Belagavi News In Kannada | News Belgaum

ಕೆಎಸ್‍ಎಂಸಿಎ ಅಧ್ಯಕ್ಷರಾಗಿ ಸತೀಶ್ ಕೃಷ್ಣ ಸೈಲ್ ರವರಿಂದ ಅಧಿಕಾರ ಸ್ವೀಕಾರ

 

ಬೆಂಗಳೂರು: ದೇಶದ ಜಾಹೀರಾತು ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಏಕೈಕ ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಸಂಸ್ಥೆಯ 29ನೇ ಅಧ್ಯಕ್ಷರಾಗಿ ಕಾರವಾರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಸತೀಶ್ ಕೃಷ್ಣ ಸೈಲ್ ರವರು ಪದಗ್ರಹಣ ಮಾಡಿದರು.

ಪದಗ್ರಹಣ ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಿದ್ದಲಿಂಗಪ್ಪ ಬಿ. ಪೂಜಾರಿ ರವರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮುಂದುವರೆದು ಶ್ರೀಯುತರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಈ ಹೆಮ್ಮೆಯ ಸಂಸ್ಥೆಗೆ ನನ್ನನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಕರ್ನಾಟಕ ಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಕರ್ನಾಟಕ ಸರ್ಕಾರವು ಈ ಸಂಸ್ಥೆಯನ್ನು ಸರ್ವರೀತಿಯಲ್ಲೂ ಪ್ರಗತಿಪರವಾಗಿ ಮುನ್ನಡೆಸಲು ಸರ್ಕಾರವು ತಮಗೆ ವಹಿಸಿರುವ ಈ ಜವಾಬ್ದಾರಿಯನ್ನು ನಾನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತೇನೆ ಎಂಬ ಭರವಸೆಯನ್ನು ನೀಡಬಯಸುತ್ತೇನೆ ಎಂದು ಹೇಳಿದರು.

ಸಂಸ್ಥೆಯ ಅಭಿವೃದ್ಧಿಗೆ ಸರ್ಕಾರದಿಂದ ಆಗಬೇಕಾಗಿರುವ ಎಲ್ಲಾ ಸ್ಥರದ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಸುವುದರ ಜೊತೆ ಸರ್ಕಾರದ ಮಟ್ಟದ ಎಲ್ಲಾ ರೀತಿಯ ಬೆಂಬಲವನ್ನು ಪಡೆಯಲು ನಾನು ಅತ್ಯಂತ ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ, ಇದು ನನ್ನ ಗುರಿ ಎಂದು ತಿಳಿಸಿದರು.

ಸಂಸ್ಥೆಯ ಅಭಿವೃದ್ಧಿಗೆ ಅಗತ್ಯವಾದ ವಿಚಾರಗಳ ಬಗ್ಗೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಹಕರುಗಳ ಜೊತೆ ಚರ್ಚಿಸಿ ಅವರುಗಳ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸಿ, ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಯ ಜೊತೆ ಸಮಾಜಮುಖಿ ಕೆಲಸ ಮಾಡುವುದರಲ್ಲಿಯೂ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.
ಕಾರವಾರ, ಅಂಕೋಲಾ ವಿಧಾನಸಭಾ ಕ್ಷೇತ್ರದ ಮುಖಂಡರು, ಅಭಿಮಾನಿಗಳು ಸೇರಿದಂತೆ ಬಹುಸಂಖ್ಯೆಯ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.