Belagavi News In Kannada | News Belgaum

ಇಂದಿರಾ ಕ್ಯಾಂಟೀನ್ ಅಷ್ಟೆ ಅಲ್ಲ.. ಗ್ರಾಮೀಣ ಪ್ರದೇಶದಲ್ಲಿ ಕೆಫೆ ಸಂಜೀವಿನಿ ಘೋಷಿಸಿದ ಸಿಎಂ ಸಿದ್ದರಾಮಯ್ಯ…

ಬೆಳಗಾವಿ: ಈ ಭಾರಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಇಂದು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 2023-24ನೇ ಸಾಲಿನ ಬಜೆಟ್‌ನಲ್ಲಿ ಬೆಳಗಾವಿಗೆ ವಿಶೇಷ ಕೊಡುಗೆ ನೀಡಿದ್ದಾರೆ.

ಹೌದು…ಬೆಳಗಾವಿ ನಗರದಲ್ಲಿ 4.5 ಕಿಮೀ  ಉದ್ದದ ಮೇಲ್ಸೇತುವೆ ಮಾಡಬೇಕೆಂಬ ಸಚಿವ ಸತೀಶ್‌ ಜಾರಕಿಹೊಳಿ ಅವರು ಬಹುದಿನಗಳ ಕನಸು ಇಂದು ಈಡೇರಿದಂತಾಗಿದೆ. ಬೆಳಗಾವಿ ನಗರ ಪರಿಮಿತಿಯಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರ ದಟ್ಟಣೆ ನಿವಾರಿಸಲು 450 ಕೋಟಿ ರೂ. ವೆಚ್ಚದಲ್ಲಿ 4.50 ಕಿ.ಮೀ.ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡುವ ಮೂಲಕ ಬೆಳಗಾವಿಗೆ ಬಂಪರ್‌ ಕೊಡುಗೆ ನೀಡಿದ್ದಾರೆ.


ಗೋಕಾಕ-ಸವದತ್ತಿ ಕ್ಷೇತ್ರಕ್ಕೆ ಬಂಪರ್‌ ಕೊಡುಗೆ:  ಗೋಕಾಕ  ಫಾಲ್ಸ್‌ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಬೇಕೆಂದು ಅಲ್ಲಿನ ಜನರ  ಬಹುದಿನಗಳ ಬೇಡಿಕೆಯಾಗಿತ್ತು. ಸಚಿವ ಸತೀಶ್‌ ಜಾರಕಿಹೊಳಿ ಅವರ ಹೆಚ್ಚು ಮುತುವರ್ಜಿ ವಹಿಸಿದ್ದ ಪರಿನಾಮ ಇಂದು ಗೋಕಾಕ್ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿ ಮಾಡುವ ಗುರಿಯನ್ನು  ಬಜೆಟ್‌ ನಲ್ಲಿ ಪ್ರಕಟಿಸಲಾಗಿದೆ.  ಅಲ್ಲದೇ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಸೇರಿದಂತೆ ವಿವಿಧ ರಾಜ್ಯಗಳ ಜನರ ಪಾಲಿನ ಆರಾಧ್ಯ ದೈವವಾದ ಸವದತ್ತಿ ಯಲ್ಲಮ್ಮನ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರವು ಅಭಿವೃದ್ಧಿ ಮಂಡಳಿ ರಚಿಸಿ ಬಜೆಟ್ ನಲ್ಲಿ ಘೋಷಿಸಿದ್ದಾರೆ.


ಸವದತ್ತಿ ಯಲ್ಲಮ್ಮನ ಕ್ಷೇತ್ರವನ್ನು ಪ್ರಮುಖ ಪ್ರವಾಸೋದ್ಯಮ ಕೇಂದ್ರವನ್ನಾಗಿಸುವಂತೆ ಬಹುದಿನಗಳಿಂದ ಈ ಭಾಗದ ಜನತೆ  ಜಾರಕಿಹೊಳಿ ವಾರಿಗೆ ಬೇಡಿಕೆ ಸಲ್ಲಿಸುತ್ತಿದ್ದರು. ಈಗ ಅದು ಕೂಡಾ ಸಾಕಾರಗೊಂಡಿದೆ. ಯಲ್ಲಮ್ಮನ ಕ್ಷೇತ್ರದ ಜೊತೆಗೆ ಆ ಭಾಗದ ಅನೇಕ ಸ್ಥಳಗಳನ್ನು ಅಭಿವೃದ್ದಿಗೊಳಿಸಿ ಪ್ರವಾಸಿ ತಾಣಗಳನ್ನಾಗಿ ಮಾರ್ಪಡಿಸಲು ಪ್ರಾಧಿಕಾರವು ಕ್ರಮ ಕೈಕೊಳ್ಳಲಿದೆ.  ಅಲ್ಲದೇ ಈಗಾಗಲೇ ಅನುಮೋದನೆಗೊಂಡಿರುವ ಬೆಳಗಾವಿಯಲ್ಲಿ ವಿಜ್ಞಾನ ಕೇಂದ್ರ/ತಾರಾಲಯಗಳನ್ನು ಕಾರ್ಯಾರಂಭಗೊಳಿಸಲು ಘೋಷಿಸಲಾಗಿದೆ. ಅಲ್ಲದೇ ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ದಾಂಡೇಲಿ ಮತ್ತು ಕಬಿನಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಇಂಟರ್‌ಪ್ರಿಟೇಷನ್‌ ಸೆಂಟರ್‌ಗಳನ್ನು ಜೆ.ಎಲ್.ಆರ್‌ ಸಂಸ್ಥೆಯ ಮೂಲಕ ನಿರ್ಮಾಣ ಮಾಡಲಾಗುವುದು ಎಂದು ಹೇಳಲಾಗಿದೆ.


ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿ ಯೋಜನೆ ಘೋಷಣೆ:  ಅಥಣಿ ತಾಲೂಕಿನ ಮಹತ್ವಾಕಾಂಕ್ಷಿ ಬೃಹತ್ ನೀರಾವರಿ ಯೋಜನೆಯಾದ ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿ ಯೋಜನೆಯನ್ನು ಕೈಗೊಳ್ಳಲು ಆಯ-ವ್ಯಯ ಪತ್ರದಲ್ಲಿ ಮಂಡಿಸಿದ್ದು, ಈ ಭಾಗದ ರೈತರಲ್ಲಿ ಸಂಭ್ರಮವನ್ನುಂಟು ಮಾಡಿದೆ. ಅಲ್ಲದೇ ತಾಲೂಕು ಆಸ್ಪತ್ರೆಗಳಿಲ್ಲದ ಆನೇಕಲ್, ನೆಲಮಂಗಲ, ಹೊಸಕೋಟೆ, ಶೃಂಗೇರಿ, ಖಾನಾಪುರ, ಶಿರಹಟ್ಟಿ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ಪ್ರಸಕ್ತ ಸಾಲಿನಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳನ್ನು 280 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ. ಇನ್ನು  ಸಚಿವ ಸತೀಶ ಜಾರಕಿಹೊಳಿ ಅವರ ಖಾತೆಯಾದ  ಲೋಕೋಪಯೋಗಿ ಇಲಾಖೆಗೆ  10,424 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.  ಒಟ್ಟಾರೆ ಸಚಿವ ಸತೀಶ್‌ ಜಾರಕಿಹೊಳಿ ವಿಶೇಷ ಪ್ರಯತ್ನದಿಂದ ಬೆಳಗಾವಿಗೆ ಬಂಪರ್‌ ಕೊಡುಗೆ ನೀಡಿರುವುದು ಜಿಲ್ಲೆಯ ಜನರಿಗೆ ಹರ್ಷವುಂಟು ಮಾಡಿದೆ.

ಬೆಳಗಾವಿ ಸೇರಿದಂತೆ 11 ನಗರಗಳಲ್ಲಿ ರಾತ್ರಿ 1 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದ ಸಿಎಂ ಸಿದ್ದರಾಮಯ್ಯ

ಬೆಳಗಾವಿ  ಸೇರಿದಂತೆ 11 ನಗರಗಳಲ್ಲಿ ರಾತ್ರಿ 1 ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಈ ನಗರಗಳಲ್ಲಿ ರಾತ್ರಿ 11 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡುವುದಾಗಿ ಬಜೆಟ್​​​​ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ವಾಣಿಜ್ಯ ಮತ್ತು ವ್ಯಾಪಾರದ ಹಿತದೃಷ್ಟಿಯಿಂದ ರಾತ್ರಿಯ ವೇಳೆ ವ್ಯಾಪಾರ ವಹಿವಾಟಿನ ಸಮಯವನ್ನು ಹೆಚ್ಚಿಸಲಾಗಿದ್ದು, ಬೆಳಗಿನ ಜಾವ 1:00 ಗಂಟೆಯವರೆಗೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಯಾವ್ಯಾವ ನಗರಗಳು? ಬಿಬಿಎಂಪಿ ಸೇರಿ ರಾಜ್ಯದಲ್ಲಿ ಬೆಳಗಾವಿ,ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ತುಮಕೂರು, ವಿಜಯಪುರ ಮಹಾನಗರಪಾಲಿಕೆಗಳಿದ್ದು, ಈ ಎಲ್ಲಾ ಮಹಾನಗರ ವ್ಯಾಪ್ತಿಗಳಲ್ಲಿ ಇನ್ನೂ ಮುಂದೆ ರಾತ್ರಿ 1:00 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಯಲಿದೆ.
ಬಡಜನರಿಗೆ ಉಚಿತ ಪ್ರಯೋಗಾಲಯ: ಬೆಂಗಳೂರಿನ ಬಡಜನರಿಗೆ ಉಚಿತ ಪ್ರಯೋಗಾಲಯ ಸೇವೆ ಒದಗಿಸಲಾಗುವುದು. ಇದಕ್ಕೆ 430 ಪ್ರಯೋಗಾಲಯಗಳ ಸ್ಥಾಪನೆಗೆ 20 ಕೋಟಿ ಮೀಸಲು ಇಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್​​​​ನಲ್ಲಿ ಘೋಷಣೆ ಮಾಡಿದರು. ವೈದ್ಯಕೀಯ ಕಾಲೇಜುಗಳ ನಿರ್ಮಾಣ, ಉಪಕರಣ ಖರೀದಿಗೆ 400 ಕೋಟಿ ಅನುದಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು…

ಮಹಿಳೆಯರೇ ನಡೆಸುವ 50 ಕೆಫೆ ಸಂಜೀವಿನಿ ಹೋಟೆಲ್​ಗಳ ಸ್ಥಾಪನೆ

ಬೆಂಗಳೂರು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆಹಾರ ನೀಡಲು ‘ಕೆಫೆ ಸಂಜೀವಿನಿ’ ಯೋಜನೆ ಜಾರಿ ಮಾಡೋದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಕೆಫೆ ಸಂಜೀವಿನಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಹೋಟೆಲ್​ಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಆಯ್ದ ಗ್ರಾಮೀಣ ಪ್ರದೇಶದಲ್ಲಿ 50 ಕೆಫೆ ಸಂಜೀವಿನಿ ಹೋಟೆಲ್ ತೆರೆಯಲು ನಿರ್ಧರಿಸಲಾಗಿದೆ. ಇದನ್ನು ಸಂಪೂರ್ಣವಾಗಿ ಮಹಿಳೆಯರೇ ನಡೆಸಿಕೊಂಡು ಹೋಗಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆಹಾರ ಸಿಗುವ ಉದ್ದೇಶದಿಂದ ಈ ಯೋಜನೆ ಆರಂಭವಾಗುತ್ತಿದೆ.

ಇದರ ಜೊತೆಗೆ ವಿದ್ಯಾರ್ಥಿನಿ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ 5 ನಗರಗಳಲ್ಲಿ ಹಾಸ್ಟೆಲ್​ಗಳ ನಿರ್ಮಾಣ ಮಾಡುವ ಉದ್ದೇಶವನ್ನೂ ಸರ್ಕಾರ ಇಟ್ಟುಕೊಂಡಿದೆ. ಕೋಳಿ, ಕುರಿ, ಮೇಕೆ ಸಾಕಾಣೆ ಮತ್ತು ಮಾರುಕಟ್ಟೆಗೆ 100 ಕೋಟಿ ರೂಪಾಯಿ ಹಣವನ್ನು ಸಿದ್ದರಾಮಯ್ಯ ಮೀಸಲಿಟ್ಟಿದ್ದಾರೆ.