Belagavi News In Kannada | News Belgaum

ಬೆಳಗಾವಿ-ಗೋವಾ ಸುಗಮ ಸಂಚಾರಕ್ಕೆ ಸಚಿವ ಸತೀಶ್ ಜಾರಕಿಹೊಳಿ ತುರ್ತು ಕ್ರಮ

 

ಬೆಳಗಾವಿ: ಬೆಳಗಾವಿ- ಚೋರ್ಲಾ -ಗೋವಾ ರಸ್ತೆ ಹದಗೆಟ್ಟಿದ್ದು, ಈ ರಸ್ತೆಯ ಪರಿಸ್ಥಿತಿ ಖುದ್ದಾಗಿ ಪರಿಶೀಲಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ರಸ್ತೆ ದುರಸ್ಥಿಗೆ ತುರ್ತು ಕ್ರಮ ಕೈಗೊಂಡಿದ್ದಾರೆ.

ಹೌದು.. ನಾಳೆ 1-00 ಗಂಟೆಗೆ ಕಣಕುಂಬಿ ಹತ್ತಿರ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಚೋರ್ಲಾ ರಸ್ತೆಯ ದುರಸ್ಥಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

ಸಂಪೂರ್ಣವಾಗಿ ಹದಗೆಟ್ಟು ಹೋಗಿರುವ ಬೆಳಗಾವಿ- ಗೋವಾ ರಸ್ತೆಗೆ ಈಗ ದುರಸ್ಥಿ ಭಾಗ್ಯ ಸಿಕ್ಕಿದೆ. ಗೋವಾಕ್ಕೆ ಹೋಗುವ ಪ್ರಯಾಣಿಕರು ಇನ್ಮುಂದೆ ಚಿಂತೆ ಮಾಡಬೇಕಿಲ್ಲ.

ಬೆಳಗಾವಿ – ಚೋರ್ಲಾ ಮಾರ್ಗವಾಗಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಬೆಳಗಾವಿ – ರಾಮನಗರ – ಗೋವಾ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಬೆಳಗಾವಿಯಿಂದ ಗೋವಾಗೆ ಹೋಗುವ ಬಹುತೇಕ ಎಲ್ಲ ವಾಹನಗಳು ಚೋರ್ಲಾ ಮಾರ್ಗದಲ್ಲಿ ಓಡಾಡುತ್ತಿವೆ. ಸಚಿವ ಸತೀಶ್ ಜಾರಕಿಹೊಳಿ ಅವರ ಸಾಮಾಜಿಕ ಕಾಳಜಿ ಮತ್ತು ಇಚ್ಛಾಶಕ್ತಿಯ ಪರಿಣಾಮ ಹದಗೆಟ್ಟು ಹೋಗಿರುವ ಮುಖ್ಯ ರಸ್ತೆ ಈಗ ರಿಪೇರಿ ಆಗುತ್ತಿರುವುದು ಸಂತಸದ ಸಂಗತಿಯಾಗಿದೆ.

ಗೋವಾದಿಂದ ರಣಕುಂಡಿ ಕ್ರಾಸ್‌ ವರೆಗಿನ ಈ ರಸ್ತೆ 43.ಕಿ.ಮೀಟರ್‌ ಉದ್ದವಾಗಿದ್ದು, 58.90 ಕೋಟಿ ರೂಪಾಯಿ ವೆಚ್ಚದಲ್ಲಿ ಸುಧಾರಣೆ ಕಾರ್ಯ ಕೈಗೊಳ್ಳುತ್ತಿದ್ದು, 11 ತಿಂಗಳ ಅವಧಿಯಲ್ಲೇ ರಸ್ತೆ ದುರಸ್ತಿ ಕಾರ್ಯ ಮುಗಿಸುವ ಗುರಿ ಹೊಂದಲಾಗಿದೆ. ನಾಳಿನ ಕಾರ್ಯಕ್ರಮದಲ್ಲಿ ಮುಖ್ಯ ಇಂಜಿನಿಯರ್‌ ಸಿ. ಮಂಜಪ್ಪ, ಎಜುಕೆಟಿವ್‌ ಇಂಜಿನಿಯರ್‌ ಪಿ. ರಾಜೇಂದ್ರ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿರುವರು.