Belagavi News In Kannada | News Belgaum

ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ವಿಷ ಸೇವಿಸಿದ ಮಹಿಳೆ

ಬೆಳಗಾವಿ: ಸಾಲ ಮರುಪಾವತಿ ವಿಚಾರದಲ್ಲಿ ಖಾಸಗಿ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡ್ತಿದ್ದಾರೆಂದು ಆರೋಪಿಸಿ  ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೈಲಹೊಂಗಲ ತಾಲೂಕಿನ ಬೈರನಟ್ಟಿ ಗ್ರಾಮದಲ್ಲಿ ನಡೆದಿದೆ.

ಹಸು ಕೊಂಡುಕ್ಕೊಳ್ಳಲು ಮಹಿಳೆಯ ಮಗ 2 ಲಕ್ಷ ರೂ. ಸಾಲ ತೆಗೆದುಕೊಂಡಿದ್ದ. ಯುವಕ 2 ಲಕ್ಷ ರೂ. ಸಾಲಕ್ಕೆ ಪ್ರತಿ ತಿಂಗಳು ಹಣ ತುಂಬುತ್ತಾ ಬಂದಿದ್ದ. ಜಮಖಂಡಿಯಲ್ಲಿರುವ ಹೋಟೆಲ್ ಒಂದರಲ್ಲಿ ಕೆಲಸ ಮಾಡಿ ಸಾಲ ತೀರಿಸುತ್ತಿದ್ದ. ಆದರೆ ಈ ತಿಂಗಳು 15 ದಿನ ತಡವಾಗಿದ್ದಕ್ಕೆ ಖಾಸಗಿ ​ಬ್ಯಾಂಕ್ ಸಿಬ್ಬಂದಿ  ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ನನ್ನ ಮಗ ಬಂದು ನಿಮ್ಮ ದುಡ್ಡು ಕಟ್ಟುತ್ತಾನೆ ಬಿಡಿ ಎಂದು ಯುವಕನ ತಾಯಿ ಅಂಗಲಾಚಿಕೊಂಡಿದ್ದಾಳೆ.  ಅಲ್ಲದೇ  ಮನೆ ಬಿಟ್ಟು ಹೊರಗೆ ಬಾ, ನಾವು ಮನೆಗೆ ಕೀಲಿ ಹಾಕುತ್ತೇವೆ ಎಂದು  ಯುವಕನ ತಾಯಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಆಗ ಮರ್ಯಾದೆ ವಿಚಾರವಾಗಿ ನಾನು ವಿಷ ಸೇವಿಸುತ್ತೇನೆ ಎಂದಿದ್ದಾಳೆ. ಅದಕ್ಕೆ ಸಿಬ್ಬಂದಿ ನೀನು ವಿಷವನ್ನಾದರೂ ಕುಡಿದು ಸಾಯಿ. ವಿಷ ಕುಡಿದ ಮೇಲಾದರೂ ನಿನ್ನ ಮಗ ಬರುತ್ತಾನೆ ಎಂದಿದ್ದಾರೆ. ಇದರಿಂದ ಮತ್ತಷ್ಟು ದುಃಖಿತಳಾದ ಮಹಿಳೆ ವಿಷವನ್ನು ಸೇವಿಸಿದ್ದಾಳೆ. ಅಲ್ಲಿದ್ದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿರುವ ಅವರು, ಚೇತರಿಸಿಕೊಳ್ತಿದ್ದಾರೆ. ಬೈಲಹೊಂಗಲ ತಾಲೂಕಿನ ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.//////