Belagavi News In Kannada | News Belgaum

ಸಮಾಜದ ಪ್ರತಿಯೊಂದು ವೃತ್ತಿಯನ್ನು ಗೌರವದಿಂದ ಕಾಣಬೇಕು: ಡಾ.ಸಿ.ಕೆ.ನಾವಲಗಿ

ಸವಿತಾ ಮಹರ್ಷಿ ಜಯಂತಿ ಉತ್ಸವ -2024

ಬೆಳಗಾವಿ,ಫೆ.16 : ಆದಿ ಕಾಲದಿಂದಲೂ ಸಮಾಜ ಸುಧಾರಣೆ ಶ್ರಮಿಸಿದ ಮಹನೀಯರ ಕಾರ್ಯಗಳನ್ನು ನಾವು ಇಂದಿಗೂ ಸ್ಮರಿಸುತ್ತೇವೆ. ವೃತ್ತಿಯಲ್ಲಿ ಮೇಲು ಕೀಳು ಎನ್ನದೆ ಎಲ್ಲ ವೃತ್ತಿಗಳನ್ನು ಗೌರವದಿಂದ ನೋಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವಂತಾಗಬೇಕು. ಸವಿತಾ ಸಮಾಜದವರು ಶೆಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಬೇಕು ಎಂದು ಡಾ. ಸಿ. ಕೆ. ನಾವಲಗಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶುಕ್ರವಾರ (ಫೆ.16) ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸವಿತಾ ಮಹರ್ಷಿಯು ರಥಸಮ್ತಿಯ ದಿನ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದರು. ಶಿವನ ಎಡಗಣ್ಣನ್ನು ಚಂದ್ರನಿಗೆ ಬಲಗಣ್ಣನ್ನು ಸೂರ್ಯನಿಗೆ ಹೊಲಿಸಲಾಗುತ್ತದೆ. ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ಸಮಾಜದ ನಂಬಿಕೆಯಾಗಿದೆ.
ಪುರಾಣದ ಪ್ರಕಾರ ಶಿವನು ಅತಿಯಾಗಿ ಬೆಳೆದ ಕೂದಲುಗಳಿಂದ ತೊಂದರೆ ಅನುಭವಿಸುತ್ತಿದ್ದಾಗ ಪಾರ್ವತಿ ದೇವಿಯ ಸಲಹೆಯಂತೆ ತನ್ನ ಎಡಗಣ್ಣಿನಿಂದ ಕ್ಷೌರಿಕರ ಮೂಲಪುರುಷ ಸವಿತಾ ಮಹರ್ಷಿಯನ್ನು ಸೃಷ್ಠಿ ಮಾಡಲಾಯಿತು ಎಂದು ಹೇಳಲಾಗುತ್ತದೆ.
ಶಿವ ನಯನದಿಂದ ಜನಿಸಿದ್ದರಿಂದ ಈ ಜನಾಂಗವನ್ನು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಮಹರ್ಷಿಯ ಸೇವೆಯಿಂದ ತೃಪ್ತನಾದ ಶಿವನು ಸಂಗೀತ ಸಾಧನಗಳನ್ನು ನೀಡಿದನು. ಸವಿತಾ ಮಹರ್ಷಿಯು ನಾಲ್ಕು ವೇದಗಳಲ್ಲಿ ಒಂದಾದ ಸಾಮವೇದವನ್ನು (ಸಾಮ ಎಂದರೆ ಸಂಗೀತಾ ಹಾಗೂ ವೇದ ಎಂದರೆ ಜ್ಞಾನ) ರಚಿಸಿದರು.
ಸವಿತಾ ಮಹರ್ಷಿ ಸಮುದಾಯ ಸಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಡವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಮೂಢನಂಬಿಕೆಗಳನ್ನು ದೂರವಿಟ್ಟ ಮಹರ್ಷಿಗಳ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬೆಳಗಾವಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಶೇಖರ ರೆಡ್ಡಿ, ಅಪರ ಜಿಲ್ಲಾಧಿಕಾರಿಗಳಾದ ವಿಜಯ ಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ದಲಿತ ಸಮಾಜದ ಮುಖಂಡರಾದ ಮಲ್ಲೇಶ ಚೌಗಲಾ, ಸಮಾಜದ ಮುಖಂಡರಾದ ಗೋಪಿ ಕಡಪಾ, ಗೀತಾ ರೆಡ್ಡಿ, ಆರತಿ ರೆಡ್ಡಿ ಹಾಗೂ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.