Belagavi News In Kannada | News Belgaum

ಗ್ರಾಮ ಪಂಚಾಯತಿಗಳಲ್ಲಿ ಸಂವಿಧಾನಜಾಥ ಕ್ಕೆ ಅದ್ದೂರಿ ಸ್ವಾಗತ

ಬೆಳಗಾವಿ,ಫೆ.15 : ಸಂವಿಧಾನದ ಮೌಲ್ಯ ಮತ್ತು ಆಶಯಗಳನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ರಥಗಳೆರೆಡು ಏಕ ಕಾಲಕ್ಕೆ ಎರಡು ಮಾರ್ಗದಲ್ಲಿ ಸಂಚರಿಸುವದರ ಮೂಲಕ ಸಂವಿಧಾನ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ.
ಸದರಿ ಕಾರ್ಯಕ್ರಮವನ್ನು ಗಣರಾಜ್ಯೋತ್ಸವದ ದಿನದಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ರವರಿಂದ ಚಾಲನೆಗೊಂಡ ಸ್ಥಬ್ದಚಿತ್ರದ ಮೆರವಣಿಗೆಯು ಜಿಲ್ಲಾದ್ಯಾಂತ ಎರಡು ಮಾರ್ಗಗಳ ಮೂಲಕ ಸಂಚರಿಸಿತು.
ಮೊದಲನೆ ಮಾರ್ಗದರಥವು ಬೆಳಗಾವಿ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಬಾಗ ತಾಲೂಕುಗಳಲ್ಲಿ ಹಾಗೂ ಎರಡನೇ ಮಾರ್ಗದರಥವು ಗೋಕಾಕ, ಮೂಡಲಗಿ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಚನ್ನಮ್ಮನ ಕಿತ್ತೂರ, ಖಾನಾಪೂರ ತಾಲೂಕುಗಳಿಗೆ ಸ್ಥಬ್ದ ಚಿತ್ರಗಳ ಮೆರವಣಿಗೆಯು ಸಂಚರಿಸುತ್ತಿದೆ.
ಫೆ. 15 ರಂದು ಮೊದಲ ಮಾರ್ಗದರಥವು ಅಥಣಿ ತಾಲೂಕಿನ ಗುಂಡೆವಾಡಿ, ಪಾರ್ಥನಹಳ್ಳಿ, ಚಮಕೇರಿ, ಅಡಹಳ್ಳಿ, ಹೋಹಳ್ಳಿ, ಕಕಮರಿ, ಕೊಟ್ಟಲಗಿ, ಕನ್ನಲಾ, ತೇಲಸಂಗ, ಅರಟಾಳ ಮತ್ತು ಐಗಳಿ ಗ್ರಾಮ ಪಂಚಾಯತಿ ಮೂಲಕ ಸಂಚರಿಸಿ ಫೆ.16 ರಂದು ಅಥಣಿ ತಾಲೂಕಿನ ಎಲಿ ಹಡಗಲಿ, ಬಡಚಿ, ಕಟಗೇರಿ, ಕೊಕಟನೂರ, ಸುಟ್ಟಟ್ಟಿ, ಜಂಬರವಾಡಿ, ನಂದಗಾಂವ, ಶಿರಹಟ್ಟಿ, ಸವದಿ, ರಡ್ಡೇರಟ್ಟಿ ಮತ್ತು ನಾಗನೂರ ಪಿ.ಕೆ ಗ್ರಾಮ ಪಂಚಾಯತಿಗಳಿಗೆ ತೆರಳಲಿದೆ.
ಅದೇ ರೀತಿಯಾಗಿ ಎರಡನೇ ಮಾರ್ಗದ ರಥವು ಫೆ.15 ರಂದು ಕಿತ್ತೂರ ತಾಲೂಕಿನ ಹಿರೇನಂದಿಹಳ್ಳಿ, ಕಲಬಾವಿ, ತುರಮುರಿ, ಹುಣಸಿಕಟ್ಟಿ, ಕಾದ್ರೋಳಿ, ಎಂ.ಕೆ.ಹುಬ್ಬಳಿ, ದಾಸ್ತಿಕೊಪ್ಪ, ವೀರಾಪೂರ, ಡಿ. ಶೀಗೇಹಳ್ಳಿ ಮತ್ತು ಅಂಬಡಗಟಿ ಗ್ರಾಮ ಪಂಚಾಯತಿಗಳ ಮೂಲಕ ಸಂಚರಿಸಿ ಫೆ.16 ರಂದು ಕಿತ್ತೂರ ತಾಲೂಕಿನ ತಿಗಡೊಳ್ಳಿ, ಕಿತ್ತೂರ, ಕುಲವಳ್ಳಿ, ದೇಗಾಂವ್, ಬೈಲೂರ ಹಾಗೂ ಖಾನಾಪೂರ ತಾಲೂಕಿನ ಕೇರವಾಡ, ಲಿಂಗನಮಠ ಮತ್ತು ಗೊದೋಳಿ ಗ್ರಾಮ ಪಂಚಾಯತಿಗಳಿಗೆ ತೆರಳಲಿದೆ.
ಸಂವಿಧಾನದ ಮೂಲ ಆಶಯಗಳಾದ ಸರ್ವಧರ್ಮಗಳ ಸಮಭಾವ, ಸಮಸ್ತ ನಾಗರೀಕರಿಗೆ ಸಾಮಾಜಿಕ, ಆರ್ಥಿಕ ಮತ್ತುರಾಜಕೀಯ ನ್ಯಾಯಕುರಿತು, ವಿಚಾರ, ಅಭಿವ್ಯಕ್ತಿ, ವಿಶ್ವಾಸ ಮತ್ತು ಧರ್ಮ ಶೃದ್ಧೆಯ ಸ್ವಾತಂತ್ರ್ಯತೆಯ ಅರಿವು, ಸ್ಥಾನಮಾನ ಹಾಗೂ ಅವಕಾಶಗಳ ಸಮಾನತೆಯನ್ನು ದೊರಕಿಸಲು, ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಬಲಗೊಳಿಸಲು, ಎಲ್ಲರಲ್ಲೂ ಭಾತೃತ್ವ ಭಾವನೆಯನ್ನು ವೃದ್ಧಿಗೊಳಿಸಲು ಈ ಎಲ್ಲಾ ಆಶಯಗಳನ್ನು ಪ್ರತಿ ಮನೆ-ಮನೆಗಳಿಗೂ, ಮನ-ಮನಗಳಿಗೂ ತಲುಪಿಸುವದು ಈ ಕಾರ್ಯಕ್ರಮದ ಮೂಲ ಧ್ಯೇಯವಾಗಿದೆ.
ಸಂವಿಧಾನಜಾಗೃತಿಜಾಥದಲ್ಲಿಅಧಿಕ ಸಂಖ್ಯೆಯಲ್ಲಿಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು,ಸ್ವ-ಸಹಾಯ ಸಂಘಗಳು, ಮತ್ತು ಸಾರ್ವಜನಿಕರು ಭಾಗವಹಿಸುವಿಕೆಯಿಂದ“ಸಂವಿಧಾನಜಾಗೃತಿಜಾಥ” ವನ್ನು ಯಶಸ್ವಿಗೊಳಿಸಲಾಯಿತು.

 

ಲೇಖನ:

ಸಂವಿಧಾನ ಪೂರ್ವ ಪೀಠಿಕೆಯಲ್ಲಿನ ನಾವು : ಡಾ. ನವೀನ್ ಮಂಡಗದ್ದೆ

ಬೆಳಗಾವಿ,ಫೆ.15 : ಸಂವಿಧಾನ ಪೂರ್ವ ಪೀಠಿಕೆಯಲ್ಲಿನ “ನಾವು” ಎನ್ನುವ ಪದವು ಸಂವಿಧಾನದ ಸಂಪೂರ್ಣ ಆಶಯವನ್ನು ಒಳಗೊಂಡಿದೆ. ಇದು ನಾವು, ನಮಗಾಗಿ, ನಮ್ಮಿಂದ, ನಮಗೆಲ್ಲರಿಗೂ, ನಾವೆಲ್ಲರೂ ಎನ್ನುವ ಅರ್ಥವನ್ನು ಕೊಡುತ್ತದೆ. ಸಾಂವಿಧಾನಿಕವಾಗಿ ಮತ್ತು ನಿಸರ್ಗ ಸಹಜವಾದ ಸೌಹಾರ್ದ ಗುಣವನ್ನು ಇದು ಪ್ರತಿನಿಧಿಸುತ್ತದೆ. ಹಿಂದೂವೊಬ್ಬ “ನಾವು” ಎಂದು ಉಚ್ಚರಿಸಿದರೆ ಅದರಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ ಎಲ್ಲರನ್ನು ಒಳಗೊಳ್ಳುತ್ತಾನೆ.
ಬೇರೆ ಸಮುದಾಯಗಳು “ನಾವು” ಎಂದು ಉಚ್ಚರಿಸಿದಾಗಲೂ ಕೂಡ ಇದೇ ಧ್ವನಿಯನ್ನು ಒಳಗೊಳ್ಳಬೇಕೆಂಬುದು ಇದರ ಆಶಯವಾಗಿದೆ. ಇದರ ಜೊತೆ ಯಾಕಾಗಿ “ ನಾವು” ಎಂದು ಕೂಡ ಈ ಶಬ್ದ ಹೇಳುತ್ತದೆ. ದೇಶದ ಸಮಗ್ರತೆಯನ್ನು ಕಾಪಾಡುವುದಕ್ಕೆ ನಾವು, ನಮ್ಮ ಜೊತೆಗೆ ವಾಸಿಸುವ ಪ್ರಜೆಯೊಬ್ಬನಿಗೆ ಅವನು ಯಾವುದೇ ಭಯವಿಲ್ಲದ ಬದುಕುವ ವಾತಾವರಣವನ್ನು ಸೃಷ್ಟಿಮಾಡುವುದಕ್ಕಾಗಿ ನಾವು, ಪ್ರಜಾಪ್ರಭುತ್ವ ಮಾದರಿಯಲ್ಲಿ ನಮಗೆ ಬೇಕಾದ ರಾಜಕೀಯ ಶಕ್ತಿಯನ್ನು ಪಡೆಯುವುದಕ್ಕಾಗಿ ನಾವು, ದೇಶದಲ್ಲಿ ಯಾವುದೇ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ನೊಂದವರ ಜೊತೆಯಲ್ಲಿ ಇರುತ್ತೇವೆ ಎನ್ನುವ ಭರವಸೆಯ ನಾವು, ದಮನಿತ ಸಮುದಾಯಗಳ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ಅವರಿಗೆ ಕಾನೂನು ರೀತಿಯ ಬೆಂಬಲವನ್ನು ನೀಡಲು ನಾವೆಲ್ಲರೂ ಸೇರಿ ಈ ದೇಶದ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎನ್ನುವ ವಾಕ್ಯ ಸಂವಿಧಾನಿಕ ಆಶಯಗಳಿಗೆ ಧಕ್ಕೆ ಬಂದಾಗ ಸಂವಿಧಾನದ ಪರವಾಗಿ ನಿಲ್ಲುತ್ತೇವೆ ಎನ್ನುವುದನ್ನು ಸೂಚಿಸುತ್ತದೆ. ನಾವು ಸಂವಿಧಾನದ ಪರವಾಗಿ ಇರುವುದೆಂದರೆ ಈ ನೆಲದ ಕಾನೂನು ಗೌರವಿಸುವುದಾಗಿದೆ. “ನಾವು” ಕಾನೂನನ್ನು ಗೌರವಿಸುತ್ತೇವೆ ಎಂದರೆ ಕಾನೂನು ಯಾವುದನ್ನು ಅಪರಾಧ, ಹಿಂಸೆ ಎಂದು ಗುರುತಿಸುತ್ತದೋ ಅಂತಹ ಕೃತ್ಯದಲ್ಲಿ ಭಾಗಿಯಾಗದೇ ಇರುವುದು.
ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಹೇಳಿದ ಇತರ ಶಬ್ದಗಳು ಕೂಡ “ ನಾವು” ಎಂಬುದಕ್ಕೆ ಬೆಂಬಲವನ್ನು ಸೂಚಿಸುತ್ತವೆ. ಸಾರ್ವಭೌಮ ಎಂದರೆ ನಮ್ಮ ದೇಶದ ಆಂತರಿಕ ವಿಷಯದಲ್ಲಿ ಬೇರೆ ಯಾವುದೇ ದೇಶಗಳು ತಲೆ ಹಾಕದಂತೆ “ನಾವು” ನೋಡಿಕೊಳ್ಳಬೇಕು. ದೇಶದ ಕೆಲವು ಗೌಪ್ಯ ಮಾಹಿತಿಗಳು ಸೋರಿಕೆಯಾಗದಂತೆ ನೋಡಿಕೊಳ್ಳಬೇಕು. “ನಾವು” ಈ ದೇಶವನ್ನು ಒಂದು ಸಮಾಜವಾದಿ ಹಿನ್ನೆಲೆಯ ದೇಶವಾಗುವಂತೆ ಮಾಡಬೇಕು. ದೇಶದ ಪ್ರತಿಯೊಬ್ಬ ಪ್ರಜೆಯು ಕನಿಷ್ಟ ಎರಡು ಹೊತ್ತು ಹೊಟ್ಟೆ ತುಂಬಾ ಊಟ ಮಾಡುವ ಅವಕಾಶವನ್ನು ಕಲ್ಪಿಸಬೇಕು. ಸರ್ಕಾರ ಇಂತಹ ಯೋಜನೆಗಳನ್ನು ಜಾರಿಗೆ ತಂದಲ್ಲಿ ಅದಕ್ಕೆ ಬೆಂಬಲ ಸೂಚಿಸುವುದು “ನಾವು” ಮಾಡಬೇಕಾದ ಕರ್ತವ್ಯವಾಗಿರುತ್ತದೆ. ಭಾರತದ ಪ್ರಜೆಗಳಾದ “ನಾವು” ಧರ್ಮ ನಿರಪೇಕ್ಷತೆಯ ಭಾವವನ್ನು ಹೊಂದಿರಬೇಕು ಎಂದು ಸಂವಿಧಾನ ಬಯಸುತ್ತದೆ.
ನಾವು ಭಾರತೀಯರು ಎನ್ನುವ ಭಾವನೆ ನಮ್ಮಲ್ಲಿ ಬರಬೇಕು, ಈ ದೇಶದಲ್ಲಿ ವಾಸಿಸುವವರೆಲ್ಲ ನನ್ನವರು ಎನ್ನುವ ಭಾವನೆ ಬಂದರೆ ದೇಶ ಧರ್ಮ ನಿರಪೇಕ್ಷವಾಗುತ್ತದೆ. ಇದನ್ನು ಜಾತ್ಯಾತೀತ ಪ್ರಜ್ಞೆ ಎಂದು ಕರೆಯಬೇಕಾಗುತ್ತದೆ. ಪ್ರಜಾಸತ್ತಾತ್ಮಕ ಗಣರಾಜ್ಯವೆಂದರೆ ಈ ದೇಶದ ಒಕ್ಕೂಟ ವ್ಯವಸ್ಥೆ. ಇದಕ್ಕೆ ನಾವು ಬೆಂಬಲವನ್ನು ಸೂಚಿಸಬೇಕು. ಪ್ರಜೆಗಳ ಬೆಂಬಲವನ್ನು ಪಡೆದ ಒಕ್ಕೂಟ ವ್ಯವಸ್ಥೆಯು ಇದರ ಘನತೆಯನ್ನು ಕಾಪಾಡಿಕೊಂಡು ಪ್ರಜೆಗಳ ಆಶಯವನ್ನು ಈಡೇರಿಸಬೇಕು.
ಸಂವಿಧಾನವು ಭಾರತದ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಉಪಾಸನೆಯ ಸ್ವಾತಂತ್ರ್ಯವನ್ನು ನೀಡಿದೆ. ಇದನ್ನು “ನಾವು” ಗೌರವಿಸಬೇಕಾಗಿದೆ. ಸಾಮಾಜಿಕವಾಗಿ ಒಂದು ಪರಿಸರದಲ್ಲಿ ಬದುಕುತ್ತಿರುವ ಒಬ್ಬ ವ್ಯಕ್ತಿಗೆ ನಾನು ಇಲ್ಲಿ ಯಾವುದೇ ತೊಂದರೆ ಇಲ್ಲದೆ ಬದುಕಬಲ್ಲೆ ಎನ್ನುವ ಮಾನಸಿಕ ನೆಮ್ಮದಿಯನ್ನು “ನಾವು” ಸೃಷ್ಟಿಸಬೇಕು. ದೇಶದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿಯು ಕೂಡ ತನ್ನ ಜೀವನೊಪಾಯಕ್ಕಾಗಿ ಆರ್ಥಿಕ ಸಬಲತೆಯನ್ನು ತಂದುಕೊಡುವ ಯಾವುದೇ ಕೆಲಸವನ್ನು ಮಾಡಬಹುದು. ಇದನ್ನು “ನಾವು” ಬೆಂಬಲಿಸುವಂತೆ ಇರಬೇಕು. ಈ ಚಟುವಟಿಕೆಯು ಕಾನೂನಿನ ಚೌಕಟ್ಟಿನಲ್ಲಿ ಇರಬೇಕು. ಅದಕ್ಕೆ ಸರ್ಕಾರ ವಿಧಿಸುವ ತೆರಿಗೆಗಳನ್ನು ಪಾವತಿಸಿ ದೇಶದ ಅಭಿವೃದ್ದಿಯಲ್ಲಿ “ನಾವು” ಪಾಲ್ಗೊಳ್ಳಬೇಕು. ಪ್ರಪಂಚದ ಬೇರೆ ಭಾಗಗಳಲ್ಲಿ ಹುಟ್ಟಿದ ಧರ್ಮಗಳಲ್ಲಿ ಬಹುತೇಕ ಧರ್ಮಗಳು ಭಾರತದಲ್ಲಿ ಇವೆ. ಅವು ಅವುಗಳದೇ ಆದ ಆಚರಣೆಯ ಕ್ರಮಗಳನ್ನು ಹೊಂದಿವೆ. ಅವುಗಳನ್ನು ಗೌರವಿಸುವುದು “ನಾವು” ಮಾಡಬೇಕಾದ ಕರ್ತವ್ಯವಾಗಿದೆ. ಇಲ್ಲಿ ಗೌರವಿಸುವುದೆಂದರೆ ಪರಸ್ಪರ ಗೌರವಿಸಿಕೊಳ್ಳುವುದು.
ಈ ದೇಶದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ಕೂಡ ಗೌರವಕ್ಕೆ ಅರ್ಹನಾದವನೆ. ವೈಯಕ್ತಿಕ ನೆಲೆಯಲ್ಲಿ ಅವನಿಗೆ ಗೌರವವಿರುವಂತೆ ಸಾಮಾಜಿಕ ನೆಲೆಯಲ್ಲಿ ಕೂಡ ಗೌರವ ಇರಬೇಕು. ದಮನಿತರು, ಅಲ್ಪಸಂಖ್ಯಾತರು, ಸ್ತ್ರೀಯರು, ಲೈಂಗಿಕ ಅಲ್ಪಸಂಖ್ಯಾತರು, ಬಡವರು, ಕೂಲಿಕಾರ್ಮಿಕರು ಎನ್ನುವ ವಿಂಗಡಣೆಯನ್ನು ಮೀರಿ ಎಲ್ಲರಿಗೂ “ನಾವು” ಗೌರವ ಕೊಡಬೇಕು.
ಸಂವಿಧಾನದಲ್ಲಿ ಇರುವ ಪರಿಚ್ಚೇದಗಳು, ವಿಧಿಗಳು, ಹಕ್ಕುಗಳು, ಕರ್ತವ್ಯಗಳು ಎಲ್ಲವೂ ಕೂಡ “ ನಾವು” ಎಂಬುದನ್ನೆ ಕೇಂದ್ರೀಕರಿಸಿವೆ. ಏಕೆಂದರೆ ಸಂವಿಧಾನಿಕ ಸಮಷ್ಟಿ ಪ್ರಜ್ಞೆಯನ್ನು ಹೊಂದಿರುವಂತಹದ್ದು. ಸಂವಿಧಾನದ ಹಕ್ಕುಗಳು ನಮಗಾಗಿ ಇರುವಂತಹದ್ದು, ಸಂವಿಧಾನದ ಕರ್ತವ್ಯಗಳನ್ನು “ನಾವು” ಪಾಲಿಸಬೇಕು. “ ನಾವು” ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರದ ಘನತೆಯನ್ನು ಎತ್ತಿಹಿಡಿಯುವ ಸಂಗತಿಗಳನ್ನು ಗೌರವಿಸಬೇಕು, ಅದರ ಘನತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ನಮ್ಮ ಸುತ್ತಲಿನ ಪ್ರಾಚೀನ ಸ್ಮಾರಕಗಳು, ಪರಿಸರ, ಜಲಮೂಲಗಳು, ಜೀವವೈವಿಧ್ಯ ಎಲ್ಲವನ್ನು ನಾವು ಕಾಪಾಡಿಕೊಳ್ಳಬೇಕು.
ಸಂವಿಧಾನದ ರಚನೆಯಾದ ಕಾಲದ ಜನರು “ನಾವು” ಎಂದು ಭಾವಿಸುವುದಕ್ಕೂ ವರ್ತಮಾನದ ಜನರು “ನಾವು” ಎಂದು ಭಾವಿಸುವುದಕ್ಕೂ ವ್ಯತ್ಯಾಸಗಳಿವೆ. ಆಯಾ ಕಾಲದ ಜನರು ಎದುರಿಸುವ ಸವಾಲುಗಳಿಗೆ ಸಂವಿಧಾನದಲ್ಲಿ ಏನು ಪರಿಹಾರವಿದೆ ಹುಡುಕುತ್ತಾರೆ.
ಸರ್ಕಾರವು ಸಂವಿಧಾನದ ಕುರಿತಂತೆ ಮುಂದಾಳತ್ವ ವಹಿಸಿ ಇಷ್ಟೊಂದು ಸಕ್ರಿಯವಾಗಿರುವುದು ನನಗೆ ಸಂತಸ ತಂದಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ ಅವರನ್ನು ಅಭಿನಂದಿಸುತ್ತೇನೆ.