Belagavi News In Kannada | News Belgaum

ಸಾಹಿತಿ ಹಸನ್ ನಯೀಂ ಸುರಕೋಡ ಅವರಿಗೆ “ಸಂಗೊಳ್ಳಿ ರಾಯಣ್ಣ” ಪ್ರಶಸ್ತಿ ಪ್ರದಾನ

 

ಬೆಳಗಾವಿ, ಫೆ‌.15  : ಗಡಿನಾಡಿನ ಗಟ್ಟಿ ಪ್ರತಿಭೆ ಎಂದೇ ಗುರುತಿಸಲಾಗುವ ಕೇಂದ್ರ ಸಾಹಿತ್ಯ ಅಕಾಡೆಮಿ‌ ಪ್ರಶಸ್ತಿ ಪುರಸ್ಕೃತರಾಗಿರುವ ಹಿರಿಯ ಸಾಹಿತಿ ಹಸನ್ ನಯೀಮ ಸುರಕೋಡ ಅವರ ಸಾಹಿತ್ಯ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಸರಕಾರವು 2021-22ನೇ ಸಾಲಿನ “ಸಂಗೊಳ್ಳಿ ರಾಯಣ್ಣ” ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳು ವಿವಿಧ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಸಾಹಿತಿ ಹಸನ್ ನಯೀಂ ಸುರಕೋಡ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಎಚ್.ಚನ್ನೂರ ಹಾಗೂ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ರಾಮದುರ್ಗದ ಕುಂಬಾರಗಿರಿಯಲ್ಲಿರುವ ಸುರಕೋಡರ ನಿವಾಸಕ್ಕೆ ತೆರಳಿ “ಸಂಗೊಳ್ಳಿ ರಾಯಣ್ಣ” ಪ್ರಶಸ್ತಿಯನ್ನು ಪ್ರದಾನ‌ ಮಾಡಿ ಫಲ-ಪುಷ್ಪ ಹಾಗೂ ಐದು ಲಕ್ಷ ರೂಪಾಯಿ ಚೆಕ್ ನೀಡಿ ಸನ್ಮಾನಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಹಸನ್ ನಯೀಂ ಸುರಕೋಡ ಅವರು, ಅನಾರೋಗ್ಯ ಕಾರಣದಿಂದ ಬೆಂಗಳೂರಿಗೆ ತೆರಳಿ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ತಮ್ಮ ಸಾಹಿತ್ಯ ಕೃಷಿಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಕರ್ನಾಟಕ ಸರಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಎಚ್.ಚನ್ನೂರ ಹಾಗೂ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಎಸ್.ಜಿ.ಚಿಕ್ಕನರಗುಂದ, ಡಾ.ಎ.ಬಿ.ವಗ್ಗರ, ಪಾಂಡುರಂಗ ಜಟಗನ್ನವರ, ಎಂ.ಬಿ.ಪಾಟೀಲ, ಡಾ.ಡಿ.ಡಿ.ಮುಜಾವರ, ಸಂತೋಷ ವಾಲಿ, ಆರ್.ಕೆ.ಬಿಕ್ಕನ್ನವರ, ತುಕಾರಾಮ್ ಕರದಿನ ಹಾಗೂ ಸುರಕೋಡ ಅವರ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಸನ್ ನಯೀಂ ಸುರಕೋಡ ಅವರು ಹಿಂದಿ‌ ಹಾಗೂ ಇಂಗ್ಲಿಷ್ ಭಾಷೆಯ ಅನೇಕ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇಂಗ್ಲಿಷ್, ಕನ್ನಡ, ಹಿಂದಿ ಉರ್ದು ಭಾಷೆಗಳಲ್ಲಿ ಪರಿಣಿತಿ ಹೊಂದಿರುವ ಅವರು, “ರಶೀದಿ ಟಿಕೆಟು” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಹಾಗೂ ಗೌರವಗಳಿಗೆ ಪಾತ್ರರಾಗಿದ್ದಾರೆ.