶಯ ಶೇ.36.90 ರಷ್ಟು ನೀರು ಲಭ್ಯವಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಮೇವು ಖರೀದಿಗಾಗಿ ಟೆಂಡರ್ ಕರೆಯಲಾಗಿದ್ದು, ಅಗತ್ಯ ಮೇವು ಸಂಗ್ರಹಣೆಗೆ ಕ್ರಮ ವಹಿಸಲಾಗುವುದು. 17931 ಮೇವಿನ ಕಿಟ್ ಗಳನ್ನು ವಿತರಿಸಲಾಗಿದೆ.

ಕುಡಿಯುವ ನೀರು ಸಮಸ್ಯೆ‌ಕಂಡುಬಂದಲ್ಲಿ 24 ಗಂಟೆಯಲ್ಲಿ ಪರಿಹರಿಸುವಂತೆ ಸೂಚನೆ ನೀಡಲಾಗಿದೆ.
ತಹಶೀಲ್ದಾರರ ಖಾತೆಯಲ್ಲಿ 17 ಕೋಟಿ ರೂಪಾಯಿ ಹಣ ಲಭ್ಯವಿರುತ್ತದೆ. ಬರ ನಿರ್ವಹಣೆಗೆ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕುಡಿಯುವ ನೀರು ಕೊರತೆಯಾಗಬಹುದಾದ ಗ್ರಾಮಗಳನ್ನು ಪಟ್ಟಿ ಮಾಡಲಾಗಿದ್ದು, ತುರ್ತು ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಖಾಸಗಿ ಕೊಳವೆಬಾವಿಗಳನ್ನು ಕೂಡ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಜಿಲ್ಲೆಯಲ್ಲಿ ಮಾರ್ಚ್ ತಿಂಗಳವರೆಗೆ ಕುಡಿಯುವ ನೀರಿನ ಕೊರತೆ ಕಂಡುಬರುವುದಿಲ್ಲ ಎಂದು ತಿಳಿಸಿದರು.

ಭೂದಾಖಲೆಗಳು ಹಾಗೂ ಭೂಮಾಪನ ಇಲಾಖೆಯ ಕಾರ್ಯದರ್ಶಿ ಜೆ.ಮಂಜುನಾಥ್, ಕಂದಾಯ ಇಲಾಖೆಯ ಆಯುಕ್ತರಾದ ಪೊಮ್ಮಲ್ ಸುನೀಲ್ ಕುಮಾರ್, ಭೂದಾಖಲೆ ಹಾಗೂ ಭೂಮಾಪನ ಇಲಾಖೆಯ ಜಂಟಿ ನಿರ್ದೇಶಕರಾದ ನಜ್ಮಾ ಪೀರಜಾದೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಕಂದಾಯ ಇಲಾಖೆ ಕರ್ನಾಟಕ ಸರ್ಕಾರ*
ಮಾಧ್ಯಮ ಪ್ರಕಟಣೆ

ಫ್ರೂಟ್ಸ್’ ಮಾದರಿಯಲ್ಲೇ ಆಧಾರ್ ಮತ್ತು ಪಹಣಿ ಲಿಂಕ್ ಮಾಡುವ ಕೆಲಸ ಆಂದೋಲನದ ಮಾದರಿಯಲ್ಲಿ ಆಗಬೇಕು: ಕೃಷ್ಣ ಬೈರೇಗೌಡ

 

ಜಿಲ್ಲೆಯಲ್ಲಿ ಫ್ರೂಟ್ಸ್ ನವೀಕರಣ ಶೇ.80 ರಷ್ಟು ಪ್ರಗತಿ

 

ಫ್ರೂಟ್ಸ್ ನವೀಕರಣಕ್ಕೆ ಸಚಿವರು ಸಂತಸ, ಪಹಣಿ-ಆಧಾರ್ ಲಿಂಕ್ ಗೆ ಕರೆ

ಕೋರ್ಟ್ ಕೇಸ್ ನಿರ್ವಹಣೆ, ಇ-ಆಫೀಸ್ ಬಳಕೆಗೆ ತೀವ್ರ ಅಸಮಾಧಾನ

ಹುಬ್ಬಳ್ಳಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ಪರಿಶೀಲನೆ

ಬೆಳಗಾವಿ ಜನವರಿ 31:ಹಣ ದುರ್ಬಳಕೆ ಹಾಗೂ ಅಕ್ರಮ ಪ್ರಕರಣಗಳನ್ನು ನಿಯಂತ್ರಿಸಲು “ಫ್ರೂಟ್ಸ್” ಮಾದರಿಯಲ್ಲೇ ಆಧಾರ್ ಕಾರ್ಡ್ ಮತ್ತು ಪಹಣಿ ಲಿಂಕ್ ಮಾಡುವ ಕೆಲಸ ಆರಂಭವಾಗಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ರೈತರಿಗೆ ಬರ ಪರಿಹಾರವನ್ನು ಶೀಘ್ರ ಮತ್ತು ಪಾರದರ್ಶಕವಾಗಿ ನೀಡಲು ಫ್ರೂಟ್ಸ್ ನವೀಕರಣಕ್ಕೆ ಸೂಚಿಸಲಾಗಿತ್ತು. ಶೇ.80 ರಷ್ಟು ಗುರಿ ನೀಡಲಾಗಿತ್ತು. ಬೆಳಗಾವಿ ಜಿಲ್ಲೆ ಈ ಗುರಿಯನ್ನು ಪೂರೈಸಿರುವುದು ಸಂತಸದ ವಿಚಾರ” ಎಂದರು.

ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಳೆದ ಎರಡು ತಿಂಗಳಿನಿಂದ ಆಂದೋಲನ ಮಾದರಿಯಲ್ಲಿ ಫ್ರೂಟ್ಸ್ ದತ್ತಾಂಶ ನವೀಕರಣಕ್ಕೆ ಕೆಲಸ ಮಾಡಿದ್ದೀರಿ. ಆದರೆ, ಆಧಾರ್ ಮತ್ತು ಪಹಣಿ ಲಿಂಕ್ ಗೂ ಎಲ್ಲಾ ಅಧಿಕಾರಿಗಳೂ ಇದೇ ಮಾದರಿಯಲ್ಲಿ ಕೆಲಸ ನಿರ್ವಹಿಸಬೇಕು‌ ಎಂದು ಕರೆ ನೀಡಿದರು.

ಹಲವು ಜಿಲ್ಲೆಗಳಲ್ಲಿ ಯಾರದ್ದೋ ಭೂಮಿಗೆ ಅದೇ ಹೆಸರಿನ ಮತ್ತೊಬ್ಬ ವ್ಯಕ್ತಿಗೆ ಪರಿಹಾರ ನೀಡಿರುವ, ಯಾವುದೋ ಜಿಲ್ಲೆಯ ರೈತರ ಪರಿಹಾರ ಹಣ ಮತ್ತ್ಯಾವುದೋ ಜಿಲ್ಲೆಯ ರೈತರಿಗೆ ನೀಡಿರುವ, ಹಣ ದುರುಪಯೋಗವಾಗಿರುವ ಹಲವು ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ. ಆಧಾರ್ ಮತ್ತು ಪಹಣಿ ಲಿಂಕ್ ಮಾಡುವ ಮೂಲಕ ಮಾತ್ರ ಇಂತಹ ಅಕ್ರಮಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯ ಎಂದು ಅವರು ಹೇಳಿದರು.

*ಕುಡಿಯುವ ನೀರಿನ ಬಗ್ಗೆ ಇರಲಿ ಎಚ್ಚರ:*

ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿಲ್ಲ‌. ಆದರೆ, ಬೇಸಿಗೆಯಲ್ಲಿ ಸಮಸ್ಯೆ ಕಂಡುಬರುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಫೆಬ್ರವರಿ ಮೊದಲ‌ ವಾರದಲ್ಲೇ ಟಾಸ್ಕ್ ಫೋರ್ಸ್ ಸಭೆ ನಡೆಸಬೇಕು. ಈಗಲೇ ಖಾಸಗಿ ಟ್ಯಾಂಕರ್ ಹಾಗೂ ಬೋರ್ ಬೆಲ್ ಗಳನ್ನು ಗುರುತಿಸಿ ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

*ಕಂದಾಯ ಗ್ರಾಮಗಳ ಶೀಘ್ರ ಘೋಷಣೆಗೆ ಸೂಚನೆ:*

ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು.

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 164 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದೆ. ಆದರೆ, ಈವರೆಗೆ 114 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಈ ಪೈಕಿ 93 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 30 ಗ್ರಾಮಗಳು ಬಾಕಿ ಉಳಿದಿದ್ದು, 20 ಗ್ರಾಮಗಳು ವಾಪಾಸ್ ಬಂದಿವೆ. ಇದಕ್ಕೆ ಕಾರಣವೇನು? ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದು ಬಡವರ ಕೆಲಸ. ಬೆಳಗಾವಿ ರಾಜ್ಯದಲ್ಲೇ ಅತಿದೊಡ್ಡ ಜಿಲ್ಲೆಯಾಗಿದ್ದು, ಇಷ್ಟು ದೊಡ್ಡ ಜಿಲ್ಲೆಗೆ 164 ತುಂಬಾ ಸಣ್ಣ ಸಂಖ್ಯೆ. ಜಿಲ್ಲೆಯಲ್ಲಿ ಯಾವ ಜನವಸತಿ ಪ್ರದೇಶ ಕಂದಾಯ ಗ್ರಾಮಗಳಾಗಲು ಅರ್ಹ ಎಂಬ ಮಾಹಿತಿ ಗ್ರಾಮ ಲೆಕ್ಕಾಧಿಕಾರಿಗೆ ಇರುತ್ತದೆ. ಹೀಗಾಗಿ ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರ್ ಜೊತೆಗೆ ಚರ್ಚಿಸಿ ಮತ್ತಷ್ಟು ತಾಂಡಾ, ಹಟ್ಟಿ,‌ ಗೊಲ್ಲರಹಟ್ಟಿಗಳನ್ನು ಗುರುತಿಸಿ ಪ್ರಸ್ತಾವನೆ ಕಳುಹಿಸಿ ಎಂದು ತಾಕೀತು ಮಾಡಿದರು.

ಕಂದಾಯ ಗ್ರಾಮ ಅಂತಿಮ ಅಧಿಸೂಚನೆ ಹೊರಡಿಸುತ್ತಿದ್ದಂತೆ ಜನರಿಗೆ ಹಕ್ಕು ಪತ್ರ ನೀಡುವ ಕೆಲಸವಾಗಬೇಕು. ಈ ಬಾರಿ ಡಿಜಿಟಲ್‌ ಹಕ್ಕು ಪತ್ರ ನೀಡಲು ಉದ್ದೇಶಿಸಿದ್ದು, ಹಕ್ಕುಪತ್ರದ ಜೊತೆಗೆ ಅವರಿಗೆ ನೋಂದಣಿಯೂ ಮಾಡಿಕೊಡಬೇಕು. ಫಲಾನುಭವಿಗಳು ಮತ್ತೆ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಬಾರದು ಎಂದು ಸೂಚಿಸಿದರು.

*ಬಗರ್ ಹುಕುಂ ಅರ್ಜಿ ವಿಲೇಗೆ ಒತ್ತು:*

ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರ್ಹರಿಗೆ ಮಾತ್ರ ಜಮೀನು ಮಂಜೂರು ಮಾಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, “ಈ ಹಿಂದೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ವೇಳೆ ಅನರ್ಹರಿಗೂ ಜಮೀನು ಮಂಜೂರು ಮಾಡಲಾಗಿದೆ.‌ ನಿಯಮ ಮೀರಿ ಸಾಕಷ್ಟು ಅಕ್ರಮ ನಡೆಸಲಾಗಿದೆ. ಆದರೆ ಈ ಬಾರಿ ಅಂತಹ ಯಾವುದೇ ಪ್ರಹಸನಗಳಿಗೆ ಆಸ್ಪದ ಇಲ್ಲ. ಬಗರ್ ಹುಕುಂ ಸಭೆಯ ಬಯೋ ಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಪಡೆಯಬೇಕು” ಎಂದು ತಾಕೀತು ಮಾಡಿದರು.

ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ಮುಂದಿನ 6 ತಿಂಗಳಲ್ಲಿ ಅರ್ಹರಿಗೆ ಸಾಗುವಳಿ ಚೀಟಿ ನೀಡಬೇಕು,ಸಾಗುವಳಿ ಚೀಟಿ ನೀಡುತ್ತಿದ್ದಂತೆ ಹೊಸ ಸರ್ವೇ ನಂಬರ್ ಪೋಡಿಯನ್ನೂ ಸಹ ಒದಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

*ಸರ್ಕಾರಿ ಜಮೀನು ರಕ್ಷಣೆಗೆ ಬೀಟ್ ಆ್ಯಪ್*

ಸರ್ಕಾರಿ ಒತ್ತುವರಿ ತೆರವುಗೊಳಿಸಲು ಶೀಘ್ರದಲ್ಲೇ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳಿಗೂ ಬೀಟ್ ಆ್ಯಪ್ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಈ ಬಗ್ಗೆ ಗಮನ ಸೆಳೆದ ಅವರು, “ಎಲ್ಲಾ ಜಿಲ್ಲೆಯಲ್ಲೂ ಸರ್ಕಾರಿ ಭೂ ಒತ್ತುವರಿ ದೊಡ್ಡ ಸಮಸ್ಯೆಯಾಗಿದೆ. ಮುಖ್ಯಂತ್ರಿಗಳಿಗೆ ಉತ್ತರ ನೀಡುವುದು ಕಷ್ಟವಾಗಿದೆ. ಹೀಗಾಗಿ ಮೊದಲು ನಮ್ಮ ದಾಖಲೆಯಲ್ಲಿರುವ ಸರ್ಕಾರಿ ಭೂಮಿಯನ್ನು ಗುರುತಿಸಿ ರಕ್ಷಿಸುವ ಕೆಲಸ ಆಗಬೇಕು. ಸರ್ಕಾರಿ ಭೂಮಿಗಳನ್ನು ಗುರುತಿಸಲು ” ಬೀಟ್” ಆ್ಯಪ್ ಅಭಿವೃದ್ಧಿ ಪಡಿಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು.

ಗ್ರಾಮ ಲೆಕ್ಕಾಧಿಕಾರಿಗಳು ಈ ಆ್ಯಪ್ ಮೂಲಕ ಸರ್ಕಾರಿ ಭೂಮಿಯನ್ನು ಗುರುತಿಸಿ ಒತ್ತುವರಿ ತೆರವಿಗೆ ತಹಶೀಲ್ದಾರ್ ಗೆ ಪ್ರಸ್ತಾಪ ಸಲ್ಲಿಸಬೇಕು. ಅಲ್ಲದೆ, ಪ್ರತಿ ಮೂರು ತಿಂಗಳಿಗೊಮ್ಮೆ ತನ್ನ ವ್ಯಾಪ್ತಿಯ ಸರ್ಕಾರಿ ಭೂಮಿಗೆ ತೆರಳಿ ಪರಿಶೀಲಿಸಿ ಆ್ಯಪ್‌ನಲ್ಲಿ ದಾಖಲಿಸಬೇಕು ಎಂದು ಸೂಚಿಸಿದರು.

ಹೈಕೋರ್ಟ್ ಕೇಸ್ಗಳ ಬಗ್ಗೆ ಇಷ್ಟು ತಾತ್ಸಾರವೇಕೆ?

ಬೆಳಗಾವಿ ಜಿಲ್ಲೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿರುವ ಹಲವು ಪ್ರಕರಣಗಳಲ್ಲಿ ತೆಗೆದುಕೊಂಡಿರು ಕ್ರಮ ಶೂನ್ಯ. ತಹಶೀಲ್ದಾರರು ನ್ಯಾಯಾಲಯದಲ್ಲಿ ಕನಿಷ್ಟ ವಕಾಲತ್ತನ್ನೂ ಸಹ ಸಲ್ಲಿಸಿಲ್ಲ. ವಕಾಲತ್ತು ಸಲ್ಲಿಸಲು ಏನ್ರೀ ಸಮಸ್ಯೆ ಎಂದು ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದರು.

ಕಳೆದ ಜುಲೈ ತಿಂಗಳಿನಿಂದ ಸತತ ಸೂಚನೆ ನೀಡಿದ ನಂತರವೂ ಬೆಳಗಾವಿ ಜಿಲ್ಲೆಯಿಂದ ಅಧಿಕ ಸಂಖ್ಯೆಯ ಪ್ರಕರಣಗಳು ಹೈಕೋರ್ಟ್ ನಲ್ಲಿವೆ. ಆದರೆ, ತಹಶಿಲ್ದಾರರು ಹಾಗೂ ಎಸಿಗಳು ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಪರಿಣಾ‌ಮ ಹೈಕೋರ್ಟ್ ಕಂದಾಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ನೀವು ಮಾಡುವ ಕೆಲಸಕ್ಕೆ ಸರ್ಕಾರದ ಜಮೀನು ಖಾಸಗಿಯವರ ಪಾಲಾಗಲು ನಾವು ಸಹಿ ಹಾಕಬೇಕ? ಮುಖ್ಯಮಂತ್ರಿಗಳ ಬಳಿ ನಾವು ಏನೆಂದು ಉತ್ತರ ನೀಡುವುದು? ಎಂದು ಅವರು ಕಿಡಿಕಾರಿದರು.

ಮುಂದುವರೆದು, ತಹಶಿಲ್ದಾರರು ಈಗಲಾದರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು, ಹೈಕೋರ್ಟ್ ನಲ್ಲಿರುವ ಎಲ್ಲಾ ಪ್ರಕರಣಗಳಲ್ಲೂ ವಕಾಲತ್ತು ಸಲ್ಲಿಸಬೇಕು, ಮೂರು ತಿಂಗಳಲ್ಲಿ ಪ್ರಗತಿ ಕಾಣದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಎಚ್ಚರಿಸಿದರು.

ತಹಶೀಲ್ದಾರ್-ಎಸಿ ಕೋರ್ಟ್ ಕೇಸ್: ಸಚಿವರು ಗರಂ

ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯದಲ್ಲಿನ ಎಲ್ಲಾ ತಕರಾರು ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಕಳೆದ ಜುಲೈ ನಿಂದ‌‌‌ ಸೂಚಿಸುತ್ತಿದ್ದರೂ ಅಧಿಕ ಸಂಖ್ಯೆಯ ಪ್ರಕರಣಗಳ ಬಾಕಿ ಏಕೆ? ಎಂದು ಅಧಿಕಾರಿಗಳ ವಿರುದ್ಧ ಸಚಿವರು ಕಿಡಿಕಾರಿದರು.

ತಹಶೀಲ್ದಾರ್ ನ್ಯಾಯಾಲಯದಲ್ಲಿ 473 ಹಾಗೂ ಉಪ‌ವಿಭಾಗಾಧಿಕಾರಿ (ಎಸಿ) ನ್ಯಾಯಾಲಯದಲ್ಲಿ 189 ಪ್ರಕರಣಗಳು ಬಾಕಿ ಇವೆ. 90 ದಿನಗಳ ಒಳಗಾಗಿ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಕಾನೂನು ಇದ್ದರೂ, ಈ ಎಲ್ಲಾ ಪ್ರಕರಣಗಳನ್ನು ಏಕೆ ಬಾಕಿ ಇಟ್ಟುಕೊಂಡಿದ್ದೀರ? ಎಂದು ತರಾಟೆಗೆ ತೆಗೆದುಕೊಂಡರು. ‌ಅಲ್ಲದೆ, ಈ ಎಲ್ಲಾ ಪ್ರಕರಣಗಳನ್ನೂ ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

*ಇ-ಆಫೀಸ್ ಬಳಸದ ಅಧಿಕಾರಿಗಳಿಗೆ ನೋಟೀಸ್*

ಸಭೆಯ ವೇಳೆ ಇ-ಆಫೀಸ್ ಬಳಕೆಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, ಕಡ್ಡಾಯ ಇ-ಆಫೀಸ್ ಬಳಕೆಗೆ ಸೂಚಿಸಿ ಆರು ತಿಂಗಳಾಗಿದೆ. ಬೆಳಗಾವಿಯ ಎಲ್ಲಾ ತಾಲೂಕುಗಳಲ್ಲೂ ಇ-ಆಫೀಸ್ ಅನುಷ್ಠಾನವಾಗಿದೆ ಎಂದು ವರದಿ ನೀಡಿದ್ದೀರಿ. ಆದರೆ, ಇ-ಆಫೀಸ್ ನಲ್ಲಿ ಎಷ್ಟು ಫೈಲ್ ರಚಿಸಲಾಗುತ್ತಿದೆ? ಎಂದು ಪ್ರಶ್ನಿಸಿದರು. ಹಲವು ತಾಲೂಕುಗಳಲ್ಲಿ ಇ-ಆಫೀಸ್ ತೃಪ್ತಿದಾಯಕವಾಗಿಲ್ಲ ಎಂದು ಕಿಡಿಕಾರಿದರು.

ಇ-ಆಫೀಸನ್ನು ನಾವು ಶೋಕಿಗೆ ಜಾರಿ ಮಾಡಿಲ್ಲ. ಸರ್ಕಾರಿ ಸೇವೆ ಜನರಿಗೆ ಶೀಘ್ರವಾಗಿ ನೀಡುವ ಉದ್ದೇಶದಿಂದ ಇ-ಆಫೀಸ್ ಜಾರಿ ಮಾಡಲಾಗಿದೆ. ಎಲ್ಲಾ ತಹಶೀಲ್ದಾರ್ ಗಳೂ ಇನ್ಮುಂದೆ ಇ-ಆಫೀಸ್ ಮೂಲಕವೇ ಕಡತಗಳ ವಿಲೇವಾರಿ ನಡೆಸಬೇಕು. ಭೌತಿಕ ಕಡತಗಳನ್ನು ಸ್ವೀಕರಿಸಬಾರದು. ಟಪಾಲು ವಿಭಾಗದಲ್ಲೇ ಇ-ಆಫೀಸ್ ಬಳಕೆಯಾಗಬೇಕು. ಶೇ. 80ಕ್ಕೂ ಹೆಚ್ಚು ಕಡತಗಳನ್ನು ಇ-ಆಫೀಸ್ ಮೂಲಕ ವಿಲೇವಾರಿ ನಡೆಸದ ಅಧಿಕಾರಿಗಳಿಗೆ ನೋಟೀಸ್ ನೀಡಲಾಗುವುದು ಎಂದು ಎಚ್ಚರಿಸಿದರು.

 

ಹುಬ್ಬಳ್ಳಿ ತಾಲೂಕು ಕಚೇರಿಗೆ ದಿಢೀರ್ ಭೇಟಿ, ಪರಿಶೀಲನೆ

ಬೆಳಗಾವಿಗೆ ಆಗಮಿಸುವ ಮಾರ್ಗ ಮಧ್ಯೆ ಬೆಳಗ್ಗೆಯೇ ಹುಬ್ಬಳ್ಳಿಯ ತಾಲೂಕು ಕಚೇರಿ ಹಾಗೂ ಉಪ ನೋಂದಣಾಧಿಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿ ಸಚಿವ ಕೃಷ್ಣ ಬೈರೇಗೌಡ ಅವರು ಹಾಜರಾತಿ ಪುಸ್ತಕ ಪರಿಶೀಲಿಸಿ ಅಧಿಕಾರಿಗಳ ಹಾಜರಾತಿ ಬಗ್ಗೆ ಮಾಹಿತಿ ಪಡೆದರು

ಇ-ಆಫೀಸ್ ಪರಿಣಾಮಕಾರಿ ಬಳಕೆ ಹಾಗೂ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಜನರಿಗೆ ಎಷ್ಟು ಶೀಘ್ರದಲ್ಲಿ ಸೇವೆ ನೀಡಲಾಗುತ್ತಿದೆ ಎಂಬ ಕುರಿತು ಪರಿಶೀಲಿಸಿದರು. ಜನರ ಜೊತೆಗೆ ಮಾತನಾಡುತ್ತಾ, ತಾಲೂಕು ಕಚೇರಿಯ ಸೇವೆ ತೃಪ್ತಿಕರವಾಗಿದೆಯೇ ಎಂದು ಜನರಿಂದಲೇ ಅಭಿಪ್ರಾಯ ಸಂಗ್ರಹಿಸಿದರು. ಅಲ್ಲದೆ, ಸಾರ್ವಜನಿಕ ಶೌಚಾಲಯಕ್ಕೆ ತೆರಳಿ ಸಾರ್ವಜನಿಕರಿಗೆ ಗುಣಮಟ್ಟದ ಶೌಚಾಲಯ ವ್ಯವಸ್ಥೆ ನೀಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕರಾ್ ರಾಜು ಕಾಗೆ, ಕಂದಾಯ ಆಯುಕ್ತರಾದ ಪಿ.‌ಸುನೀಲ್ ಕುಮಾರ್, ರೆವೆನ್ಯೂ ಆಯುಕ್ತರಾದ ಮಂಜುನಾಥ್, ಜಿಲ್ಲಾಧಿಕಾರಿಗಳಾದ ನಿತೇಶ ಕೆ. ಪಾಟೀಲ ಉಪಸ್ಥಿತರಿದ್ದರು.

ಸಭೆಯ ಇನ್ನಷ್ಟು ಮಾಹಿತಿ..

ಕಂದಾಯ ಬಾಕಿ ವಸೂಲಾತಿ ಕಡೆಗೆ ಗಮನಹರಿಸಬೇಕು. ಕಂದಾಯ ನಿರೀಕ್ಷಕರಿಗೂ ಲ್ಯಾಪ್ ಟಾಪ್ ಒದಗಿಸುವ ಮೂಲಕ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಡಿಜಿಟಲೀಕರಣ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡ ತಿಳಿಸಿದರು.

ಇದರಿಂದ ಸಮಯ ಮತ್ತು ಶ್ರಮವನ್ನು ಉಳಿಸುವುದರ ಜತೆಗೆ ಸಾರ್ವಜನಿಕರ ಕೆಲಸಗಳನ್ನು ಕಡಿಮೆ‌ ಸಮಯದಲ್ಲಿ ಮಾಡಿಕೊಡುವುದು ಸಾಧ್ಯವಾಗಲಿದೆ.

ತಹಶೀಲ್ದಾರರು ಹಾಗೂ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ಒತ್ತು ನೀಡಲಾಗಿದೆ.

ಡಿಸೆಂಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ಏಳು ಲಕ್ಷ ರೈತರ ಫ್ರುಟ್ಸ್ ಐಡಿ ಸೃಷ್ಟಿಸಲಾಗಿದೆ.

ಕಂದಾಯ ಇಲಾಖೆ ಜನಪರವಾಗಿ ಕೆಲಸ ಮಾಡುತ್ತಿದೆ ಎಂಬ ಭಾವನೆ ಜನರ ಮನಸ್ಸಿನಲ್ಲಿ ಬರಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು/ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡ ಸೂಚನೆ ನೀಡಿದರು.