Belagavi News In Kannada | News Belgaum

ಘಟಪ್ರಭಾ ನದಿಗೆ ನೀರು ಬಿಡಲು ಒತ್ತಾಯಿಸಿ ರೈತರಿಂದ ರಸ್ತೆ ತಡೆ, ಪ್ರತಿಭಟನೆ

ಸಚಿವ ತಿಮ್ಮಾಪೂರರವರ ಭರವಸೆ ಹಿನ್ನೆಲೆ ಪ್ರತಿಭಟನೆ ಹಿಂಪಡೆದ ರೈತರು

ಮುಧೋಳ : ಘಟಪ್ರಭಾ ನದಿಯಲ್ಲಿ ನೀರು ತಳ ಕಂಡಿದ್ದು, ತಾಲೂಕಿನಾದ್ಯಾಂತ ನೀರಿನ ಸಮಸ್ಯೆ ತೀವ್ರವಾಗಿ ಉಂಟಗಿದೆ. ಈ ಕೂಡಲೇ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ರೈತ ಸಂಘದವರು ಹಾಗೂ ಕಬ್ಬು ಬೆಳೆಗಾರರ ಸಂಘದವರು ತಹಶೀಲದಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಸುಮಾರು ಮೂರು ಘಂಟೆಗಳ ಕಾಲ ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆಯವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ, ಸಾಧ್ಯವಾದಷ್ಟು ಬೇಗನೇ ಘಟಪ್ರಭಾ ನದಿಗೆ ನೀರು ಬಿಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಪೂರ್ತಿಕವಾಗಿ ಹಿಂದೆ ಪಡೆಯಲಾಗಿದೆಯೆಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ದುಂಡಪ್ಪ ಯರಗಟ್ಟಿ ತಿಳಿಸಿದರು.
ಧರಣಿನಿರತ ರೈತರನ್ನು ತಹಶೀಲದಾರ ವಿನೋದ ಹತ್ತಳ್ಳಿ ಭೇಟಿಯಾಗಿ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಕಾರ್ಯದರ್ಶಿ ನಾಗೇಶ ಸೋರಗಾಂವಿ, ಶ್ರೀಕಾಂತ ಕೋಲೂರ, ಸುಗುರಪ್ಪ ಅಕ್ಕಿಮರಡಿ ಮುಂತಾದವರು ಮಾತನಾಡಿ, ಜೀವನದಿ ಘಟಪ್ರಭಾ ನದಿಯಲ್ಲಿ ನೀರಿಲ್ಲದೇ ಜನ-ಜಾನುವಾರುಗಳಿಗೆ, ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಬೆಳೆಗಳು ಒಣಗಿ ಹೋಗುತ್ತಿವೆ. ಹಿಡಕಲ್ ಜಲಾಶಯದಿಂದ ನೀರು ಹರಿಸಲು ಅವಕಾಶವಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಘಟಪ್ರಭಾ ನದಿಗೆ ಈ ಕೂಡಲೇ ನೀರು ಹರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರಮುಖರಾದ ತಿಮ್ಮಣ್ಣ ಬಟಕುರ್ಕಿ, ಲಕ್ಷ್ಮಣ ಚಿನ್ನಣ್ಣವರ, ಮಹೇಶ ಪಾಟೀಲ, ಹಣಮಂತ ಅಡವಿ, ಆನಂದ ಮಾಳಿ, ಕಲ್ಮೇಶ ಹಣಗೋಜಿ, ಕರೆಪ್ಪ ಲಾಯನ್ನವರ, ಮುತ್ತು ಹೊಸಕೋಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್‍ಐ ಅಜೀತ ಹೊಸಮನಿ ನೇತೃತ್ವದಲ್ಲಿ ವ್ಯಾಪಕ ಬಂದೋಬಸ್ತ ಏರ್ಪಡಿಸಲಾಗಿತ್ತು. ರಸ್ತೆ ತಡೆಯಿಂದಾಗಿ ಪ್ರಯಾಣಿಕರು, ಸಾರ್ವಜನಿಕರು ಪರದಾಡುವಂತಾಗಿತ್ತು.