Belagavi News In Kannada | News Belgaum

ಬೃಹತ್‌ ಗಾತ್ರದ ಲಾರಿಗಳನ್ನೂ ಸಲೀಸಾಗಿ ಓಡಿಸುವ ಉತ್ತರ ಕರ್ನಾಟಕದ ಗಟ್ಟಿಗಿತ್ತಿ…..!

ಹುಬ್ಬಳ್ಳಿ: ಪುರುಷರಿಗೇ ಸೀಮಿತವಾದ ಲಾರಿ ಚಾಲನೆ ಕೆಲಸವನ್ನು ಮಹಿಳೆಯೊಬ್ಬರು ಮಾಡುವ ಮೂಲಕ ತಮ್ಮ ಬದುಕು ಕಟ್ಟಿಕೊಂಡು ಎಲ್ಲರ ಹೆಬ್ಬೆರಿಸುವಂತೆ ಮಾಡಿದ್ದಾರೆ..

 

ಹೌದು… ಹುಬ್ಬಳ್ಳಿಯ ಶೋಭಾ ತೋಟದ ಎಂಬ ಮಹಿಳೆ  ಪುರುಷರು ಚಾಲನೆ ಮಾಡುವ ಬೃಹದ್‌ ಆಕಾರದ ವಾಹನಗಳನ್ನು ಲೀಲಾಜಾಲವಾಗಿ ಚಾಲನೆ ಮಾಡುವ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದು, ಅನಾರೋಗ್ಯ ಪೀಡಿತ ತಂದೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

 

ಶೋಭಾ ಅವರು ನಾಲ್ಕು ಚಕ್ರದ ವಾಹನಗಳಿಂದ ಆರಂಭವಾದ ಅವರ ಡ್ರೈವಿಂಗ್‌ ಜರ್ನಿ 20 ಚಕ್ರದ ವಾಹನಗಳನ್ನು ಓಡಿಸುವ ಹಂತಕ್ಕೆ ತಲುಪಿದೆ. ಆರಂಭದಿಂದಲೂ ಚಾಲಕಿಯಾಗಬೇಕು ಎಂಬ ಕನಸು ಹೊಂದಿದ್ದ ಶೋಭಾ ಅವರು ನಾಲ್ಕು ಚಕ್ರದ ಕಾರು ಓಡಿಸುವ ಮೂಲಕ ಚಾಲನಾ ರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಆರಂಭವಾದ ಇವರ ಪಯಣ ಇದೀಗ 20 ಚಕ್ರದ ವಾಹನಗಳನ್ನು ಓಡಿಸುವ ಮಟ್ಟಿಗೆ ಬಂದು ನಿಂತಿದೆ. ಸಾರಿಗೆ ಇಲಾಖೆಯಲ್ಲಿ ತರಬೇತಿ ಪಡೆದ ಶೋಭಾ ಅವರು ಇದೀಗ ಹುಬ್ಬಳ್ಳಿಯಲ್ಲಿ ಲಾರಿ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಮಹಿಳೆಯರು ದ್ವಿಚಕ್ರ ವಾಹನ ಚಾಲನೆಯಲ್ಲಿ ಕಾಣಿಸಿಕೊಂಡರೆ, ನಗರಕ್ಕೆ ಬಂದರೆ ಕೆಲ ಮಹಿಳೆಯರು ಕಾರು ಓಡಿಸುವದನ್ನು ಕಾಣಬಹುದು. ಆದರೆ, ಶೋಭಾ ಅವರು ಭಾರೀ ಗಾತ್ರದ ವಾಹನಗಳನ್ನು ಯಾವುದೇ ಅಳುಕಿಲ್ಲದೆ, ಪುರುಷರಿಗೆ ಕಡಿಮೆ ಇಲ್ಲ ಎನ್ನುವಂತೆ ಚಾಲನೆ ಮಾಡುತ್ತಾರೆ. ಪುರುಷರಂತೆ ಭಾರೀ ಗಾತ್ರದ ವಾಹನ ಏರುವ ಶೋಭಾ ಸ್ಟೇರಿಂಗ್ ಮುಂದೆ ಕುಳಿತರೇ ಮುಗೀತು. ವಾಹನ ತಲುಪಬೇಕಾದ ಜಾಗಕ್ಕೆ ತಲುಪಿಸಿ ಅದರಲ್ಲಿ ಇರುವ ಸಾಮಗ್ರಿಗಳನ್ನು ಇಳಿಸಿ ನಂತರ ತಮ್ಮ ಜಾಗಕ್ಕೆ ಮರುಳುತ್ತಾರೆ..
 

ಶೋಭಾ ಚಾಲನೆ ಕಲಿತಿದ್ದು ಹೇಗೆ? ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದವರಾದ ಶೋಭಾ, ಗ್ರಾಮದಿಂದ ನಗರಕ್ಕೆ ಬಂದು ಕಾರು ಓಡಿಸುವುದನ್ನು ಕಲಿತಿದ್ದಾರೆ. ನಂತರ ಪರಿಚಯದ ಚಾಲಕರ ಸಹಾಯದಿಂದ ದೊಡ್ಡ ದೊಡ್ಡ ವಾಹನಗಳನ್ನು ಓಡಿಸು‌ವುದನ್ನು ಕಲಿತಿದ್ದಾರೆ. ತಮ್ಮ ಚಾಲನಾ ನೈಪುಣ್ಯದಿಂದ ಇದೀಗ ಗೂಡ್ಸ್ ಲಾರಿ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..

ಶೋಭಾ ಅವರು ತಮ್ಮದೇ ಸಂಪಾದನೆಯಲ್ಲಿ ತಂದೆಯನ್ನು ಸಲಹುತ್ತಿದ್ದಾರೆ. ಕುಟುಂಬ ನಿರ್ವಹಣೆಗಾಗಿ ಶೋಭಾ ಮದುವೆ ಕೂಡ ಆಗಿಲ್ಲ. ತಂದೆ ಅನಾರೋಗ್ಯ ಪೀಡಿತರು. ಹೀಗಾಗಿ ಗಂಡು ಮಗನಂತೆ ದುಡಿದು ಮಗನಂತೆ ಮನೆ ಸಲಹುತ್ತಿದ್ದಾರೆ. ಎಸ್ಎಸ್‌ಎಲ್‌ಸಿ ಓದಿರುವ ಶೋಭಾಗೆ ಸಾರಿಗೆ ಇಲಾಖೆಯಲ್ಲಿ ಚಾಲಕಿಯಾಗಬೇಕು ಎನ್ನುವ ಆಸೆ ಇದೆ‌. ಅದಕ್ಕಾಗಿ ನಿರ್ವಾಹಕಿ ಮತ್ತು ಚಾಲಕಿ ಲೈಸೆನ್ಸ್ ಪಡೆದಿದ್ದು, ತಮ್ಮ ಕನಸನ್ನು ನನಸು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ..