Belagavi News In Kannada | News Belgaum

ವಸತಿ ಶಾಲೆಗಳಿಗೆ ಭೇಟಿ ನೀಡಿದ ಜಿಪಂ ಸಿಇಒ ರಾಹುಲ್ ಶಿಂಧೆ..

ಬೆಳಗಾವಿ: ರಾಮದುರ್ಗ ತಾಲೂಕಿನ ಕದಾಂಪುರ ಗ್ರಾಮದ ರಾಣಿ ಚನ್ನಮ್ಮ ವಸತಿ ಶಾಲೆಗೆ ಬುಧವಾರ (ಫೆ.14) ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಶಾಲಾ ಅಭಿವೃದ್ಧಿ ಕಾಮಗಾರಿಗಳಾದ ಶಾಲಾ ಕಂಪೌಂಡ, ಪೇವರ್ಸ್ ಸೇರಿದಂತೆ ಕಾಮಗಾರಿಗಳನ್ನು ವಿಕ್ಷಿಸಿದ ಅವರು ಶಾಲೆಯ ಮುಖ್ಯೋಪಾಧ್ಯಾಯರಿಂದ  ಶಾಲೆಯ ಮಕ್ಕಳ ಹಾಜರಾತಿ ಹಾಗೂ ಶಾಲೆಯ ಮಕ್ಕಳ ಉತ್ತಿರ್ಣ ಬಗ್ಗೆ ಮಾಹಿತಿ ಪಡೆದರು.

ನಂತರ ಜಿಪಂ ಸಿಇಒ ರಾಹುಲ್ ಶಿಂಧೆ ಅವರು, ಬಟಕುರ್ಕಿ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಗೆ ಬೇಟಿ ನೀಡಿ ಶಾಲೆಯ ಮಕ್ಕಳ  ಸಂಖ್ಯೆ ಬಗ್ಗೆ ಮಕ್ಕಳ ಪ್ರಗತಿ ಬಗ್ಗೆ  ಪರಿಶೀಲಿಸಿದರು. ಈ ವೇಳೆ ಶಾಲೆ ಮುಖ್ಯೋಪಾಧ್ಯಾಯರಿಂದ ಕುಡಿಯುವ ನೀರಿನ ಪೂರೈಕೆ ಬಗ್ಗೆ ಮಾಹಿತಿ ಪಡೆದ ಅವರು ವಾರಕ್ಕೆ ಎರಡು ಬಾರಿ 2500 ಲೀಟರ್ ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಯಾವುದೇ ರೀತಿಯ ನೀರಿನ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಲು ಸೂಚಿಸಿದರು.

ನಂತರ ರಾಮದುರ್ಗ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಶೀಲನಾ ಸಭೆ ನಡೆಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಅವರು,  ಬರಗಾಲದ ಬೇಸಿಗೆ ದಿನಗಳು ಪ್ರಾರಂಭವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸ್ಥಳೀಯ ಮಟ್ಟದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ಮಳೆಗಾಲದವರೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಸೂಚಿಸಿದರು.
ಗ್ರಾಮಗಳಲ್ಲಿ ಉದ್ಭವಿಸುವ ನೀರಿನ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು. ಖಾಸಗಿ ಬೋರ್ ವೆಲ್ ಗಳನ್ನು ಗುರುತಿಸಿ ಸಾರ್ವಜನಿಕರಿಗೆ ನೀರಿನ ವ್ಯವಸ್ಥೆ ಮಾಡಬೇಕು. ಅಗತ್ಯ ಬಿದ್ದರೆ ಟ್ಯಾಂಕರ್ ಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಬರಗಾಲದ ಹಿನ್ನೆಲೆಯಲ್ಲಿ ಮನರೇಗಾ ಕೂಲಿಕಾರರಿಗೆ ನಿರಂತರ ಕೆಲಸ ಒದಗಿಸಬೇಕು. ಕೂಲಿಕಾರರು ನರೇಗಾ ಯೋಜನೆಯಿಂದ ವಂಚಿತರಾಗದಂತೆ ಹಾಗೂ ವಲಸೆ ಹೋಗದಂತೆ ನೋಡಿಕೊಳ್ಳಬೇಕು. ಕೂಲಿಕಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಮನೆ ಮನೆಗೆ ನೀರು ಪೂರೈಕೆ ಮಾಡಬೇಕು. ಅದೇ ರೀತಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ, ಗ್ರಾಮೀಣ ಕುಡಿಯುವ ನೀರಿ ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಕಾರಿ ಅಭಿಯಂತರರಾದ ಆನಂದ ಬನಗಾರ, ತಾಪಂ. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಸಂಗನಗೌಡ ಹಂದ್ರಾಳ,  ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಅಪ್ಪಯಪ್ಪಾ ಕುಂಬಾರ, ಆರ್.ಡಬ್ಲೂ,ಎಸ್ ಸಹಾಯಕ ಅಭಿಯಂತರರು ಶ್ರೀನಿವಾಸ ವಿಶ್ವಕರ್ಮ, ಬಟಕುರ್ಕಿ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಂಶುಪಾಲರು ಗೌಸಾಬ ಮುದಕವಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.