Belagavi News In Kannada | News Belgaum

ಶ್ರೀ ಸಂತ ಸೇವಾಲಾಲ್ ಅವರ 285ನೇ ಜಯಂತಿ ಉತ್ಸವ -2024

ಸಂತ ಸೇವಾಲಾಲ್ ತತ್ವಗಳನ್ನು ಅರಿತುಕೊಂಡು ಬದುಕಬೇಕು: ಅನಂತಕುಮಾರ್ ಬ್ಯಾಕೋಡ

ಬೆಳಗಾವಿ, ಫೆ.15: ಶ್ರೀ ಸೇವಾಲಾಲ್ ಅವರು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನ ಬೆಳಕು ನೀಡಿದ್ದಾರೆ. ಸಮಾನ ಸಮಾಜ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಿಸಲು ಪ್ರೇರೇಪಿಸಿದರು. ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿ ದೀಪವಾಗಬೇಕು ಎಂಬುದಾಗಿ ಜಗತ್ತಿಗೆ ಸಂದೇಶ ಸಾರಿದ್ದಾರೆ ಎಂದು ಅನಂತಕುಮಾರ ಬ್ಯಾಕೋಡ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ (ಫೆ.15) ನಡೆದ ಶ್ರೀ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂತರುಗಳಲ್ಲಿ ಲಂಬಾಣಿ ಸಮುದಾಯದ ಆರಾಧ್ಯ ದೈವ ಸದ್ಗುರು ಸಂತ ಸೇವಾಲಾಲ್ ಮಹಾರಾಜರು ಕೂಡ ಒಬ್ಬರು. ಇಂತಹ ಮಹಾನ್ ಸಂತ ನಮ್ಮ ನಾಡಿನಲ್ಲಿ ನೆಲೆಸಿದ್ದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.

ಹಲವು ಮಹನೀಯರ ವಿಚಾರಧಾರೆಗಳನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಗಳು ಅರ್ಥಪೂರ್ಣವಾಗುತ್ತವೆ. ಇಂತಹ ಮಹನೀಯರನ್ನು ಒಂದು ಜಾತಿ ಅಥವಾ ಧರ್ಮಕ್ಕೆ ಮಿಸಲಿಡದೇ ಸರ್ವ ಧರ್ಮದವರು ಸಮಾನರು ಎಂದು ಅನಂತಕುಮಾರ್ ಬ್ಯಾಕೋಡ ಹೇಳಿದರು.

ಈ ವೇಳೆ ಉಪನ್ಯಾಸ ನೀಡಿದ ಧಾರವಾಡ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆರ್. ರಾಮಾ ನಾಯ್ಕ ಶ್ರೀ ಸಂತ ಸೇವಾಲಾಲ್ ಬಂಜಾರ ಸಮುದಾಯದ ಸಮಾಜ ಸುಧಾರಕ ಮತ್ತು ಆಧ್ಯಾತ್ಮಿಕ ಗುರು ಎಂದು ಪರಿಗಣಿಸಲಾಗಿದೆ. ಸತ್ಯ, ಅಹಿಂಸೆ ತತ್ವಗಳನ್ನು ಸಾರಿದರು.

ತಮ್ಮ ಜೀವನದ ಅನುಭವವನ್ನು ತತ್ವಗಳ ಮೂಲಕ ಜನರಿಗೆ ಪರಿಚಯಿಸಿ, ಅಜ್ಞಾನವನ್ನು ದೂರ ಮಾಡಿದವರು.ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ ಪ್ರಾಮಾಣಿಕರಾಗಿ ಜೀವಿಸಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿರಿ ಎಂದು ಸಮಾಜಕ್ಕೆ ಸಂದೇಶ ಸಾರಿದ್ದಾರೆ ಇವರ ಸಂದೇಶ ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಬಂಜಾರ ಸಮಾಜದ ಅಧ್ಯಕ್ಷರಾದ ಮಾನಪ್ಪ ರಾಠೋಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ್ ತಳವಾರ, ಮುಖಂಡರಾದ ಮಲ್ಲೇಶ ಮಲ್ಲೇಶ ಚೌಗುಲಾ, ಕಿರಣ ನಾಯ್ಕ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.